ಮಡಿಕೇರಿ: ‘ಅ. 17ರಂದು ನಡೆಯಲಿರುವ ಕೊಡಗಿನ ಕುಲದೇವತೆ, ತೀರ್ಥರೂಪಿಣಿ ಕಾವೇರಿ ಮಾತೆಯ ತೀರ್ಥೋದ್ಭವ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ ಅವರ ನೇತೃತ್ವದಲ್ಲಿ ತುರ್ತಾಗಿ ಕರೆದು, ಭಕ್ತರ ನಂಬಿಕೆ, ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು‘ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.
‘ಈ ಕುರಿತು ಮಂಗಳವಾರ ಭಾಗಮಂಡಲದಲ್ಲಿ ನಡೆದ ಪೂರ್ವಭಾವಿ ಸಭೆ ಅಪೂರ್ಣಗೊಂಡಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಪ್ರಮುಖರು ಅರ್ಧದಲ್ಲೇ ಎದ್ದು ಹೋದ ವಿಚಾರವನ್ನು ಹಲವು ಸ್ನೇಹಿತರು ಹಾಗೂ ಭಕ್ತಾದಿಗಳು ದೂರವಾಣಿ ಮೂಲಕ ಗಮನಕ್ಕೆ ತಂದಿದ್ದಾರೆ. ಪದೇ ಪದೇ ಕೊಡಗಿನ ಜನತೆಯ ಹಾಗೂ ಭಕ್ತಾದಿಗಳ ಕೋರಿಕೆಯನ್ನು, ಅವರ ಭಾವನೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ ಹಾಗೂ ಅಕ್ಷಮ್ಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ರಾಜ್ಯ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ತುರ್ತು ಸಭೆ ಕರೆದು ಭಕ್ತಾದಿಗಳ ಭಾವನೆಗಳಿಗೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತೆ ಹಾಗೂ ಯಾವುದೇ ಗೊಂದಲಗಳಿಗೆ ಎಡೆ ಮಾಡಿ ಕೊಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಜತೆಗೆ, ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸುಸೂತ್ರವಾಗಿ ಜಗನ್ಮಾತೆ ಕಾವೇರಿ ತಾಯಿಯ ತೀರ್ಥೋದ್ಭವ ದರ್ಶನಕ್ಕೆ ಅನುವು ಮಾಡಿಕೊಡುವಂತಹ ಕ್ರಮ ಕೈಗೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.