ಮಡಿಕೇರಿ: ಕತ್ತಲು ಮುಗಿದು ಬೆಳಗು ಮೂಡಿ, ಕವಿದಿದ್ದ ಅಪಾರ ಮಂಜಿನ ರಾಶಿಯ ನಡುವೆ ಸೂರ್ಯಕಿರಣಗಳು ಹೊರಬರಲು ಚಡಪಡಿಸುತ್ತಿದ್ದಂತೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವವಾಯಿತೆಂದು ಅರ್ಚಕ ವೃಂದ ತೀರ್ಥವನ್ನು ಭಕ್ತರ ಮೇಲೆ ಸಿಂಪಡಿಸಿದರು. ಅದುವರೆಗೂ ಹಾಡು ಹೇಳುತ್ತಾ ಇಂತಹ ಪವಿತ್ರ ಗಳಿಗೆಗಾಗಿ ಕಾದು ನಿಂತಿದ್ದ ಅಪಾರ ಭಕ್ತವೃಂದ ಜಯಘೋಷ ಮೊಳಗಿಸಿ, ಕೈಮುಗಿದರು.
ಇದಕ್ಕೂ ಮುನ್ನವೇ ಒಂದೆಡೆ ಕಾವೇರಿ ತೀರ್ಥರೂಪಿಣಿಯಾಗಿ ಹೊರಹೊಮ್ಮುವುದನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಬ್ರಹ್ಮಕುಂಡಿಕೆಯ ಸುತ್ತ ಸೇರಿದ್ದರು. ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿಕೊಳ್ಳುವುದಕ್ಕೂ ಮುಗಿಬಿದ್ದರು. ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೊಡ, ಕ್ಯಾನ್‌ಗಳನ್ನಿಡಿದು ಕಲ್ಯಾಣಿಗೆ ಧುಮುಕಿ, ಬ್ರಹ್ಮಕುಂಡಿಕೆಯತ್ತ ದೃಷ್ಟಿನೆಟ್ಟರು. ಈ ಅವಕಾಶ ಸಿಗದ ಅಪಾರ ಜನಸ್ತೋಮ ಬೃಹತ್ ಪರದೆ ಮೇಲೆ ಮೂಡಿ ಬರುತ್ತಿದ್ದ ಬ್ರಹ್ಮಕುಂಡಿಕೆಯ ದೃಶ್ಯಾವಳಿಗಳನ್ನು ಕಾತರ ಕಣ್ಣುಗಳಿಂದ ವೀಕ್ಷಿಸುತ್ತಿತ್ತು.
ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸಾಂಪ್ರದಾಯಿಕ ದಿರಿಸಿನಲ್ಲಿ ತಳಿಯಕ್ಕಿ ಬೊಳಕ್ ಹಿಡಿದು ಕಲ್ಯಾಣಿಯ ಪಕ್ಕದಲ್ಲೇ ಕುಳಿತು ತೀರ್ಥೋದ್ಭವದ ಅಮೃತ ಗಳಿಗೆಗಾಗಿ ಕಾದು ಕುಳಿತಿದ್ದರು.
ಇವೆಲ್ಲದರ ಮಧ್ಯೆ ಬೆಳಿಗ್ಗೆ 7.40ಕ್ಕೆ ಅರ್ಚಕ ವೃಂದ ತೀರ್ಥಪ್ರೋಕ್ಷಣೆ ಮಾಡಿ ತೀರ್ಥೋದ್ಭವವಾಯಿತು ಎಂದು ಘೋಷಿಸಿತು. ಇದು 7.41ಕ್ಕೆ ಆಯಿತು ಎಂದು ಗಡಿಯಾರವನ್ನು ನೋಡಿಕೊಳ್ಳುತ್ತಲೇ ನಿಂತಿದ್ದ ಕೆಲವರು ವಾದ ಮಂಡಿಸಿದರು. ಆದರೆ, ತಲಕಾವೇರಿ ದೇಗುಲದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು, ‘ಮೊದಲೆ ಹೇಳಿದಂತೆ ನಿಗದಿತ ಸಮಯಕ್ಕೆ ತೀರ್ಥೋದ್ಭವವಾಗಿದೆ’ ಎಂದು ಹೇಳುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆ ಎಳೆದರು.
ತೀರ್ಥೋದ್ಭವದ ನಂತರ ಅಪಾರ ಜನಸ್ತೋಮ ಬ್ರಹ್ಮಕುಂಡಿಕೆಯಿಂದ ತೀರ್ಥವನ್ನು ಕೊಡ ಹಾಗೂ ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಸಂಭ್ರಮದಿಂದ ಮನೆಗಳತ್ತ ಹೆಜ್ಜೆ ಹಾಕಿದರು. ಬೇರೆ ಊರುಗಳಲ್ಲಿ ತೀರ್ಥ ಹಂಚಿಕೆ ಮಾಡುವ ಸ್ವಯಂಸೇವಾ ಸಂಘಗಗಳು ದೊಡ್ಡ ದೊಡ್ಡ ಬ್ಯಾರಲ್‌ಗಳಲ್ಲಿ ತೀರ್ಥವನ್ನು ಸರದಿಯ ಪ್ರಕಾರ ತುಂಬಿಸಿಕೊಂಡರು.
ಬರಿಗಾಲಿನಲ್ಲಿ ಬೆಟ್ಟ ಹತ್ತಿದ ಭಕ್ತರು
ಬುಧವಾರ ತಡರಾತ್ರಿಯಿಂದಲೇ ಅಪಾರ ಜನಸ್ತೋಮ ಬರಿಗಾಲಿನಲ್ಲೇ ಬೆಟ್ಟ ಹತ್ತಿದರು. ಮಹಿಳೆಯರು ತಳಿಯಕ್ಕಿ ಬೊಳಕ್ ಹಿಡಿದು ಸಾಗಿದರು. ಪುರುಷರು ದುಡಿ ಬಾರಿಸುತ್ತ ಮಹಿಳೆಯರು ಕಾವೇರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಬೆಟ್ಟ ಹತ್ತಿ ದೇಗುಲ ತಲುಪುವವರೆಗೂ ಬೆಳಕು ಹರಿದಿತ್ತು.
ತೀರ್ಥೋದ್ಭವದ ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಪ್ರಶಾಂತ್ ಆಚಾರ್, ಟಿ.ಎಸ್.ಗುರುರಾಜ್, ಟಿ.ಎ.ಗುರುರಾಜ್, ರವಿರಾಜ್, ವಿಠಲ ಆಚಾರ್, ಸುಧೀರ್ ಆಚಾರ್ ನೆರವೇರಿಸಿದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಲೋಕೇಶ್ ಸಾಗರ್ ಅವರ ನೇತೃತ್ವದಲ್ಲಿ ‘ಭಕ್ತಿಗೀತೆ ಗಾಯನ’ ಕಾರ್ಯಕ್ರಮವು ನಡೆಯಿತು. ಎಂ.ಬಿ.ದೇವಯ್ಯ ಅವರ ನೇತೃತ್ವದ ತಂಡದವರು ದುಡಿ ನುಡಿಸಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಭಾಗವಹಿಸಿದ್ದರು.
ಸಂಚಾರ ದಟ್ಟಣೆಯಿಂದ ಬಸವಳಿದ ಭಕ್ತರು
ಭಾಗಮಂಡಲದಿಂದ ತಲಕಾವೇರಿಯವರೆಗೆ ಅಪಾರ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಯಸ್ಸಾದವರು ಅಂಗವಿಕಲರು ವಿವಿಧ ಕಾಯಿಲೆಗಳಿಂದ ಬಳಲುವ ಜನರು ವಾಹನಗಳಲ್ಲಿದ್ದು ಕಾವೇರಿಯ ದರ್ಶನಕ್ಕೆ ಕಾತರರಾಗಿದ್ದರು. ಆದರೆ ಗಂಟೆಗಟ್ಟಲೆ ಸೃಷ್ಟಿಯಾದ ಸಂಚಾರ ದಟ್ಟಣೆಯಿಂದ ಅವರೆಲ್ಲ ಬಸವಳಿದರು.
ಅಚ್ಚುಕಟ್ಟಾದ ಗ್ಯಾಲರಿ ವ್ಯವಸ್ಥೆ
ಕಳೆದ ಬಾರಿಗಿಂತ ಈ ಬಾರಿ ಪೊಲೀಸರು ಅಚ್ಚುಕಟ್ಟಾದ ವ್ಯವಸ್ಥೆಯನ್ನು ತಲಕಾವೇರಿಯಲ್ಲಿ ಕಲ್ಪಿಸಿದ್ದರು. ಗಣ್ಯರ ಗ್ಯಾಲರಿ ಪ್ರತ್ಯೇಕವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬ್ಯಾರಿಕೇಡ್‌ಗಳನ್ನು ದಾಟಿ ಕಲ್ಯಾಣಿ ಪ್ರವೇಶಿಸುವುದನ್ನು ಅವರು ತಡೆಯುವಲ್ಲಿ ಸಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.