ADVERTISEMENT

ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ; ರಾಜ್ಯಕ್ಕೆ ಮಾದರಿಯಾಗಲಿ

ಜಾತ್ರಾ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 16:35 IST
Last Updated 28 ಸೆಪ್ಟೆಂಬರ್ 2023, 16:35 IST
ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.
ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.   

ನಾಪೋಕ್ಲು: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸಬೇಕು. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಕೈಗೊಳ್ಳಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.

ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಮಡಿಕೇರಿಯಿಂದ ತಲಕಾವೇರಿಯವರೆಗೆ, ನಾಪೋಕ್ಲುವಿನಿಂದ ಭಾಗಮಂಡಲ ಹಾಗೆಯೇ ಭಾಗಮಂಡಲ-ಕರಿಕೆ ರಸ್ತೆ ಸರಿಪಡಿಸಬೇಕು. ಗಿಡಗಂಟಿಗಳನ್ನು ಕಡಿಯಬೇಕು. ಜೊತೆಗೆ, ರಸ್ತೆ ಬದಿ ಬೆಳೆದಿರುವ ಮರದ ಕೊಂಬೆಗಳನ್ನು ಕಡಿಯಬೇಕು ಎಂದು ಹೇಳಿದರು.

ನಿರಂತರವಾಗಿ ವಿದ್ಯುತ್ ಪೂರೈಸಲು ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು. ಅಗತ್ಯ ದೀಪದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಆಂಬುಲೆನ್ಸ್, ವೈದ್ಯರ ನಿಯೋಜನೆ, ಭದ್ರತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದರು.

ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗದಂತೆ ಪೊಲೀಸರು ಗಮನಹರಿಸಬೇಕು. ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಿ, ಎಲ್ಲರಿಗೂ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸೂರ್ತಲೆ ಕಾಶಿ, ‘ತಲಕಾವೇರಿಯ ಕುಂಡಿಕೆ ಬಳಿ ಕುಂಕುಮಾರ್ಚನೆಗೆ ಅವಕಾಶ ಮಾಡಬೇಕು’ ಎಂದು ಕೋರಿದರೆ, ಅಮೆ ಪಾಲಾಕ್ಷ ಅವರು ‘ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಅವಕಾಶ ಮಾಡಬೇಕು. ಪೂಜೆ ವಿಧಿ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ಎಂ.ಬಿ.ದೇವಯ್ಯ ಮಾತನಾಡಿ, ‘ತಲಕಾವೇರಿ ಜಾತ್ರಾ ಮಹೋತ್ಸವ ನಂತರ ಅಷ್ಟಮಂಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಪರಿಹರಿಸಬೇಕು. ‘ದುಡಿ’ ನುಡಿಸುವವರಿಗೆ ತಲಕಾವೇರಿಗೆ ತೆರಳಲು ವಾಹನ ಪಾಸ್‍ಗೆ ವ್ಯವಸ್ಥೆ ಮಾಡಬೇಕು’ ಎಂದರು.

ಕುದುಕುಳಿ ಭರತ್ ಮಾತನಾಡಿ, ‘ತಣ್ಣಿಮಾನಿ-ತಲಕಾವೇರಿ ರಸ್ತೆಯನ್ನು ಸರಿಪಡಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು’ ಎಂದರೆ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ‘ಜಾತ್ರಾ ದಿನದಂದು ಭಾಗಮಂಡಲದಿಂದ ತಲಕಾವೇರಿಯವರೆಗೆ ಖಾಸಗಿ ಬಸ್‍ಗಳ ಓಡಾಟಕ್ಕೂ ಅವಕಾಶ ಮಾಡಬೇಕು’ ಎಂದು ಮನವಿ ಮಾಡಿದರು.

ಅಖಿಲ ಕೊಡವ ಸಮಾಜದ ಯೂತ್‍ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ‘ಪವಿತ್ರ ತೀರ್ಥೋದ್ಭವದ ದಿನ ತಾಂತ್ರಿಕ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಇದರಿಂದ ಕೊಡಗಿನ ಜನರಿಗೆ ತೊಂದರೆಯಾಗಿದೆ. ಇಡೀ ರಾಜ್ಯದಲ್ಲೇ ರಜೆ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುವುದು. ತಣ್ಣಿಮಾನಿ-ತಲಕಾವೇರಿ ರಸ್ತೆ ದುಸ್ತರವಾಗಿರುವುದರಿಂದ ಕೋರಂಗಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರಿಶೀಲಿಸಲಾಗುವುದು.  ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ. ‘ತೀರ್ಥ ತೆಗೆದುಕೊಂಡು ಹೋಗುವ ವಾಹನಗಳಿಗೆ ಅವಕಾಶ ಮಾಡಬೇಕು. ಯಾವುದೇ ರೀತಿ ಗೊಂದಲಗಳಿಗೆ ಅವಕಾಶ ಮಾಡಬಾರದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಹೆಚ್ಚುವರಿ ಬಸ್‍ಗಳನ್ನು ಕಲ್ಪಿಸಿ, ಹೆಚ್ಚುವರಿ ಚಾಲಕರನ್ನು ನಿಯೋಜಿಸಬೇಕು.ತಜ್ಞ ವೈದ್ಯರನ್ನು ನಿಯೋಜಿಸಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಮಾತನಾಡಿ, ‘ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು ಪೂರೈಕೆಗೆ ಕ್ರಮ, ಚರಂಡಿ ಸರಿಪಡಿಸಲಾಗಿದೆ’ ಎಂದರು.

ಕರಿಕೆಯ ರಮಾನಾಥ, ಯುಕೋ ಅಧ್ಯಕ್ಷ ಮಂಜು ಚಿಣ್ಣಪ್ಪ, ತೆನ್ನಿರಾ ಮೈನಾ, ಬಿದ್ದಾಟಂಡ ಎಸ್.ತಮ್ಮಯ್ಯ, ಮನು ಮುತ್ತಪ್ಪ, ಸುನಿಲ್ ಪತ್ರಾವೋ ಹಲವು ಸಲಹೆಗಳನ್ನು ನೀಡಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಾಗಮಂಡಲ ದೇವಾಲಯದ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಡಿವೈಎಸ್‍ಪಿ ಎಂ.ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.