ಮಡಿಕೇರಿ: ಹುಲ್ಲಿನ ಗುಡಿಸಲಿನಲ್ಲಿ 1924ರಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ಮಾಯಮುಡಿ ಶಾಲೆ ದಕ್ಷಿಣ ಕೊಡಗಿನ ಪ್ರಮುಖ ಶಿಕ್ಷಣ ಕೇಂದ್ರಗಳಲ್ಲಿ ಒಂದು. ಹಲವಾರು ಮಂದಿ ಪ್ರತಿಭಾನ್ವಿತರನ್ನು ಸಮಾಜಕ್ಕೆ ಕೊಡುಗೆ ನೀಡಿದ ಹಿರಿಮೆ ಈ ಶಾಲೆಯದ್ದು. ಇಂತಹ ಅಪರೂಪದ ಶಾಲೆಯಲ್ಲೀಗ ಶತಮಾನೋತ್ಸವ ಸಂಭ್ರಮ.
ಈ ಶಾಲೆಯಲ್ಲಿ ಕಲಿತ ಕೆ.ಜೆ.ಜಾರ್ಜ್ ಇಂದು ಇಂಧನ ಸಚಿವರಾಗಿದ್ದಾರೆ. ರಾಜ್ಯ ರಾಜಕಾರಣದಲ್ಲೇ ಹೆಗ್ಗುರುತು ಮೂಡಿಸಿರುವ ಪ್ರಮುಖ ರಾಜಕಾರಣಿ ಎನಿಸಿದ್ದಾರೆ. ಇದೇ ಶಾಲೆಯಲ್ಲಿ ಓದಿದ ಹಲವು ಮಂದಿ ವಿಜ್ಞಾನಿಗಳಾಗಿದ್ದಾರೆ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧಾನಾ ಕೇಂದ್ರ (ಸಿಎಫ್‌ಟಿಆರ್‌ಐ)ಲ್ಲಿ ವಿಜ್ಞಾನಿಗಳಾಗಿದ್ದಾರೆ.
ಜಿಲ್ಲೆಯ ಹಿರಿಯ ರಾಜಕಾರಣಿ, ವಿಧಾನಪರಿಷತ್ತಿನ ಮಾಜಿ ಸದಸ್ಯರು ಮಾತ್ರವಲ್ಲ ಅಂತರರಾಷ್ಟ್ರೀಯ ಕರಾಟೆ ಪಟುವಾಗಿರುವ ಅರುಣ್ ಮಾಚಯ್ಯ ಸಹ ಇದೇ ಶಾಲೆಯ ವಿದ್ಯಾರ್ಥಿ ಎಂಬುದು ವಿಶೇಷ.
ಈ ಶಾಲೆಯಲ್ಲಿ ಓದಿದವರು ಅರಣ್ಯ ಕಾಲೇಜಿನ ಡೀನ್ ಆಗಿದ್ದಾರೆ, ಹಲವು ಬ್ಯಾಂಕಿನ ಹಿರಿಯ ಅಧಿಕಾರಿಗಳಾಗಿದ್ದಾರೆ. ಬಿಎಸ್‌ಎಫ್‌ನ ಡಿಐಜಿ ಆಗಿದ್ದಾರೆ. ಹಾಕಿ, ಫುಟ್‌ಬಾಲ್ ಆಟಗಾರರಾಗಿದ್ದಾರೆ, ಸೇನೆಗೆ ಸೇರಿ ದೇಶವನ್ನು ಕಾಯುತ್ತಿದ್ದಾರೆ, ವಕೀಲರಾಗಿದ್ದಾರೆ, ಸಂಶೋಧಕರಾಗಿದ್ದಾರೆ, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಾಗಿದ್ದಾರೆ ಅಷ್ಟೇ ಅಲ್ಲ, ಇದೇ ಶಾಲೆಯಲ್ಲಿ ಕಲಿತ ಸಹನಾ ಇದೇ ಶಾಲೆಯ ಶಿಕ್ಷಕಿಯೂ ಆಗಿದ್ದಾರೆ.
ಹೀಗೆ, ಸಮಾಜದ ಅನೇಕ ವಲಯಗಳಲ್ಲಿ ತಮ್ಮದೇಯಾದ ಕೊಡುಗೆ ನೀಡುವಂತಹ ಪ್ರತಿಭಾನ್ವಿತರನ್ನು ರೂಪಿಸಿದ ಹಿರಿಮೆ ಈ ಶಾಲೆಯದ್ದು.
ಹುಲ್ಲು ಜೋಪಡಿಯಲ್ಲಿ ಆರಂಭವಾದ ಶಾಲೆಗೆ 1956ರಲ್ಲಿ ಹೆಂಚಿನ ಚಾವಣಿ ಸಿಕ್ಕಿತು. ಕೊಡಗಿನ ಮುಖ್ಯಮಂತ್ರಿ ಸಿ.ಎಂ.ಪೂಣಚ್ಚ, ವಿದ್ಯಾಮಂತ್ರಿ ಮಲ್ಲಪ್ಪ ಅವರು ಈ ಕಟ್ಟಡವನ್ನು ಉದ್ಘಾಟಿಸಿದರು.
ನಂತರ, 2019ರಲ್ಲಿ ‘ಓಸಾಟ್’ (ಒನ್ ಸ್ಕೂಲ್ ಅಟ್ ಎ ಟೈಮ್ – ಓಎಸ್‌ಎಎಟಿ) ಎಂಬ ಸರ್ಕಾರೇತರ ಸಂಸ್ಥೆಯೊಂದು ₹40 ಲಕ್ಷ ವೆಚ್ಚದಲ್ಲಿ 2019ರಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿಕೊಟ್ಟಿತು. ಶಾಲೆಯ ಹಳೆಯ ಕಟ್ಟಡವು ಖಾಸಗಿ ಶಾಲಾ ಕಟ್ಟಡವನ್ನೂ ಮೀರಿಸುವಂತಹ ರೀತಿಯಲ್ಲಿ ಬದಲಾಗಿದ್ದು, ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳೂ ಒಂದೆಡೆ ಸೇರಿ ₹ 1.17 ಲಕ್ಷ ಮೊತ್ತದಲ್ಲಿ ಪೀಠೋಪಕರಣಗಳ ದುರಸ್ತಿ ಮಾಡಿರುವುದು ಶಾಲೆ ಮತ್ತೆ ಕಂಗೊಳಿಸಲು ಕಾರಣವಾಗಿದೆ.
6 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿರುವ ಹಾಗೂ ವಿಶಾಲವಾದ ಆಟದ ಮೈದಾನ ಹೊಂದಿರುವ ಈ ಶಾಲೆಯ ಮಾದರಿಯನ್ನೇ ಗೋಣಿಕೊಪ್ಪಲು ದಸರೆಯಲ್ಲಿ ಸ್ತಬ್ಧಚಿತ್ರ ಮಾಡಿರುವುದು ಇದರ ಹೆಗ್ಗಳಿಕೆಗೆ ಸಾಕ್ಷಿ ಎನಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಕಳೆದ ವರ್ಷ ನಡೆದ ಕ್ರೀಡಾಕೂಟದಲ್ಲಿ ತಾಲ್ಲೂಕುಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು.
ಈ ಶಾಲೆಗೆ ರುದ್ರಬೀಡು, ಧನುಗಾಲ, ಮಾಯಾಮುಡಿ, ಬಾಳಾಜಿ, ನೊಕ್ಯ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 166 ವಿದ್ಯಾರ್ಥಿಗಳು ಬರುತ್ತಿದ್ದಾರೆ. 1ರಿಂದ 7ನೇ ತರಗತಿಯವರೆಗಿನ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಜಯಮ್ಮ, ಶಿಕ್ಷಕರಾದ ಎಂ.ಟಿ.ಸತ್ಯ, ಬಿ.ಯು.ರಾಗಿಣಿ, ಎಂ.ಕೆ.ಲೀಲಾ, ಎಂ.ಟಿ.ಸುಮಾ, ಎಂ.ಬಿ.ಸಹನಾ, ಪಿ.ವಿ.ಲಾಯ್ಡ್, ಎ.ಲಾವಣ್ಯ, ಕೆ.ಬಿ.ಪುಷ್ಪಾ ಪಾಠ ಹೇಳುತ್ತಿದ್ದಾರೆ.
ಉಚಿತ ಬಸ್ ವ್ಯವಸ್ಥೆ ಉಚಿತ ಸೇವೆ!
ಈ ಶಾಲೆಯು ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ತನ್ನದೇ ಬಸ್ ಅನ್ನೂ ಹೊಂದಿದ್ದು ಇದರ ಚಾಲಕರಾಗಿ ಶಾಲೆಯ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯವೂ ಇವರು 34 ಕಿ.ಮೀ ಬಸ್ ಓಡಿಸಿ ಬೆಳಿಗ್ಗೆ ಮಕ್ಕಳನ್ನು ಕರೆದುಕೊಂಡು ಬಂದು ಸಂಜೆ ಅವರವರ ಸ್ಥಳಕ್ಕೆ ಬಿಡುತ್ತಿದ್ದಾರೆ. ಇದರಿಂದ ಮಕ್ಕಳು ಸುರಕ್ಷಿತ ಎಂಬ ಭಾವನೆ ಪೋಷಕರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.