ADVERTISEMENT

ಕೊಡಗು | ಮುಂಗಾರಿನಲ್ಲಿ ಸೆಸ್ಕ್‌ಗೆ ಕಾಡುತ್ತಿದೆ ಬರ!

ಖಾಲಿ ಹುದ್ದೆ ಭರ್ತಿಯಾಗದೇ ಪರಿತಪಿಸುತ್ತಿರುವ ಸಿಬ್ಬಂದಿ, ಕೊರತೆಯಿಂದ ಬಸವಳಿದ ಇಲಾಖೆ

ಕೆ.ಎಸ್.ಗಿರೀಶ್
Published 8 ಜುಲೈ 2024, 6:51 IST
Last Updated 8 ಜುಲೈ 2024, 6:51 IST
ರಸ್ತೆಯೊಂದರಲ್ಲಿ ವಿದ್ಯುತ್‌ ಕಂಬ ದುರಸ್ತಿ ಕಾರ್ಯ ನಡೆಸುತ್ತಿರುವ ಸೆಸ್ಕ್ ಸಿಬ್ಬಂದಿ
ರಸ್ತೆಯೊಂದರಲ್ಲಿ ವಿದ್ಯುತ್‌ ಕಂಬ ದುರಸ್ತಿ ಕಾರ್ಯ ನಡೆಸುತ್ತಿರುವ ಸೆಸ್ಕ್ ಸಿಬ್ಬಂದಿ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಆವರಿಸಿದ್ದು, ಗಾಳಿಯು ಅಬ್ಬರಿಸುತ್ತಿದೆ. ಬೀಸುತ್ತಿರುವ ಮುಂಗಾರಿನ ಗಾಳಿಗೆ ಹಲವು ಮರಗಳು, ವಿದ್ಯುತ್ ಕಂಬಗಳು ಬುಡಮೇಲಾಗುತ್ತಿವೆ. ವಿದ್ಯುತ್ ಪರಿವರ್ತಕಗಳು ಹಾಳಾಗುತ್ತಿವೆ. ಇವುಗಳೆನ್ನೆಲ್ಲ ಸರಿಪಡಿಸಲು ಉಪಕರಣಗಳಿವೆ, ಕಂಬಗಳಿವೆ, ಪರಿವರ್ತಕಗಳಿವೆ. ಆದರೆ, ಅಳವಡಿಸಲು ಸಿಬ್ಬಂದಿಯೇ ಸಾಕಾಗುವಷ್ಟು ಇಲ್ಲದೇ ಸೆಸ್ಕ್ ಪರದಾಡುತ್ತಿದೆ.

ಕಳೆದ 3 ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬಿದ್ದ ವಿದ್ಯುತ್ ಕಂಬಗಳ ಸಂಖ್ಯೆ ಬರೋಬರಿ 1,200ಕ್ಕೂ ಅಧಿಕ. ಇದರೊಂದಿಗೆ ವಿದ್ಯುತ್ ತಾಂತ್ರಿಕ ದೋಷಗಳು ಗಾಳಿ, ಮಳೆಯಿಂದ ಕಾಣಿಸಿಕೊಂಡು ಜನರನ್ನು ಹೈರಣಾಗಿಸಿದೆ. ಇಂತಹ ಹೊತ್ತಿನಲ್ಲೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ಕ್ಕೆ ‘ಶಕ್ತಿ’ ತುಂಬುವ ಕೆಲಸವನ್ನು ಸರ್ಕಾರ ಮಾಡಿಲ್ಲ.

ಮೊನ್ನೆಯಷ್ಟೇ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಪೋಕ್ಲು ಭಾಗದಲ್ಲಿ ಇರುವುದು ಕೇವಲ ಮೂರೇ ಲೈನ್‌ಮೆನ್‌ಗಳು ಎಂದು ಸಮಿತಿ ಸದಸ್ಯರೊಬ್ಬರು ವಿಷಯ ಪ್ರಸ್ತಾಪಿಸಿದರು. ಸಿಬ್ಬಂದಿ ಕೊರತೆ ಕುರಿತು ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಗಮನ ಸೆಳೆಯಲು ಯತ್ನಿಸಿದರು. ಆದರೆ, ಕಿವಿಗೊಡದ ಸಚಿವ ಎನ್.ಎಸ್.ಭೋಸರಾಜು ವಿದ್ಯುತ್ ವ್ಯತಯವಾದ 24 ಗಂಟೆಗಳ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದರು. ಹುದ್ದೆ ಭರ್ತಿ ಸಂಬಂಧ ಯಾರೊಬ್ಬರೂ ಖಚಿತವಾದ ಮಾತುಗಳನ್ನಾಡಲಿಲ್ಲ.

ADVERTISEMENT

ಹಿಂದಿನ ಸರ್ಕಾರಗಳಾಗಬಹುದು, ಈಗಿನ ಸರ್ಕಾರವಾಗಬಹುದು ಶೇ 100ರಷ್ಟು ಹುದ್ದೆಗಳನ್ನು ಸೆಸ್ಕ್‌ನಲ್ಲಿ ಭರ್ತಿ ಮಾಡಿಲ್ಲ. ಕನಿಷ್ಠ ಪಕ್ಷ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಮಾಡುವಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸುವ ಲೈನ್‌ಮೆನ್‌ಗಳ ಹುದ್ದೆಯನ್ನೂ ಸಂಪೂರ್ಣ ತುಂಬಿಲ್ಲ. ಇದರಿಂದ ಇಲ್ಲಿ ಕಾರ್ಯ ನಿರ್ವಹಿಸುವ ಕೆಲವೇ ಕೆಲವು ಸಿಬ್ಬಂದಿ ಜೀವದ ಹಂಗು ತೊರೆದು, ಸುರಿಯುವ ಮಳೆಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟು ಜಿಲ್ಲೆಯಲ್ಲಿರುವ ಲೈನ್‌ಮೆನ್‌ಗಳ ಹುದ್ದೆ 638. ಇದರಲ್ಲಿ 235 ಮಂದಿ ಮಾತ್ರವೇ ಇದ್ದಾರೆ. ಉಳಿದ 403 ಹುದ್ದೆಗಳು ಖಾಲಿಯೇ ಇವೆ. ಶೇ 62ರಷ್ಟು ಲೈನ್‌ಮೆನ್‌ಗಳ ಹುದ್ದೆಗಳು ಖಾಲಿ ಇರುವುದರಿಂದ ಸಕಾಲದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಮಾಡುವುದು ಸಾಧ್ಯವಾಗುತ್ತಿಲ್ಲ ಎಂಬುದು ಸೆಸ್ಕ್ ಅಧಿಕಾರಿಗಳ ಅಳಲು.

ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ 40 ಮಂದಿ ಲೈನ್‌ಮೆನ್‌ಗಳು ಕಡಿಮೆ ಇದ್ದಾರೆ. ಇವರಿಗೆ ಬದಲಾಗಿ 30 ಜನರನ್ನು ಬೇರೆ ಜಿಲ್ಲೆಗಳಿಂದ ರೊಟೆಷನ್‌ ಆಧಾರದ ಮೇಲೆ ನೀಡಲಾಗಿದೆ. ಪಕ್ಕದ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ಲೈನ್‌ಮೆನ್‌ಗಳನ್ನು ಕೇವಲ 15 ದಿನಗಳಿಗೆ ಮಾತ್ರವೇ ನಿಯೋಜಿಸಲಾಗುತ್ತಿದೆ. ಇದೂ ಸಹ ಸಮರ್ಪಕ ಕಾರ್ಯ ನಿರ್ವಹಣೆಗೆ ತೊಡಕಾಗಿ ಪರಿಣಮಿಸಿದೆ.

ಇವರಿಗೆ ಇಲ್ಲಿನ ಸ್ಥಳದ ಪರಿಚಯ ಇರುವುದಿಲ್ಲ. ಬೆಟ್ಟ, ಗುಡ್ಡಗಳಲ್ಲಿ ಸುರಿಯುವ ಮಳೆ ಹಾಗೂ ಬೀಸುವ ಬಿರುಸಾದ ಗಾಳಿಯ ನಡುವೆ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಕೇವಲ 15 ದಿನಗಳು ಕಾರ್ಯ ನಿರ್ವಹಿಸುವ ಇವರು ತಮ್ಮ ಸ್ವಸ್ಥಾನಕ್ಕೆ ತೆರಳುತ್ತಾರೆ. ಮತ್ತೊಂದು ಜಿಲ್ಲೆಯಿಂದ 30 ಜನರನ್ನು ನಿಯೋಜಿಸಲಾಗುತ್ತಿದೆ.

ಇಷ್ಟೆಲ್ಲ ಕೆಲಸ ಒತ್ತಡದಿಂದಾಗಿ ಹಾಗೂ ಕೆಲವು ಆಕಸ್ಮಿಕ ಘಟನೆಗಳಿಂದ ಈವರೆಗೆ ಒಟ್ಟು ಮೂವರು ಲೈನ್‌ಮೆನ್‌ಗಳು ಕಾರ್ಯನಿರತರಾಗಿದ್ದಾಗ ಗಾಯಗೊಂಡಿದ್ದಾರೆ.

ಬೈಗುಳ, ಹಿಡಿಶಾಪ!

ಇಷ್ಟು ಕಡಿಮೆ ಸಂಖ್ಯೆಯಲ್ಲಿರುವ ಲೈನ್‌ಮೆನ್‌ಗಳು ಮುಂಗಾರಿನ ಅವಧಿಯಲ್ಲಿ ಕೇಳವಷ್ಟು ಬೈಗುಳಗಳನ್ನು ಬಹುಶಃ ಬೇರೆ ಯಾರೂ ಕೇಳಲಾರರು ಎನಿಸುತ್ತದೆ. ಬರುವುದು ತಡವಾದರೆ, ಕೆಲಸ ವಿಳಂಬವಾದರೆ ಸಾರ್ವಜನಿಕರಿಂದ ಆಕ್ಷೇಪಗಳು ಭರಪೂರ ವ್ಯಕ್ತವಾಗುತ್ತವೆ. ಆದರೆ, ಸಿಬ್ಬಂದಿಯೆ ಇಲ್ಲದಿರುವಾಗ ಇರುವ ಕೆಲವೇ ಕೆಲವು ಸಿಬ್ಬಂದಿ ಹೇಗೆ ಸಕಾಲದಲ್ಲಿ ಕೆಲಸ ಮಾಡುವುದು ಎಂಬ ಅವರ ಪ್ರಶ್ನೆಗೆ ಯಾರಿಂದಲೂ ಉತ್ತರ ದೊರೆಯುವುದಿಲ್ಲ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಹೆಸರು ಬಹಿರಂಗಪಡಿಸಲು ಬಯಸದ ಲೈನ್‌ಮೆನ್‌ ಒಬ್ಬರು, ‘ಸರ್, ನಾವು ರೇನ್‌ ಕೋಟ್‌ ಹಾಕಿಕೊಂಡು ಸುರಿಯುವ ಮಳೆಯಲ್ಲೂ ಕಂಬ ಹತ್ತಿ ಕೆಲಸ ಮಾಡುತ್ತೇವೆ. ತಂತಿಗಳನ್ನು ಎಳೆಯುತ್ತೇವೆ. ಆದರೂ ಜನರಿಗೆ ಸಮಾಧಾನವಾಗುವುದಿಲ್ಲ. ಮುರಿದು ಬಿದ್ದ ಕಂಬ ತೆರವು ಮಾಡುವುದು, ಕಂಬಗಳನ್ನು ಹೊತ್ತು ತರುವ ಕೆಲಸಕ್ಕೂ ಹೆಚ್ಚಿನ ಜನರು ಕೈಜೋಡಿಸುವುದಿಲ್ಲ. ಕೆಲವೆಡೆ ಜನರೇ ಮುಂದೆ ನಿಂತು ಸಹಕಾರ ನೀಡುತ್ತಾರೆ. ಸಹಕಾರ ನೀಡದ ಕಡೆ ಕೆಲಸ ಮಾಡುವುದು ಕಷ್ಟ’ ಎಂದು ಹೇಳಿದರು.

ಗ್ರಾಮಸ್ಥರು ಸಹ ಸೆಸ್ಕ್ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸಕಾಲಕ್ಕೆ ಬರುವುದಿಲ್ಲ ಎಂಬ ದೂರು ಸಾಮಾನ್ಯ ಎನಿಸಿದೆ.

ಸೆಸ್ಕ್ ಸಿಬ್ಬಂದಿಗೆ ಶಿಕ್ಷೆಯ ಜಿಲ್ಲೆಯಾದ ಕೊಡಗು!

ಕೊಡಗು ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿದರೆ, ಸೆಸ್ಕ್‌ ಸಿಬ್ಬಂದಿಗೆ ಇದು ನರಕ ಎನಿಸಿದೆ. ನಿತ್ಯವೂ ಬರುವ ದೂರುಗಳ ಸುರಿಮಳೆ. ಸಮಸ್ಯೆ ಪರಿಹಾರಕ್ಕೆ ಹೋದರೆ ದಾರಿಯೇ ಗೊತ್ತಾಗದ ಸ್ಥಿತಿ. ಹಲವೆಡೆ ಜಾಗ ತಲುಪುವುದೇ ತೀರಾ ದುಸ್ತರವಾದ ಸನ್ನಿವೇಶ. ಸದಾ ಸುರಿಯುವ ಮಳೆ, ಬೀಸುವ ಶೀತಗಾಳಿ, ಇವೆಲ್ಲದರ ಮಧ್ಯೆ ಕೆಲಸ ಮಾಡುವ ಅನಿವಾರ್ಯತೆ. ಇದರಿಂದಾಗಿ ಕೊಡಗು ಎಂದರೆ ಸಾಕು ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರುವುದೇ ಇಲ್ಲ. ಇಲ್ಲಿನ ಸ್ಥಳೀಯರು ಯಾರೂ ಲೈನ್‌ಮೆನ್ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ, ಸೆಸ್ಕ್‌ನ ಸಿಬ್ಬಂದಿಗೆ ಕೊಡಗು ಆಕರ್ಷಕವಾಗಿ ಕಂಡಿಲ್ಲ.

ಒಂದು ವೇಳೆ ಇಲ್ಲಿ ಕೆಲಸ ಮಾಡುವವರಿಗೆ ವಿಶೇಷ ಪ್ಯಾಕೇಜ್, ಆಕರ್ಷಕವಾದ ಸಂಬಳ ಮೊದಲಾದ ಪ್ರೋತ್ಸಾಹದಾಯಕ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಬಹುಶಃ ಇಲ್ಲಿ ಕೆಲಸ ಮಾಡಲು ಬಯಸುವ ಸಿಬ್ಬಂದಿಗಳ ಸಂಖ್ಯೆ ಹೆಚ್ಚಬಹುದು. ಸಿಬ್ಬಂದಿ ಕೊರತೆ ನೀಗಬಹುದು.

‘ಲೈನ್‌ಮೆನ್‌ ಕೊರತೆ ನೀಗಿಸಿ’

ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಹಲವು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ಪರಿಸ್ಥಿತಿ ಹದಗೆಡುತ್ತದೆ. ವಿದ್ಯುತ್ ಕಡಿತದಿ೦ದ ಸಮಸ್ಯೆ ಎದುರಿಸುವುದು ಮಾಮೂಲಿ ಎಂಬಂತಾಗಿದೆ. ಸಮಸ್ಯೆ ಪರಿಹರಿಸಲು ಸಿಬ್ಬಂದಿ ಕೊರತೆ ಇದೆ. ಸೆಸ್ಕ್ ಎಂಜಿನಿಯರ್ ಸಮಸ್ಯೆಗೆ ಸ್ಪಂದಿಸುತ್ತಾರೆ. ಆದರೆ, ಲೈನ್‌ಮೆನ್‌ಗಳು ಇಲ್ಲದೆ ಇರುವ ಕಾರಣಕ್ಕೆ ವಿದ್ಯುತ್ ಸಮಸ್ಯೆಗೆ ಪರಿಹಾರ ತಕ್ಷಣ ಸಿಗುತ್ತಿಲ್ಲ. ಸರ್ಕಾರ ಲೈನ್‌ಮೆನ್‌ಗಳ ಕೊರತೆ ನೀಗಿಸಬೇಕು – ಪಾಡಿಯಮ್ಮಂಡ ಮಹೇಶ್, ನಾಪೋಕ್ಲು

‘ಮುಂಗಾರಿಗೂ ಮುನ್ನವೇ ಕೊಂಬೆ ತೆರವುಗೊಳಿಸಿ’

ಗ್ರಾಮೀಣ ಭಾಗದಲ್ಲಿ ಕಾಫಿ ತೋಟದ ಮೂಲಕ ವಿದ್ಯುತ್ ಮಾರ್ಗ ಹಾದುಹೋಗಿದೆ. ತೋಟದ ಮರಗಳು ವಿದ್ಯುತ್ ತಂತಿಗೆ ಬೀಳುವುದು, ಕೊಂಬೆ ಮುರಿದು ಬೀಳುವುದರಿಂದ ಆಗಿಂದಾಗ್ಗೆ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಮಳೆಗಾಲ ಆರಂಭಕ್ಕೂ ಮುಂಚಿತವಾಗಿ ವಿದ್ಯುತ್ ಲೈನ್ ಬಳಿಯ ಕೊಂಬೆಗಳನ್ನು ತೆರವುಗೊಳಿಸಬೇಕು – ಪ್ರಮೀಶ್ ಪಿ.ಎಸ್, ಗ್ರಾಮಸ್ಥ, ಗುಹ್ಯ.

‘ಹೆಚ್ಚು ಸಿಬ್ಬಂದಿ ನೇಮಿಸಿ’

ಪುಲಿಯೇರಿ ಹಾಗೂ ಇಂಜಿಲಿಗೆರೆ ವ್ಯಾಪ್ತಿಯಲ್ಲಿ ಪ್ರತಿದಿನ ಸಂಜೆ ವಿದ್ಯುತ್ ಸಮಸ್ಯೆ ಇದೆ. ಸಮಸ್ಯೆ ಹೇಳಿದರೆ ಸಿಬ್ಬಂದಿಗಳ ಕೊರತೆ ಎನ್ನುತ್ತಾರೆ. ಜಿಲ್ಲೆಯಲ್ಲಿ ಮರಗಳು ಹೆಚ್ಚಿದೆ. ಹಾಗಾಗಿ, ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಬೇಕು – ನಿತೀಶ್ ಎಂ.ಎಚ್, ಪುಲಿಯೇರಿ.

‘ಸಹಕಾರ ಬೇಕು’

ಸೆಸ್ಕ್ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುರಿಯುವ ಮಳೆ, ಚಳಿ ಎನ್ನದೇ ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸಾರ್ವಜನಿಕರಿಂದ ಸಹಕಾರ ಬೇಕಿದೆ. ಸಿಬ್ಬಂದಿ ಕೊರತೆ ವಿಷಯವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. 30 ಸಿಬ್ಬಂದಿ ಕೊಟ್ಟಿದ್ದಾರೆ. ಯಾವುದೇ ಬಗೆಯ ವಿದ್ಯುತ್ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಲು ನಾವು ಸದಾ ಸಿದ್ದರಿದ್ದೇವೆ – ಅನಿತಾ ಬಾಯಿ, ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್.

ರಾತ್ರಿ ವೇಳೆ ದುರಸ್ತಿ ಕಾರ್ಯ ನಡೆಸುತ್ತಿರುವ ಸೆಸ್ಕ್ ಸಿಬ್ಬಂದಿ
ನೀರಿನಲ್ಲಿ ಬೋಟ್‌ ಮೂಲಕ ವಿದ್ಯುತ್ ಕಂಬ ಇರುವ ಜಾಗಕ್ಕೆ ತೆರಳುತ್ತಿರುವ ಸೆಸ್ಕ್ ಸಿಬ್ಬಂದಿ
ಕದನೂರಿನಲ್ಲಿ ಉರುಳಿದ ವಿದ್ಯುತ್ ಕಂಬವನ್ನು ಸರಿಪಡಿಸುವ ಕಾರ್ಯಕ್ಕೆ ತೆರಳುತ್ತಿರುವ ಸೆಸ್ಕ್ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.