ADVERTISEMENT

ಗೋಣಿಕೊಪ್ಪಲು | ‘ಕೊಡಗಿಗೆ ಪ್ರತ್ಯೇಕ ಸಂಸತ್ ಸ್ಥಾನ ಸಿಗಲಿ’

ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿಯಲ್ಲಿ ಸಂಕೇತ್ ಪೂವಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:10 IST
Last Updated 27 ಅಕ್ಟೋಬರ್ 2024, 14:10 IST
ಗೋಣಿಕೊಪ್ಪಲು ಬಳಿಯ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪತ್ತಾಲೋದಿ ಕಾರ್ಯಕ್ರಮದಲ್ಲಿ ಮಹಿಳೆಯರು ಸುಂದರವಾಗಿ ಕೊಡವ ನೃತ್ಯ ಮಾಡಿದರು.
ಗೋಣಿಕೊಪ್ಪಲು ಬಳಿಯ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪತ್ತಾಲೋದಿ ಕಾರ್ಯಕ್ರಮದಲ್ಲಿ ಮಹಿಳೆಯರು ಸುಂದರವಾಗಿ ಕೊಡವ ನೃತ್ಯ ಮಾಡಿದರು.   

ಗೋಣಿಕೊಪ್ಪಲು: ‘ಗೋವದಂತೆ ಕೊಡಗು ಜಿಲ್ಲೆಗೂ ಪ್ರತ್ಯೇಕ ಸಂಸದ ಸ್ಥಾನ ನೀಡಬೇಕು’ ಎಂದು ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಟಿ.ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ, ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗೋವಾ ರಾಜ್ಯ 15 ಲಕ್ಷ ಜನಸಂಖ್ಯೆಗೆ ಎರಡು ಲೋಕಸಭಾ ಸ್ಥಾನ ಹೊಂದಿದೆ. 40 ವಿಧಾನಸಭಾ ಸ್ಥಾನಗಳಿವೆ. ಇದೇ ಮಾದರಿಯಲ್ಲಿ ವಿಶಿಷ್ಟ ಪರಿಸರ, ಸಂಸ್ಕೃತಿ, ಪದ್ಧತಿ ಪರಂಪರೆ ಹೊಂದಿರುವ ಕೊಡಗು ಜಿಲ್ಲೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

‘ಕೊಡಗು ಜಿಲ್ಲೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೂಕ್ತ ರಾಜಕೀಯ ಪ್ರಾತಿನಿದ್ಯ ನೀಡದೆ ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಮುಂಬೈ ಪಶ್ಚಿಮ ಕ್ಷೇತ್ರದಲ್ಲಿ 1971ರಲ್ಲಿ ಸ್ವತಂತ್ರವಾಗಿ ಲೋಕಸಭೆ ಚುನಾವಣೆಗೆ ನಿಂತು 90 ಸಾವಿರ ಮತ ಪಡೆದು ಸೋತರು. ಹಾಗೆಯೇ ಎಂ.ಸಿ. ನಾಣಯ್ಯ ಅವರು ಉತ್ತಮ ಆಡಳಿತಗಾರರಾಗಿದ್ದರೂ ಮುಖ್ಯಮಂತ್ರಿ ಆಗಲಿಲ್ಲ. ಎ.ಕೆ. ಸುಬ್ಬಯ್ಯ ಅವರು ಅತ್ಯಂತ ಕಾನೂನು ಪರಿಣಿತರಾಗಿದ್ದರೂ ಅವರಿಗೆ ಸೂಕ್ತ ಸ್ಥಾನ ಸಿಗಲಿಲ್ಲ. ಹಾಗೆಯೇ ಐದು ಬಾರಿ ಗೆಲುವು ಸಾಧಿಸಿದ ಅಪ್ಪಚ್ಚು ರಂಜನ್ ಅವರಿಗೆ ಕಾಟಾಚಾರದ ಆರು ತಿಂಗಳ ಸಚಿವ ಸ್ಥಾನವನ್ನು ನೀಡಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೊಡವರಿಗೆ ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶ ನೀಡಬೇಕು ಎಂದು ಹೇಳಿದ ಅವರು ಸುದೀರ್ಘವಾಗಿ ಮಾತನಾಡಿದ ಸಂಕೇತ್ ಪೂವಯ್ಯ ಕೊಡವ ಜನಾಂಗವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದ ಜನಾಂಗ ಎಂಬ ಭಾವನೆಯನ್ನು ಸೃಷ್ಟಿ ಮಾಡಲಾಗಿದೆ. ಆದರೆ ಜನಾಂಗ ತುಂಬಾ ಹಿಂದುಳಿದಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದರೂ ಸಹ ಮೀಸಲಾತಿ ಇಲ್ಲದೆ ಹಾಗೂ ಜಾತಿ ರಾಜಕಾರಣದ ಪ್ರಭಾವ ಇಲ್ಲದೆ ಸರಕಾರಿ ಉದ್ಯೋಗ ಸಿಗದೇ ಉನ್ನತ ಸ್ಥಾನಮಾನಕ್ಕೆ ಹೋಗಲಾಗುತ್ತಿಲ್ಲ. ಕೊಡವರು ತಮ್ಮ ಸ್ವಂತ ಪ್ರತಿಭೆ ಹೊಂದಿದ್ದರೂ ಅವಕಾಶ ವಂಚಿತರಾಗಿದ್ದಾರೆ. ಚೆನ್ನಾಗಿ ಹಾಕಿ ಆಡುವವರು ಕೊಡಗಿನಲ್ಲಿಯೇ ಉಳಿದಿದ್ದಾರೆ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ, ‘ಕೊಡವ ಜನಾಂಗದಲ್ಲಿ ಜನಸಂಖ್ಯೆ ಹೆಚ್ಚಾಗಬೇಕು. ಇದರ ಬಗ್ಗೆ ಜನಾಂಗದಲ್ಲಿ ಗಂಭೀರವಾದ ಚಿಂತನೆ ಹಾಗೂ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ’ ಎಂದರು.

ಬೊಳ್ಳಾಜಿರ ಸುಶೀಲಾ ಅಶೋಕ್ ಮಾತನಾಡಿದರು. ಬಿರುನಾಣಿ ಮರೆನಾಡ್ ಕೊಡವ ಸಮಾಜ ಹಾಗೂ ಬಿರುನಾಣಿಯ ಲಯನ್ಸ್ ಶಾಲೆಯ ವಿದ್ಯಾಥಿಗಳಿಂದ ವಿವಿಧ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಮರೆನಾಡ್ ಕೊಡವ ಸಮಾಜ ನಿರ್ದೇಶಕಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಬಾಳೆಯಡ ಅಶೋಕ್, ಮೀರಾ ಅಶೋಕ್, ಕರ್ನಂಡ ರೂಪ ಹಾಜರಿದ್ದರು. ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಖಜಾಂಚಿ ಚಂಗುಲಂಡ ಸತೀಶ್, ನಿರ್ದೇಶಕರಾದ ಮುಕ್ಕಾಟಿರ ಸಂದೀಪ್, ಚಂಗುಲಂಡ ಅಶ್ವಿನಿ ಸತೀಶ್, ಅಜ್ಜಮಾಡ ಸಾವಿತ್ರಿ, ಕೋಟ್ರಮಾಡ ಸುಮಂತ್, ಬಾದುಮಂಡ ವಿಷ್ಣು ಕಾರ್ಯಪ್ಪ ಹಾಜರಿದ್ದರು.

ಪುಟಾಣಿ ವಿದ್ಯಾರ್ಥಿಗಳು ಕೊಡವ ಸಾಂಪ್ರದಾಯಕ ದಿರಿಸಿನಲ್ಲಿ ನುಡಿಸಿದ ದುಡಿಪಾಟ್ ಸಭಿಕರ ಮೆಚ್ಚುಗೆ ಪಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.