ವಿರಾಜಪೇಟೆ: ಪಟ್ಟಣದಲ್ಲಿ ಕೋಳಿ ಮಾಂಸದ ದರವು ಗಗನಕ್ಕೇರಿದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಮಾಂಸ ಹಾಗೂ ಹಸಿಮೀನಿನ ದರ ದುಬಾರಿಯಾಗಿರುವ ಬಗ್ಗೆ ಆಗಾಗ್ಗೆ ದೂರುಗಳು ಕೇಳಿಬರುತ್ತಿದ್ದವು. ಆದರೆ ಕೆಲವು ದಿನಗಳಿಂದ ಪಟ್ಟಣದಲ್ಲಿ ಕೋಳಿ ಮಾಂಸದ ದರ ಕೆ.ಜಿ ಯೊಂದಕ್ಕೆ ₹ 200ಕ್ಕೆ ಏರಿಕೆ ಕಂಡಿದೆ.
ಪಟ್ಟಣದಲ್ಲಿ ಕೋಳಿ ಮಾಂಸದ ದರ ದುಬಾರಿಯಾಗಿರುವ ಕುರಿತು ಎಲ್ಲರಲ್ಲು ಸಮಾಧಾನ ಮನೆಮಾಡಿದೆ.
ವಿರಾಜಪೇಟೆ ಪಟ್ಟಣ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿನ ಕೋಳಿ ಮಾಂಸ ದರವನ್ನು ಹೋಲಿಕೆ ಮಾಡಿದರೆ ಮಾತ್ರ ಎಲ್ಲರಿದೂ ಅಚ್ಚರಿಯಾಗುವುದು. ಸಮೀಪದ ಮೂರ್ನಾಡುವಿನಲ್ಲಿ ಕೆ.ಜಿಗೆ ₹ 130, ಸುಂಟಿಕೊಪ್ಪದಲ್ಲಿ ₹ 120, ಸಿದ್ದಾಪುರದಲ್ಲಿ ₹ 160ರಂತೆ ಮಾರಾಟವಾಗಿದೆ.
ವಿರಾಜಪೇಟೆಯಲ್ಲಿ ಕುರಿಮಾಂಸವು ಕೆ.ಜಿಗೆ ₹ 600 ರಿಂದ ₹ 650 ರೂ ಇದ್ದರೆ, ಮೂರ್ನಾಡುವಿನಲ್ಲಿ ₹ 600 ರಿಂದ ₹ 620, ಸುಂಟಿಕೊಪ್ಪದಲ್ಲಿ ₹ 500ಹಾಗೂ ಸಿದ್ದಾಪುರದಲ್ಲಿ ₹ 540 ರಿಂದ ₹ 600ರಂತೆ ಮಾರಾಟವಾಗುತ್ತಿದೆ. ಇತರೆಡೆಗಳಿಗಿಂತ ವಿರಾಜಪೇಟೆ ಪಟ್ಟಣದಲ್ಲಿ ಕುರಿಮಾಂಸವು ದುಬಾರಿಯಾಗಿದ್ದರೂ, ಕೋಳಿಮಾಂಸದ ದರ ಮಾತ್ರ ಭಾರಿ ದುಬಾರಿಯಾಗಿದೆ.
ವಿರಾಜಪೇಟೆಯಲ್ಲಿ ಮೀನು ಮಾಂಸದ ದರ ದುಬಾರಿಯಾಗಿರುವ ಕುರಿತು ವರ್ತಕರನ್ನು ಪ್ರಶ್ನಿಸಿದರೆ, ಕಳೆದ ಒಂದು ವರ್ಷದಿಂದ ಕೊರೊನಾದಿಂದ ಸಮಸ್ಯೆಯಾಗಿದೆ. ಪಟ್ಟಣ ಪಂಚಾಯಿತಿಗೆ ಬಾಡಿಗೆ ಅಥವಾ ತೆರಿಗೆ ಕಟ್ಟಬೇಕಿದೆ ಎನ್ನುವ ಸಿದ್ಧ ಉತ್ತರ ನೀಡುತ್ತಾರೆ. ಜಿಲ್ಲೆಯ ಇತರ ಕಡೆಗಳಲ್ಲಿನ ವರ್ತಕರಿಗೆ ಕೊರೊನಾದಿಂದ ಸಮಸ್ಯೆಯಾಗಲಿಲ್ಲವೇ? ಅವರು ಪಟ್ಟಣ ಅಥವಾ ಗ್ರಾಮ ಪಂಚಾಯಿತಿಗೆ ಬಾಡಿಗೆ ಅಥವಾ ತೆರಿಗೆ ಕಟ್ಟುತ್ತಿಲ್ಲವೇ ಎಂದು ವಿರಾಜಪೇಟೆ ನಾಗರಿಕ ಹೋರಾಟ ಸಮಿತಿಯ ಯೋಗೇಶ್ ನಾಯ್ಡು ಪ್ರಶ್ನಿಸುತ್ತಾರೆ.
ಕೋಳಿ ಮಾಂಸದ ವರ್ತಕ ಶಂಷುದ್ದೀನ್ ಮಾತನಾಡಿ, ‘ಕೊರೊನಾದಿಂದಾಗಿ ಕೆಲ ತಿಂಗಳು ಮಳಿಗೆ ಮುಚ್ಚಲಾಗಿತ್ತು. ಆದರೆ ಮಳಿಗೆ ಬಾಡಿಗೆ ಕಡಿಮೆ ಮಾಡಿಲ್ಲ. ಕಾರ್ಮಿಕರಿಗೂ ಪೂರ್ಣ ಪ್ರಮಾಣದ ಸಂಬಳ ನೀಡಬೇಕಿರುವುದರಿಂದ ಹೆಚ್ಚಿನ ತೊಂದರೆಗೆ ಸಿಲುಕುವಂತಾಗಿದೆ. ಇತರೆಡೆಗಳಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಕೆಲವು ಮಳಿಗೆಗಳು ಮುಚ್ಚುವಂತಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.