ADVERTISEMENT

ಮಡಿಕೇರಿ ದಸರಾ | ಮೆರುಗು ತುಂಬಿದ ಮಕ್ಕಳ ದಸರೆ

ದಿನವಿಡೀ ನಡೆದ ವೈವಿಧ್ಯಮಯ ಕಾರ್ಯಕ್ರಮ: 680ಕ್ಕೂ ಹೆಚ್ಚು ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:27 IST
Last Updated 6 ಅಕ್ಟೋಬರ್ 2024, 5:27 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶನಿವಾರ ನಡೆದ ಮಕ್ಕಳ ದಸರೆಯಲ್ಲಿ ಮಕ್ಕಳು ವಿವಿಧ ಬಗೆಯ ತರಕಾರಿಗಳನ್ನು ಮಾರಾಟ ಮಾಡಿದರು. ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಶನಿವಾರ ನಡೆದ ಮಕ್ಕಳ ದಸರೆಯಲ್ಲಿ ಮಕ್ಕಳು ವಿವಿಧ ಬಗೆಯ ತರಕಾರಿಗಳನ್ನು ಮಾರಾಟ ಮಾಡಿದರು. ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ಒಂದೆಡೆ ಮಕ್ಕಳ ಸಂತೆ, ಮತ್ತೊಂದೆಡೆ ಮಕ್ಕಳ ಅಂಗಡಿ, ಮೊಗದಂದು ಕಡೆ ಮಕ್ಕಳೇ ರಚಿಸಿದ ಮಂಟಪಗಳು... ಒಂದೇ ಎರಡೇ, ಶನಿವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಮಕ್ಕಳ ದಸರೆಯಲ್ಲಿ ನೂರಾರು ನೋಟಗಳು ಕಣ್ಣಿನಲ್ಲಿ ಸೆರೆಯಾದವು.

ಮಡಿಕೇರಿ ನಗರ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಇಲ್ಲಿ ನಡೆದ ಮಕ್ಕಳ ದಸರೆ ಮಡಿಕೇರಿ ದಸರಾ ಜನೋತ್ಸವಕ್ಕೆ ಮೆರುಗು ತುಂಬಿತು.

ಅಬ್ಬರದ ಸಂಗೀತ ಇಲ್ಲ, ತಳ್ಳಾಟ ನೂಕಾಟಗಳಿಲ್ಲದೇ ನಿರಮ್ಮಳವಾಗಿ ಜನರು ಭಾಗಿಯಾದರು. ಮಕ್ಕಳಿಂದ ವಿವಿಧ ಬಗೆಯ ಕಾರ್ಯಕ್ರಮಗಳು ವೇದಿಕೆಯಲ್ಲಿ ಪ್ರದರ್ಶನಗೊಂಡವು. ಗಾಂಧಿ ಮೈದಾನಕ್ಕೆ ಬಂದವರಿಗೆ ಒಂದಿನಿತೂ ಬೇಸರವಾಗದ ಹಾಗೆ ಏಕಕಾಲದಲ್ಲೇ ಹಲವು ಬಗೆಯ ಕಾರ್ಯಕ್ರಮಗಳು ನಡೆದು, ನೋಡುಗರಿಗೆ ರಸದೌತಣವನ್ನೇ ಉಣಬಿಡಿಸಿದವು.

ADVERTISEMENT

ಮನೆಯಂಗಳದಲ್ಲಿ ಬೆಳೆದ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಹಣ್ಣುಗಳು, ಗಿಡಗಳು, ಸೊಪ್ಪುಗಳು, ಬಳ್ಳಿಗಳು, ಕಾಯಿ, ಎಲೆ, ಚಿಗುರು ಹೀಗೆ ನಾನಾ ಬಗೆಯ ವಸ್ತುಗಳ ಮಾರಾಟದಲ್ಲಿ ಬರೋಬರಿ 72 ಮಕ್ಕಳು ಭಾಗಿಯಾದರು.

ಪಾನೀಪೂರಿ, ಚುರುಮುರಿ, ತಂಪುಪಾನೀಯಗಳು, ವಿವಿಧ ಬಗೆಯ ಖಾದ್ಯಗಳನ್ನಿರಿಸಿಕೊಂಡ 86 ಮಕ್ಕಳು ಅಂಗಡಿ ಹಾಕಿದ್ದರು. ಇಲ್ಲೆಲ್ಲ ಕೇವಲ ತಿನಿಸುಗಳು ಮಾತ್ರವಲ್ಲದೇ ಕರಕುಶಲ ಉತ್ಪನ್ನಗಳೂ ಇದ್ದವು. ಇವುಗಳನ್ನು ಖರೀದಿಸಲು ಜನಜಾತ್ರೆಯೇ ನೆರೆದಿತ್ತು.

ಭರಪೂರ ಖರೀದಿಸಿದ ಜನರು ಎರಡೂ ಕೈಗಳಲ್ಲಿ ಬ್ಯಾಗುಗಳನ್ನು ಹಿಡಿದು ಮೈದಾನದಿಂದ ಹೊರಬರುವ ದೃಶ್ಯಗಳು ಕಂಡು ಬಂದವು. ಇದರಿಂದ ಕೇವಲ ಒಂದೆರಡು ಗಂಟೆಗಳಲ್ಲೇ ಹಲವು ಮಕ್ಕಳು ತಂದಿದ್ದ ಉತ್ಪನ್ನಗಳು ಮಾರಾಟವಾದವು. ಹಣ ಎಣಿಸಿಕೊಳ್ಳುತ್ತಾ ಮಕ್ಕಳು ಹರ್ಷಚಿತ್ತರಾಗಿ ಮನೆಯತ್ತ ಹೆಜ್ಜೆ ಇಡುತ್ತಿದ್ದ ದೃಶ್ಯಗಳು ಕಂಡು ಬಂದವು.

ವಿವಿಧ ಬಗೆಯ ಮಂಟಪಗಳನ್ನು ರೂಪಿಸಿದ ಮಕ್ಕಳ ಗುಂಪು ಮತ್ತೊಂದು ಕಡೆ ಸೇರಿತ್ತು. ಬರೋಬರಿ 14 ಮಕ್ಕಳು ಮಂಟಪಗಳನ್ನು ರಚಿಸಿ, ತಮ್ಮ ಮಂಟಪಗಳು ದಸರಾ ದಶಮಂಟಪಗಳಿಗೆ ಏನೂ ಕಡಿಮೆ ಇಲ್ಲ ಎಂಬಂತೆ ಪ್ರದರ್ಶಿಸಿದರು. ಭವ್ಯವಾದ ಕಲಾಕೃತಿಗಳು, ಕಥೆಗೆ ತಕ್ಕಂತೆ ಕಲಾಕೃತಿಗಳ ಚಲನೆ, ಹೂಕುಂಡಗಳು, ಹೊಗೆಯ ಬಳಕೆ ಸೇರಿದಂತೆ ಹಲವು ವಿಧದಲ್ಲಿ ಭವಿಷ್ಯದ ದಸರಾ ಮಂಟಪಗಳ ಉತ್ತರಾಧಿಕಾರಿಗಳಂತೆ ಮಕ್ಕಳು ಕಂಡು ಬಂದು ಅಚ್ಚರಿ ಮೂಡಿಸಿದರು.

ವೇದಿಕೆಯ ಮೇಲೆ ಬೆಳಿಗ್ಗೆಯಿಂದಲೆ ನಡೆದ ಕಾರ್ಯಕ್ರಮಗಳು ನೋಡುಗರ ಹೃನ್ಮನ ತಣಿಸಿದವು. 132 ಛದ್ಮವೇಷ ಸ್ಪರ್ಧಿಗಳು, 31 ಕ್ಲೇ ಮಾಡೆಲಿಂಗ್ ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ರೀತಿಯ ಹಣ್ಣುಗಳು, ತರಕಾರಿ ಹಾಗೂ ಮಕ್ಕಳು ಚಿತ್ರ ಬಿಡಿಸಿದ ಚಿತ್ರಗಳನ್ನು ಖರೀದಿ ಮಾಡಿದರು.

ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೌರಾಯುಕ್ತ ಎಚ್.ಆರ್.ರಮೇಶ್, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್‌ನ ಕಿರಣ್, ಕಟ್ಟೆಮನೆ ಸೋನಜಿತ್ ಭಾಗವಹಿಸಿದ್ದರು.

ಶಾಸಕ ಡಾ.ಮಂತರ್‌ಗೌಡ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಕ್ಕಳಿಗೆ ಬಹುಮಾನ ವಿತರಿಸಿದರು.

ಮಕ್ಕಳ ಸಂತೆಯಲ್ಲಿ ಏನೇನಿತ್ತು?

ಪಾಲಕ್, ಮೆಂತೆ, ಸಬ್ಬಸಿಗೆ, ದಂಟು, ಕೀರೆ, ಗಣಿಕೆ, ನುಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲಾ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೀಬೆ ಸೇರಿದಂತೆ ಹಲವು ಬಗೆಯ ಹಣ್ಣುಗಳಿದ್ದವು.

ಮತ್ತೊಂದು ಬದಿಯಲ್ಲಿ ಪಾನಿಪೂರಿ, ಮಸಾಲಪೂರಿ, ಕಜ್ಜಾಯ, ರವೆಉಂಡೆ, ಚಕ್ಕುಲಿ, ಸೇರಿದಂತೆ ವಿವಿಧ ರೀತಿಯ ತಂಪು ಪಾನೀಯಗಳು ಬಾಯಲ್ಲಿ ನೀರೂರಿಸಿದವು.

‌ಮಕ್ಕಳು ವಿವಿಧ ಬಗೆಯ ಮಂಟಪಗಳನ್ನು ರಚಿಸಿ ಗಮನ ಸೆಳೆದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಕ್ಕಳ ದಸರೆಯಲ್ಲಿ ವಿವಿಧ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು
ಮಕ್ಕಳ ದಸರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು
ಮಕ್ಕಳು ರೂಪಿಸಿದ್ದ ವಿವಿಧ ಕಲಾಕೃತಿಗಳನ್ನು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವೀಕ್ಷಿಸಿದರು

ಒಂದೆರಡು ಗಂಟೆಗಳಲ್ಲೆ ತಂದಿತ್ತ ಸರಕು ಖಾಲಿ ಖುಷಿಯಿಂದ ಮನೆಯತ್ತ ಹೆಜ್ಜೆ ಇಟ್ಟ ಮಕ್ಕಳು ಮಕ್ಕಳ ಪ್ರತಿಭೆ ಕಂಡು ಅವಕ್ಕಾದ ಪೋಷಕರು

ಮಕ್ಕಳು ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ

-ವೆಂಕಟ್ ರಾಜಾ ಜಿಲ್ಲಾಧಿಕಾರಿ.

11 ವರ್ಷಗಳ ಮಕ್ಕಳ ದಸರಾದಲ್ಲಿ ಈ ವರ್ಷ ಅತ್ಯಧಿಕ ಮಕ್ಕಳು ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ. ಮಡಿಕೇರಿಯಿಂದ ದೂರದ ವಿರಾಜಪೇಟೆ ಮಾದಾಪುರ ಸುಂಟಿಕೊಪ್ಪ ವ್ಯಾಪ್ತಿಯಿಂದಲೂ ಅತ್ಯಧಿಕ ಮಕ್ಕಳು ಪಾಲ್ಗೊಂಡಿದ್ದರು.

-ಎಚ್.ಟಿ.ಅನಿಲ್ ಮಕ್ಕಳ ದಸರಾ ಸಮಿತಿ ಸಂಚಾಲಕ.

ಮಕ್ಕಳ ದಸರಾ ಸ್ಪರ್ಧೆಗಳ ವಿಜೇತರು ಮಕ್ಕಳ ಸಂತೆ: ಎಚ್.ಎನ್.ಬೊಳ್ಳಮ್ಮ ಎ.ಎ.ಬೊಳ್ಳಮ್ಮ ಕೆ.ಕೆ.ಚೋಂದಮ್ಮ ಲೀನಾ ದೇಚಮ್ಮ ತಂಡ ಪ್ರಥಮ ಎ.ಬಿ.ಶೀತಲ್ ಕೆ.ಪಿ.ಪೂರ್ಣಶ್ರೀ ತಂಡ ದ್ವಿತೀಯ ಎಂ.ಎಂ.ಮನ್ನಿತ್ ಮತ್ತು ಲಿಪಿಕಾ ತಂಡ ತೃತೀಯ ರಕ್ಷಿತ್ ಮತ್ತು ತಾಂಜಿಲ ತಂಡ 4ನೇ ಸ್ಥಾನ ಲಾಸ್ಯ ಮೊನಿಕಾ ಮತ್ತು ಪ್ರೇಕ್ಷಾ ತಂಡ 5ನೇ ಸ್ಥಾನ ಕ್ಲೇಮಾಡೆಲಿಂಗ್ ಸ್ಪರ್ಧೆಗಳು 5ರಿಂದ 7ನೇ ತರಗತಿ ವಿಭಾಗ: ಬಿ.ಆರ್.ಸದನ್ ಗೌಡ ಪ್ರಥಮ ಎಂ.ಎಸ್.ವಿಷ್ಣು ದ್ವಿತೀಯ ಆರ್.ಯಶ್ವಿನ್ ತೃತೀಯ ಐ.ಎ.ಸಾಲಿಯಾ ಹಾಗೂ ಎಂ.ಎಸ್.ಆಧ್ಯಾ ಸಮಾಧಾನಕರ ಬಹುಮಾನ 8 ರಿಂದ 10ನೇ ತರಗತಿ ವಿಭಾಗ: ಟಿ.ಎಲ್.ಹರ್ಷಿತ್ ಪೊನ್ನಪ್ಪ ಪ್ರಥಮ ಎಚ್.ಜೆ.ಪವಿನ್ ದ್ವಿತೀಯ ಕೆ.ಟಿ.ವನ್ಯಕೃಷ್ಣ ತೃತೀಯ ಶಮ್ ನ ಮತ್ತು ಶ್ರೇಯಾ ಎಂ.ಕೃಷ್ಣ ಸಮಧಾನಕರ ಬಹುಮಾನ. ಮಕ್ಕಳ ಅಂಗಡಿ ಸ್ವರ ಅಯ್ಯಪ್ಪ ದೀತ್ಯ ಕಾವೇರಿ ಪ್ರಥಮ ಚಿರಂತನ್ ಭುವನ್ ದ್ವಿತೀಯ ತ್ರಿಷ್ಯಾ ಲೀಕ್ಷಿತಾ ತೃತೀಯ ಬಹುಮಾನ ಆಸದ್ ಮುನಾಜ್ ಭೂಮಿಕಾ ಹಾಗೂ ಅನ್ವಿತಾ ಸಮಧಾನಕರ ಬಹುಮಾನ. ಮಕ್ಕಳ ಮಂಟಪ: ಟೀಮ್ ವಿ ವಿ ಕ್ರಿಯೇಟರ್ಸ್ (ಪ್ರಥಮ) ಕ್ರೇಜಿ ಟೀಮ್ (ದ್ವಿತೀಯ) ಟೀಮ್ ಅಗ್ನಿ (ತೃತೀಯ) ಟೀಮ್ 14 ಮತ್ತು ಟೀಮ್ ಕರವಲೆ ಭಗವತಿ (ಸಮಾಧಾನಕರ) ‌ಛದ್ಮವೇಷ ಸ್ಪರ್ಧೆ ಎಲ್‌ಕೆಜಿ ಯುಕೆಜಿ: ಪರಂ ಪ್ರಥಮ ಚಿರಾಗ್ ದ್ವಿತೀಯ ಜಗನ್ ತೃತೀಯ ಮರಿಯಾ ಮತ್ತು ಓಜಸ್ವಿ ಸಮಾಧಾನಕರ 1ರಿಂದ 4ನೇ ತರಗತಿ ವಿಭಾಗ: ಎಂ.ವಿ.ದಿವಿತಾ ಪ್ರಥಮ ಜೆ.ಕೆ.ಅರುಷಿ ದ್ವಿತೀಯ ರಿಶಾ ಪೂಜಾರಿ ತೃತೀಯ ಧೃತಿ ಪೂಜಾರಿ ಮನ್ವಿತಾ ಚಾರ್ವಿ 5ರಿಂದ 7ನೇ ತರಗತಿ ವಿಭಾಗ:  ವರ್ಷಿತಾ ಪ್ರಥಮ ಪಿ.ಎಚ್.ಜನ್ಯ ದ್ವಿತೀಯ ಲೇಖನಾ ತೃತೀಯ  - ರುಷಿಲ್ ಕೆ.ಟಿ.ಸಾಥ್ವಿ ಶಮಿಕ್ ಕುಟ್ಟಪ್ಪ ಸಮಧಾನಕರ ಬಹುಮಾನಮಕ್ಕಳ ದಸರಾದ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಮಲ್ಲಿಕಾ ಶಿರಿನ್ ಸೌಮ್ಯಾ ನಿರಂಜನ್ ಸವಿತಾ ಪೂವಯ್ಯ ಮಂಜುನಾಥ್ ಬಿಂದು ಶಶಿಕಲಾ ಹೋಮಾ ಪ್ರೀತಂ ರಶ್ಮಿ ಉತ್ತಪ್ಪ ಮಮತಾ ಮಮತಾ ಶಾಸ್ತ್ರೀ ಸ್ವರನ್ ಶರತ್ ರಘುಪತಿ ಎಸ್.ಜಿ.ಅಜಯ್ ಎಚ್.ಭರತ್ ಕುಮಾರ್ ವಿಕ್ರಂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.