ADVERTISEMENT

‘ಕೊಡಗಿನ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಿ’

ಕಾಂಗ್ರೆಸ್‌ಗೆ ಸವಾಲೆಸೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 6:12 IST
Last Updated 15 ನವೆಂಬರ್ 2024, 6:12 IST
ರವಿ ಕಾಳಪ್ಪ
ರವಿ ಕಾಳಪ್ಪ   

ಮಡಿಕೇರಿ: ‘ಬಿಜೆಪಿ ಕೊಡಗು ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಚರ್ಚಿಸಲು ಸದಾ ಸಿದ್ಧ’ ಎಂದು ಹೇಳಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ‘ಸಾಧ್ಯವಿದ್ದರೆ ಕೊಡಗು ಜಿಲ್ಲೆಯ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ತೋರಿಸಿ’ ಎಂದು ಕಾಂಗ್ರೆಸ್‌ಗೆ ಸವಾಲೆಸೆದರು.

ಹಿಂದಿನ ಸಂಸದ ಪ್ರತಾಪಸಿಂಹ, ಹಿಂದಿನ ಇಬ್ಬರು ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳು ಒಂದೆರಡಲ್ಲ. ಅವುಗಳನ್ನು ಹೇಳುತ್ತಾ ಹೋದರೆ ಸಾಕಷ್ಟು ಸಮಯವೇ ಬೇಕಾಗುತ್ತದೆ. ಅದನ್ನೆಲ್ಲ ಚರ್ಚಿಸಲು ಕಾಂಗ್ರೆಸ್‌ನವರು ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಹ್ವಾನ ನೀಡಿದರು.

‘ಈಚೆಗೆ ಕೊಡಗು ಜಿಲ್ಲಾ ಕಾಂಗ್ರೆಸ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸತ್ಯಾಂಶವಿಲ್ಲ. ಕೇವಲ ಬಿಜೆಪಿಯನ್ನು ಟೀಕಿಸುವುದಕ್ಕೆಂದೇ ಅವರು ಸುದ್ದಿಗೋಷ್ಠಿ ಮಾಡಿದಂತಿದೆ’ ಎಂದು ಟೀಕಿಸಿದ ಅವರು, ‘ಯಾವಾಗಲೂ ಸತ್ಯವನ್ನು ಮಾತನಾಡಬೇಕು. ಕನಿಷ್ಠ ನಾವು ಆಡುವ ಮಾತುಗಳು ಸತ್ಯಕ್ಕೆ ಸ್ವಲ್ಪವಾದರೂ ಹತ್ತಿರದಲ್ಲಿರಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ವಕ್ಫ್‌ ವಿಚಾರವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಇದರಲ್ಲಿ ಎಳ್ಳಷ್ಟೂ ಸತ್ಯಾಂಶ ಇಲ್ಲ. ಬಿಜೆಪಿ ರೈತರ ಪರವಾಗಿ ಧ್ವನಿ ಎತ್ತಿದೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಹಿಂದೆಯೂ ವಕ್ಫ್ ಆಸ್ತಿ ತೆರವು ಸಂಬಂಧ ನೋಟಿಸ್ ನೀಡಿದೆ ಎಂದು ಅವರು ಹೇಳಿದ್ದಾರೆ. ಆದರೆ, ಬಿಜೆಪಿ ಆಗ ಕೊಟ್ಟಿದ್ದು ನಿಜವಾಗಿಯೂ ಒತ್ತುವರಿ ಮಾಡಿಕೊಂಡವರಿಗೆ ಹೊರತು ರೈತರಿಗಲ್ಲ ಎಂದು ತಿರುಗೇಟು ನೀಡಿದರು.

‘ಈಗ ಕಾಂಗ್ರೆಸ್ ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ನೋಟಿಸ್ ನೀಡಿದೆ. ಇದು ತಪ್ಪು ಎಂದು ನಾವು ಹೇಳಿದ ಮೇಲೆ ಇದು ಅಧಿಕಾರಿಗಳ ಮಾಡಿರುವ ಅವಾಂತರ ಎಂದು ಸಮಜಾಯಿಷಿ ನೀಡುತ್ತಿದೆ. ಹಾಗಿದ್ದರೆ, ಅಧಿಕಾರಿಗಳು ಸರ್ಕಾರದ ನಿಯಂತ್ರಣದಲ್ಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದ ಸರ್ಕಾರ ನಮಗೆ ಬೇಕೇ’ ಎಂದೂ ಹರಿಹಾಯ್ದರು.

ಕುಶಾಲನಗರದ ಮಹಿಳೆಯೊಬ್ಬರಿಗೆ ವಕ್ಫ್‌ ಬೋರ್ಡ್‌ನವರು ಎಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು ಹಾಕಿದ ಬೆದರಿಕೆ ಪ್ರಕರಣ ಕುರಿತು ತನಿಖೆ ನಡೆಯಲಿ. ಒಂದು ವೇಳೆ ಅದು ನಿಜವಾಗಿದ್ದರೆ ಬೆದರಿಕೆ ಹಾಕಿದವರಿಗೆ ಶಿಕ್ಷೆಯಾಗಲಿ. ಸುಳ್ಳಾಗಿದ್ದರೆ ಈ ರೀತಿ ಸುಳ್ಳು ದೂರು ನೀಡಲು ಕಾರಣ ಯಾರು ಎಂಬುದು ಬಹಿರಂಗವಾಗಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ‘ಪ್ರಧಾನಮಂತ್ರಿ ಮಂಡಿಸಲಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಸಹಕಾರ ನೀಡಲಿ’ ಎಂದರು. ಬಿಜೆಪಿ ಮುಖಂಡರಾದ ಉಮೇಶ್‌ ಸುಬ್ರಮಣಿ, ಸುವಿನ್ ಗಣಪತಿ ಭಾಗವಹಿಸಿದ್ದರು.

ಮುಂಬರುವ ದಿನಗಳು ಬಿಜೆಪಿಯ ದಿನಗಳು; ಮಹೇಶ್‌ ಜೈನಿ

‘ಪ್ರತಾಪಸಿಂಹ ಅವರು ಜಿಲ್ಲೆಗೆ ಕಾಲಿಡಬಾರದು ಎಂದು ಹೇಳಲು ಕಾಂಗ್ರೆಸ್‌ನವರು ಯಾರು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ಜೈನಿ ಕಿಡಿಕಾರಿದರು. ‘ಪ್ರತಾಪಸಿಂಹ ಅವರೊಂದಿಗೆ ನಾವಿದ್ದೇವೆ ಎಂದು ಸ್ವತಃ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೇ ಬಹಿರಂಗವಾಗಿ ಹೇಳಿದ್ದಾರೆ. ಮುಂದಿನ ದಿನಗಳು ಕೊಡಗಿನಲ್ಲಿ ಬಿಜೆಪಿಯ ದಿನಗಳಾಗಿರಲಿವೆ ಎಂಬುದನ್ನು ಕಾಂಗ್ರೆಸ್ ಮರೆಯಬಾರದು’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.