ADVERTISEMENT

ಕೂಡಲೇ ಗುಂಡಿ ಮುಚ್ಚಿ; ಸಚಿವ ಭೋಸರಾಜು ತಾಕೀತು

ಮುಖ್ಯಮಂತ್ರಿ, ಕಂದಾಯ ಸಚಿವರು ಭೇಟಿ ನೀಡಿ ಸೂಚಿಸಿದಾಗ್ಯೂ ಗುಂಡಿ ಮುಚ್ಚದಿರುವುದು ಏಕೆ?

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 4:27 IST
Last Updated 16 ಆಗಸ್ಟ್ 2024, 4:27 IST
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು   

ಮಡಿಕೇರಿ: ಮಳೆಹಾನಿ ಕಾಮಗಾರಿಯನ್ನು ವಿವಿಧ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್‌ಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು ವಿಶೇಷವಾಗಿ ಲೋಕೋಪಯೋಗಿ, ಪಂಚಾಯತ್ ರಾಜ್, ನೀರಾವರಿ ಹಾಗೂ ಪೌರಾಡಳಿತ ಇಲಾಖೆಯ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

‘ಮಳೆಹಾನಿ ಸಂಬಂಧ ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ, ರಸ್ತೆ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದಾರೆ. ನಾನು ಹಲವು ಬಾರಿ ಭೇಟಿ ನೀಡಿದ್ದೇನೆ, ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿ ಹಲವು ನಿರ್ದೇಶನ ನೀಡಿದ್ದಾರೆ. ಆದರೂ ಸಹ ರಸ್ತೆ ಗುಂಡಿ ಮುಚ್ಚುವ ಕೆಲಸ ಆಗಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

ಈ ಕುರಿತು ವಿಷಯ ಪ್ರಸ್ತಾಪಿಸಿದ ಶಾಸಕ ಡಾ.ಮಂತರ್‌ಗೌಡ, ‘ಶನಿವಾರಸಂತೆ-ಕೊಡ್ಲಿಪೇಟೆ, ಕೂಡಿಗೆ-ಸೋಮವಾರಪೇಟೆ ಮಾರ್ಗದ ರಸ್ತೆಗಳು ಸೇರಿದಂತೆ ಹಲವು ರಸ್ತೆಗಳು ಗುಂಡಿ ಬಿದ್ದಿದ್ದು, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಕೂಡಲೇ ಗುಂಡಿ ಮುಚ್ಚಬೇಕು’ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಹೆಚ್ಚಿನ ಮಳೆಯಿಂದಾಗಿ ರಸ್ತೆ, ಸೇತುವೆ ಮತ್ತಿತರ ಹಾನಿಯ ಕಾಮಗಾರಿಗಳ ಸಂಬಂಧ ವರದಿ ನೀಡಿ, ಕಾಮಗಾರಿ ಕೈಗೊಳ್ಳಬಹುದು. ಆ ನಿಟ್ಟಿನಲ್ಲಿ ಎಂಜಿನಿಯರ್‌ಗಳು ತಕ್ಷಣ ಕ್ರಮವಹಿಸಬೇಕು’ ಎಂದರು.

ಈ ಕುರಿತು ಮಾತನಾಡಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಗೌಡ, ‘ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 75 ಕಾಮಗಾರಿ ಕೈಗೊಳ್ಳಬೇಕಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಸುಮಾರು ₹ 3.46 ಕೋಟಿ ಅನುದಾನ ಬೇಕಿದೆ. ಸದ್ಯ, ರಸ್ತೆಯ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಅತಿವೃಷ್ಟಿಯಿಂದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಸೇರಿದಂತೆ ಸುಮಾರು ₹ 76 ಕೋಟಿ ಹೆಚ್ಚಿನ ನಷ್ಟವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪಂಚಾಯತ್ ರಾಜ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಮೂರ್ತಿ ಮಾತನಾಡಿ,‘ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ವ್ಯಾಪ್ತಿಯಲ್ಲಿ ಸುಮಾರು ₹ 40 ಕೋಟಿ ಹಾನಿಯಾಗಿದ್ದು, ಗ್ರಾಮೀಣ ರಸ್ತೆಯಲ್ಲಿ ಗುಂಡಿ ಮುಚ್ಚಲಾಗುವುದು’ ಎಂದರು.

ಸೆಸ್ಕ್ ವಿಭಾಗ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ವಿದ್ಯುತ್ ಕಂಬಗಳು, ಪರಿವರ್ತಕಗಳು ಸೇರಿದಂತೆ ಸುಮಾರು ₹ 4 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಹೇಳಿದರು.

ಮಳೆಗಾಲದ ಸಂದರ್ಭದಲ್ಲಿ ಸೆಸ್ಕ್ ವಿಭಾಗ ವ್ಯಾಪ್ತಿಯ ಎಲ್ಲಾ ಹಂತದ ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡಿರುವುದಕ್ಕೆ ಇದೇ ಸಂದರ್ಭದಲ್ಲಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾರಂಗಿ ಜಲಾಶಯ ಬಗ್ಗೆ ಮಾಹಿತಿ ಪಡೆದ ಸಚಿವರು ಮಳೆ ಹೆಚ್ಚಾದಲ್ಲಿ ಜಲಾಶಯದಿಂದ ನೀರು ಹೊರ ಬಿಡುವ ಬಗ್ಗೆ ಅಚ್ಚುಕಟ್ಟು ಪ್ರದೇಶದ ಜನರಿಗೆ ಮೊದಲೇ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹಾರಂಗಿ ವಿಭಾಗದ ಅಧೀಕ್ಷಕ ಎಂಜಿನಿಯರ್ ರಘುಪತಿ ಭಾಗವಹಿಸಿದ್ದರು.

ಹಾರಂಗಿಯಿಂದ ಹೆಚ್ಚು ನೀರು ಬಿಡುವಾಗ ಮೊದಲೇ ಮಾಹಿತಿ ನೀಡಲು ಸೂಚನೆ ಸೆಸ್ಕ್ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿ

ಗುಂಡಿ ಮುಚ್ಚಲು ಏಕೆ ಮುಂದಾಗಿಲ್ಲ; ಪೊನ್ನಣ್ಣ ಪ್ರಶ್ನೆ

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ ‘ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಗುಂಡಿಯಾಗಿದ್ದು ಇದನ್ನು ಸರಿಪಡಿಸುವ ಕೆಲಸ ಆಗಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ ಶ್ರೀಮಂಗಲ ಬಳಿ ರಸ್ತೆ ಕಾಮಗಾರಿಯ ಬಗ್ಗೆ ಅವರು ಮಾಹಿತಿ ಪಡೆದರು. ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಯಾವ ಯಾವ ರಸ್ತೆಗಳು ಹಾಳಾಗಿವೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿ ಮಳೆಹಾನಿ ಕಾಮಗಾರಿಯನ್ನು ಕೈಗೊಳ್ಳಬಹುದು. ಆದರೂ ಏಕೆ ಗುಂಡಿ ಮುಚ್ಚಲು ಮುಂದಾಗಿಲ್ಲ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.