ನಾಪೋಕ್ಲು: ಬಿಸಿಲಿನ ಬೇಗೆಯನ್ನು ತಣಿಸಲು ಕಾಫಿನಾಡಿಗೆ ಬಂದಿದೆ ಅಪರೂಪದ ಉತ್ಪನ್ನ ಎಳನೀರಿನ ಜಲ್ಲಿ.
ದಕ್ಷಿಣ ಕನ್ನಡದಿಂದ ಸುಳ್ಯ-ಸಂಪಾಜೆ ಮಾರ್ಗವಾಗಿ ಮಡಿಕೇರಿಯತ್ತ ಬರುವ ಹಾದಿಯಲ್ಲಿ ದೇವರ ಕೊಲ್ಲಿಯಲ್ಲಿ ಎಳನೀರು ಜೆಲ್ಲಿ ದಾರಿಹೋಕರನ್ನು ಬಹುವಾಗಿ ಸೆಳೆಯುತ್ತಿದೆ. ಮಡಿಕೇರಿಯಿಂದ 18 ಕಿ.ಮೀ ದೂರದ ಇಲ್ಲಿನ ರಸ್ತೆಬದಿಯಲ್ಲಿರುವ ವಸುಧಾ ಕ್ಯಾಂಟೀನ್‌ನಲ್ಲಿ ಈ ಎಳನೀರು ಜೆಲ್ಲಿ ಲಭ್ಯ.
ಎಳೆನೀರಿನ ಜ್ಯೂಸನ್ನು ಗಟ್ಟಿಯಾಗಿಸಿ ತಂಪಾಗಿಸಿದ ಜೆಲ್ಲಿ ಇದೀಗ ಪ್ರಯಾಣಿಕರ ಬಿಸಿಲ ಧಗೆಯನ್ನು ತಣಿಸುತ್ತಿದೆ. ವಾಹನಗಳಲ್ಲಿ ಸಾಗುವವರು ಎಳನೀರು ಜೆಲ್ಲಿಯ ಗ್ರಾಹಕರು. ಇದರ ಮಾಲೀಕರಾದ ಸುಬ್ರಹ್ಮಣ್ಯ ಭಟ್ ಹಾಗೂ ವಸಂತ ಲಕ್ಷ್ಮಿ ದಂಪತಿ ಎಳನೀರು ಜೆಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಒಂದು ಕಪ್ ಎಳನೀರು ಜೆಲ್ಲಿಗೆ ₹ 35 ದರವಿದೆ. ಪ್ರತಿದಿನ 20 ಲೀಟರ್‌ನಷ್ಟು ಜೆಲ್ಲಿಯನ್ನು ತಯಾರಿಸುತ್ತಾರೆ. ಇಲ್ಲಿ ಬಹುತೇಕ ಮಂದಿ ಕಾಯಂ ಗ್ರಾಹಕರು. ಸುಳ್ಯ, ಸಂಪಾಜೆ, ಪುತ್ತೂರು ಸೇರಿದಂತೆ ಹಲವು ಭಾಗ
ಗಳಿಂದ ಬರುವ ಗ್ರಾಹಕರು ಎಳನೀರು ಜೆಲ್ಲಿಯನ್ನು ಇಲ್ಲಿ ಖರೀದಿಸು
ತ್ತಾರೆ. ಎಳನೀರು ಸಕ್ಕರೆ ಮತ್ತು ಅಗರ್ ಸೇರಿಸಿ ಕುದಿಸುತ್ತಾರೆ. ಪಾಕ ಸರಿಯಾದಾಗ ಇಳಿಸಿ ಎಳನೀರಿನ ಗಂಜಿ ಸೇರಿಸಿ ಕಪ್‌ಗಳಲ್ಲಿ ತುಂಬುತ್ತಾರೆ. ನಂತರ ಫ್ರಿಜ್‌ನಲ್ಲಿಟ್ಟರೆ ತಂಪಾದ ಜೆಲ್ ಆಗಿ ಲಭ್ಯ.
ಫ್ರಿಡ್ಜ್‌ನಿಂದ ತೆಗೆದ ಎಳೆನೀರು ಜಲ್ಲಿಯನ್ನು ಆಗಲೇ ಸೇವಿಸುವವರು ಹಲವರಾದರೆ ಮತ್ತೆ ಕೆಲವರು ಪಾರ್ಸಲ್ ಕೊಂಡೊಯ್ಯುತ್ತಾರೆ. ಎಳನೀರು ಜೆಲ್ ಅನ್ನು ನಾಲ್ಕೈದು ಗಂಟೆ ತೆರೆದ ವಾತಾವರಣದಲ್ಲಿ ಇಡಬಹುದು. ಹಾಗಾಗಿ, ಮನೆ ಮಂದಿಯ ಜೊತೆ ಸವಿಯ ಬಯಸುವವರು ಪ್ಯಾಕ್ ಮಾಡಿ ಜೆಲ್ಲಿಯನ್ನು ಕೊಂಡೊಯ್ಯುತ್ತಾರೆ. ಬೇಸಿಗೆಯಲ್ಲಿ 20 ಲೀಟರ್ ಜೆಲ್ಲಿ ಮಾಡುವುದು ರೂಢಿ. ಮಳೆಗಾಲದಲ್ಲಿ ಈ ಪ್ರಮಾಣ ಇಳಿಯುತ್ತದೆ. ದೂರದ ಊರಿಗೆ ಎಳೆನೀರು ಜಲ್ಲಿಯನ್ನು ಕೊಂಡೊಯ್ಯುವವರು ಥರ್ಮಕೋಲ್ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ಕೊಂಡೊಯ್ಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.