ADVERTISEMENT

ಮಡಿಕೇರಿ: ಡಿ. 8ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೆಸಿಐ ವತಿಯಿಂದ ಮಾಯಮುಡಿಯಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 3:52 IST
Last Updated 21 ನವೆಂಬರ್ 2024, 3:52 IST
ಸಿ.ಮಹೇಶ್ ನಾಚಯ್ಯ
ಸಿ.ಮಹೇಶ್ ನಾಚಯ್ಯ   

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಇಂಡಿಯಾ (ಜೆಸಿಐ) ವತಿಯಿಂದ ಡಿ.8ರಂದು ಪೊನ್ನಂಪೇಟೆಯ ಮಾಯಾಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ‘ತೋಕ್ ನಮ್ಮೆ’ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ತಿಳಿಸಿದರು.

‘.22 ರೈಫಲ್ ವಿಭಾಗದಲ್ಲಿ ಮೊದಲ ಬಹುಮಾನ ₹30 ಸಾವಿರ, ದ್ವಿತೀಯ ಬಹುಮಾನ ₹20 ಸಾವಿರ, ತೃತೀಯ ಬಹುಮಾನ ₹10 ಸಾವಿರ, ಟ್ವೆಲ್ತ್ ಬೋರ್‌ ವಿಭಾಗದಲ್ಲಿ ಮೊದಲ ಬಹುಮಾನ ₹25 ಸಾವಿರ, ದ್ವಿತೀಯ ಬಹುಮಾನ ₹15 ಸಾವಿರ, ತೃತೀಯ ಬಹುಮಾನ ₹10 ಸಾವಿರ, ಏರ್‌ಗನ್ ವಿಭಾಗದಲ್ಲಿ ಮೊದಲ ಬಹುಮಾನ ₹10 ಸಾವಿರ, ದ್ವಿತೀಯ ಬಹುಮಾನ ₹8 ಸಾವಿರ ಹಾಗೂ ತೃತೀಯ ಬಹುಮಾನ ₹6 ಸಾವಿರ ಇದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇದೊಂದು ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು, ಎಲ್ಲರಿಗೂ ಅವಕಾಶ ಇದೆ. ಈಗಾಗಲೇ 150 ಮಂದಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 400 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕೋವಿಯ ಮಹತ್ವ ಕುರಿತು ವಿಶೇಷ ಉಪನ್ಯಾಸವೂ ಇರಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ಶಾಸಕ ಎ.ಎಸ್.ಪೊನ್ನಣ್ಣ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ’ ಎಂದರು.

ADVERTISEMENT

‘ಜೆಸಿಐ ಸಂಸ್ಥೆಯು ವ್ಯಕ್ತಿತ್ವ ಬೆಳವಣಿಗೆಯ ಗುರಿ ಹೊಂದಿದೆ. ಸಮಾಜ ಸೇವೆಯಲ್ಲೂ ಸಂಘಟನೆ ತೊಡಗಿಸಿಕೊಂಡಿದೆ’ ಎಂದು ಜಿಸಿಐನ ವಲಯ 14ರ ಅಧಿಕಾರಿ ಅಪ್ಪಂಡೆರಂಡ ದಿನು ತಿಳಿಸಿದರು.

ಮಾಹಿತಿಗೆ ಮೊ.ಸಂ. 9148978919 ಸಂಪರ್ಕಿಸಬಹುದು ಎಂದರು.

ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಸಂಘಟನೆಯ ಪೆಮ್ಮಂಡ ಮಂಜು ಬೋಪಣ್ಣ, ಪಾರುವಂಗಡ ದಿಲನ್ ಚೆಂಗಪ್ಪ ಭಾಗವಹಿಸಿದ್ದರು.

ಈಗಾಗಲೇ 150 ಮಂದಿಯಿಂದ ನೋಂದಣಿ 400 ಮಂದಿ ಭಾಗವಹಿಸುವ ನಿರೀಕ್ಷೆ ಬೃಹತ್ ಮಟ್ಟದಲ್ಲಿ ನಡೆಯುವ ಸ್ಪರ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.