ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಕೆಲವೆಡೆ ಹಣ್ಣಾಗಿರುವ ಕಾಫಿ ಬೆಳೆಯು, ಈಗ ಬೀಳುತ್ತಿರುವ ಮಳೆಯಿಂದ ಉದುರಲಾರಂಭಿಸಿದ್ದು, ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
ಮಾರ್ಚ್– ಏರ್ಪಿಲ್ ತಿಂಗಳಿನಲ್ಲಿ ಮಳೆಯಾಗಿ ಕಾಫಿ ಹೂ ಅರಳುವುದು, ನವೆಂಬರ್– ಡಿಸೆಂಬರ್ ತಿಂಗಳಿನಲ್ಲಿ ಕಾಫಿ ಹಣ್ಣಾಗುವುದು ಸಾಮಾನ್ಯ. ಆದರೆ, ಕೆಲವು ಭಾಗಗಳಲ್ಲಿ ವರ್ಷದ ಪ್ರಾರಂಭದಲ್ಲಿಯೇ ಮಳೆ ಸುರಿದು, ಆಗಲೇ ಹೂಗಳು ಅರಳಿದ್ದವು. ಅವು ಈಗ ಹಣ್ಣಾಗಿವೆ. ಆದರೆ, ಒಂದು ವಾರದಿಂದ ಬೀಳುತ್ತಿರುವ ಬಿರುಸಿನ ಮಳೆಯಿಂದ ಮಣ್ಣು ಪಾಲಾಗುತ್ತಿವೆ. ಈಗ ಪಕ್ಷಿಗಳ ಉಪಟಳವೂ ಎದುರಾಗಿದ್ದು, ಅವು ಹಣ್ಣಿನ ರಸ ಹೀರಿ ಕೆಳಗೆ ಬೀಳಿಸುತ್ತಿವೆ.
‘ಉತ್ತಮ ದರವಿದ್ದರೂ, ಮಳೆಯಾಗುತ್ತಿರುವುದರಿಂದ ಫಸಲು ಹಾನಿಯಾಗಿದೆ. ಕೆಲವು ಗಿಡಗಳು ಎಲೆ ಬಿಟ್ಟು, ಒಣಗಿವೆ. ಆರೇಳು ವರ್ಷಗಳಿಂದ ನಿರಂತರ ನಷ್ಟವಾಗುತ್ತಿದೆ. ಕಾಫಿ ಉದುರಿ ನಷ್ಟವಾಗುವುದನ್ನು ತಡೆಯಲು ಕೊಯ್ಲು ಮಾಡುತ್ತಿದ್ದೇವೆ. ಆದರೆ, ದಿನವೂ ಮಳೆಯಾಗುತ್ತಿರುವುದರಿಂದ ಒಣಗಿಸಲು ಸಾಧ್ಯವಾಗುತ್ತಿಲ್ಲ. ಶೀತ ಹೆಚ್ಚಾಗಿರುವುದರಿಂದ ಕಾಫಿ ತೋಟಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ’ ಎಂದು ಕಿತ್ತೂರಿನ ಬೆಳೆಗಾರ ಲಕ್ಷ್ಮೀಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಾದ್ಯಂತ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ಫಸಲು ನೆಲ ಕಚ್ಚುತ್ತಿದೆ. ಇಲ್ಲಿ ಏಪ್ರಿಲ್–ಮೇ ತಿಂಗಳಲ್ಲಿ ಬಿದ್ದ ಅಲ್ಪ ಮಳೆಯಿಂದ ಕಾಫಿ ಹೂವಾಗಲು ತೊಂದರೆಯಾಗಿತ್ತು. ಆದರೂ, ಫಸಲಿನಲ್ಲಿ ಚೇತರಿಕೆ ಕಂಡಿತ್ತು. ಈಗ ಭರವಸೆಯೇ ಇಲ್ಲವಾಗಿದೆ.
ಮಳೆಯ ಕಾರಣಕ್ಕೆ, ತೋಟಗಳಿಗೆ ಔಷಧ ಸಿಂಪಡಿಸಲೂ ಸಾಧ್ಯವಾಗುತ್ತಿಲ್ಲ. ಈ ವರ್ಷ ನಾಟಿ ಮಾಡಿರುವ ಸಣ್ಣ ಕಾಫಿ ಗಿಡಗಳಿಗೂ ಸದ್ಯ ಮಳೆ ಬೇಕಿರಲಿಲ್ಲ. ವಿಪರೀತ ಶೀತದಿಂದ ಗಿಡಗಳಲ್ಲೇ ಕಾಫಿ ಕೊಳೆಯುವ ಅಪಾಯವೂ ಎದುರಾಗಿದೆ.
ಜನವರಿಯಲ್ಲಿ ಮಳೆಯಾದ ಬಳಿಕ ಅರೇಬಿಕಾ ಕಾಫಿ ತೋಟಗಳಲ್ಲಿ ಕೆಲವೆಡೆ ಈಗ ಹಣ್ಣಾಗಿದ್ದು ಬೆಳೆಗಾರರು ಕೊಯ್ಲು ಮಾಡಬೇಕುವಿ.ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.