ಮಡಿಕೇರಿ: ಕಾಫಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾತ್ರವಲ್ಲ ಕಳವಾದ ಕಾಫಿಯನ್ನು ಖರೀದಿಸಿದ್ದ ವರ್ತಕರನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂದೆ ಕಳವು ಮಾಡಲಾದ ಕಾಫಿಯನ್ನು ಖರೀದಿಸುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಂ.ಸಿ.ಜಯ (45), ಎಚ್.ಜಿ.ಶರತ್ (31), ಪಿ.ಜೆ.ಸಾಜು (44), ಬಂಧಿತ ಕಳವು ಆರೋಪಿಗಳು. ಇವರಿಂದ ಕಳವಾದ ಕಾಫಿ ಖರೀದಿಸಿದ್ದ ಅಬ್ದುಲ್ ಅಜೀಜ್ (49) ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಕಗ್ಗೋಡ್ಲು ಗ್ರಾಮದ ನಿವಾಸಿ ವೈ.ಎ.ಚಿದಾನಂದ ಅವರು ತಮ್ಮ ತೋಟದ ಕಣದಲ್ಲಿ ಇಟ್ಟಿದ್ದ ಹಸಿ ಕಾಫಿಯಲ್ಲಿ ಅಂದಾಜು 350 ಕೆ.ಜಿ ಕಾಫಿಯನ್ನು ಆರೋಪಿಗಳು ಜ. 31ರಂದು ಕಳವು ಮಾಡಿದ್ದರು. ನಂತರ, ಅವರು ಮಡಿಕೇರಿಯ ವರ್ತಕ ಅಬ್ದುಲ್ ಅಜೀಜ್ ಅವರಿಗೆ ಮಾರಾಟ ಮಾಡಿದ್ದರು. ಕಾರ್ಯಾಚರಣೆ ಕೈಗೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, 150 ಚೀಲ ಕಾಫಿಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಕೆ.ಎಂ.ಕಿಶೋರ್‌ಕುಮಾರ್ ಹಾಗೂ ಮನು ರೈ ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಜಿಲ್ಲೆಯ ಕಾಫಿ ವರ್ತಕರು ಕಾಫಿ ಮಾರಾಟ ಮಾಡುವವರ ಸಂಪೂರ್ಣ ವಿವರ ಇಟ್ಟುಕೊಳ್ಳಬೇಕು, ಖರೀದಿ ವೇಳೆ ರಶೀದಿ ನೀಡಬೇಕು. ಕಳ್ಳತನ ಮಾಡಿರುವ ಕಾಫಿಯನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು. ತಪ್ಪಿದ್ದಲ್ಲಿ ವರ್ತಕರನ್ನೂ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಎಸ್.ಮಹೇಶ್‌ಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಯು.ಉಮೇಶ್, ಸಬ್‌ಇನ್‌ಸ್ಪೆಕ್ಟರ್ ವಿ.ಶ್ರೀನಿವಾಸಲು ಕಾರ್ಯಾಚರಣೆ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.