ಶನಿವಾರಸಂತೆ (ಕೊಡಗು): ಪಟ್ಟಣದಲ್ಲಿ ಮಂಗಳವಾರ ಸಂಜೆ ಎರಡು ಕೋಮಿನ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕರು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಸಚಿನ್ ಮತ್ತು ತನ್ಮಯ್ ಅವರ ಮೇಲೆ ಅಜರ್, ರಶೀದ್, ಬಾಷಾ, ಇಮ್ರಾನ್ ಎಂಬುವವರು ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ ರಾತ್ರಿ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಶನಿವಾರಸಂತೆ ಠಾಣೆಗೆ ತೆರಳಿ ಹಲ್ಲೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯುವಕರ ಗುಂಪು ಆಕ್ರೋಶ ಹೊರಹಾಕಿತು.
ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಡಿಕೇರಿ, ಕುಶಾಲನಗರದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.