ADVERTISEMENT

ಕಾಳುಮೆಣಸು ಜಿಎಸ್‌ಟಿ ವ್ಯಾಪ್ತಿಗೆ ಬೇಡ: ಕರ್ನಾಟಕ ಬೆಳೆಗಾರರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 23:01 IST
Last Updated 18 ನವೆಂಬರ್ 2024, 23:01 IST
ಶಿರಸಿ ತಾಲ್ಲೂಕಿನ ಇಸಳೂರು ಗ್ರಾಮದಲ್ಲಿ ಕೃಷಿಕ ದುಶ್ಯಂತರಾಜ್ ಕೊಲ್ಲೂರಿ ಅವರು ಅಡಿಕೆ, ಕಾಳುಮೆಣಸು ಒಣಗಲು ಹಾಕುತ್ತಿರುವುದು
ಶಿರಸಿ ತಾಲ್ಲೂಕಿನ ಇಸಳೂರು ಗ್ರಾಮದಲ್ಲಿ ಕೃಷಿಕ ದುಶ್ಯಂತರಾಜ್ ಕೊಲ್ಲೂರಿ ಅವರು ಅಡಿಕೆ, ಕಾಳುಮೆಣಸು ಒಣಗಲು ಹಾಕುತ್ತಿರುವುದು   

ಪ್ರಜಾವಾಣಿ ವಾರ್ತೆ

ಮಡಿಕೇರಿ: ‘ಕಾಳುಮೆಣಸನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಾರದು’ ಎಂದು ಕರ್ನಾಟಕ ಬೆಳೆಗಾರರ ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನಗರ ಹೊರವಲಯದಲ್ಲಿ ಸೋಮವಾರ ನಡೆದ ಸಂಘದ 66ನೇ ವಾರ್ಷಿಕ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕೆ.ಜಿ.ರಾಜೀವ್, ‘ಹವಾಮಾನ ಬದಲಾವಣೆಯಿಂದ ಕಾಳುಮೆಣಸು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ’ ಎಂದರು.

ADVERTISEMENT

‘ಉತ್ಪಾದನಾ ವೆಚ್ಚ ಹೆಚ್ಚಳ, ಅತೀವ ಸ್ಪರ್ಧಾತ್ಮಕತೆ, ಕಾರ್ಮಿಕರ ಕೊರತೆ, ರೋಗಬಾಧೆ, ಕೀಟಗಳ ಕಾಟ, ಮಾನವ– ವನ್ಯಜೀವಿ ಸಂಘರ್ಷ ಸೇರಿದಂತೆ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೂಡಲೇ ನೆರವಿಗೆ ಬರಬೇಕು’ ಎಂದು ಆಗ್ರಹಿಸಿದರು.

‘ಕಾಫಿಯನ್ನು ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ವ್ಯಾಪ್ತಿಗೆ ತರಬೇಕು, ಹೊಸ ರಫ್ತು ಮಾರುಕಟ್ಟೆಗಳ ಹುಡುಕಾಟ ನಡೆಸಬೇಕು, ಕಾರ್ಮಿಕರ ಕೊರತೆ ನಿವಾರಿಸಲು ಹೊಸ ಸಂಶೋಧನೆಗಳನ್ನು ಉತ್ತೇಜಿಸಬೇಕು, ಕೀಟ, ರೋಗ, ಬರ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ ಕಾಫಿ ತಳಿಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಅರಣ್ಯದ ಸುತ್ತ ರೈಲ್ವೆ ಬ್ಯಾರಿಕೇಡ್ ಹಾಕಲು ಹೆಚ್ಚಿನ ಹಣ ಮೀಸಲಿರಿಸಬೇಕು, ಕಾಡಾನೆಗಳನ್ನು ಸ್ಥಳಾಂತರಿಸಬೇಕು, ವನ್ಯಜೀವಿಗಳಿಂದಾಗುವ ಬೆಳೆ ಹಾಗೂ ಪ್ರಾಣಹಾನಿಗೆ ಹೆಚ್ಚಿನ ಪರಿಹಾರ ನೀಡಬೇಕು. ‘ಸರ್ಫೇಸಿ’ ಕಾಯ್ದೆಯಿಂದ ಬೆಳೆಗಾರರನ್ನು ಹೊರಗಿಡಬೇಕು’ ಎಂದು ಕೋರಿದರು.

‘ದೇಶದಲ್ಲಿ ಶೇ 60ರಷ್ಟು ಕಾಫಿ ಹಾಗೂ ಶೇ 36ರಷ್ಟು ಏಲಕ್ಕಿ ಕರ್ನಾಟಕದಿಂದಲೇ ಉತ್ಪಾದನೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಕಾಳುಮೆಣಸಿನ ಉತ್ಪಾದನೆ ಇಳಿಕೆಯಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.