ಮಡಿಕೇರಿ: ಸಂವಿಧಾನಬದ್ಧ ಹಕ್ಕುಗಳನ್ನು ಕೊಡವರಿಗೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ಇಲ್ಲಿನ ಹೊರ ವಲಯದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಭಾನುವಾರ ನಡೆದ 29ನೇ ವರ್ಷದ ಸಾರ್ವತ್ರಿಕ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು.
ಕೊಡವರಿಗೆ ಸಿಗಬೇಕಾದ ಸಂವಿಧಾನಬದ್ಧ ಹಕ್ಕುಗಳಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರಂತರವಾಗಿ ಹೋರಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡವರ ಅಮೋಘ ಸೇವೆಗಾಗಿ ಮತ್ತು ರಾಷ್ಟ್ರ ನಿರ್ಮಾಣದ ಅಪಾರ ಕೊಡುಗೆಗಾಗಿ ಋಣಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಈ ಶುಭ ಸಂದರ್ಭದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ರಾಜ್ಯಾಂಗದತ್ತ ನಿರ್ಣಯಗಳನ್ನು ಮಂಡಿಸುತ್ತಿರುವುದಾಗಿ ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ‘ಕೈಲ್ ಪೊಳ್ದ್’ ಪ್ರಯುಕ್ತ ‘ತೋಕ್ ಪೂವ್’ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‍ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು.
ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು.
ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ‘ಕೈಲ್ ಪೊಳ್ದ್’ ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮಾಚರಣೆಯಲ್ಲಿ ನೂರಾರು ಮಂದಿ ಭಾಗಿಯಾದರು.
ಕಲಿಯಂಡ ಮೀನಾ, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಮಂದಪಂಡ ರಚನ, ನಂದಿನೆರವಂಡ ನಿಶಾ, ಪಾಲಂದಿರ ಲೀಲ, ನಂದಿನೆರವಂಡ ಬೀನಾ, ಅಜ್ಜಿನಿಕಂಡ ಇನಿತಾ, ಅಪ್ಪಾರಂಡ ವಿನ್ಸಿ, ನಂದಿನೆರವಂಡ ಸೋನಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್ ಭಾಗವಹಿಸಿದ್ದರು.
ನ. 1ರಂದು ದೆಹಲಿ ಚಲೊ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಪರವಾಗಿ ನಡೆಸುತ್ತಿರುವ ಹೋರಾಟದ ಕುರಿತು ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲು ನ.1 ರಂದು ದೆಹಲಿ ಚಲೊ ರ‍್ಯಾಲಿ ನಡೆಸಲು ನಿರ್ಧರಿಸಿರುವುದಾಗಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು. ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 34ನೇ ವರ್ಷದ ‘ಕೊಡವ ನ್ಯಾಷನಲ್ ಡೇ’ ಕಾರ್ಯಕ್ರಮವನ್ನು ಇದೇ ನ.26 ರಂದು ಕ್ಯಾಪಿಟಲ್ ವಿಲೇಜ್‍ನಲ್ಲಿ ಆಚರಿಸಲಾಗುವುದು ಎಂದು ಘೋಷಿಸಿದರು.
ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು.
ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್‍ಗಳ ಆರ್ಟಿಕಲ್ 244 371(ಕೆ) ಆರ್/ಡಬ್ಲ್ಯೂ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತವನ್ನು ಮಾನ್ಯ ಮಾಡಬೇಕು
ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್ ನೀಡಬೇಕು.
ಕೊಡವ ತಕ್ಕ್ ಅನ್ನು ಸಂವಿಧಾನದ 8ನೇ ಶೆಡ್ಯೂಲ್‍ನಲ್ಲಿ ಸೇರಿಸಬೇಕು.
ಕೊಡವ ಜನಾಂಗೀಯ ಸಂಸ್ಕಾರ ಗನ್ ಅನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳಲ್ಲಿ ಸೇರ್ಪಡೆಗೊಳಿಸಬೇಕು.
ತಲಕಾವೇರಿಯನ್ನು ಸರ್ಕಾರವು ಕೊಡವ ಜನಾಂಗದ ಪವಿತ್ರ ತೀರ್ಥ ಯಾತ್ರಾ ಕೇಂದ್ರವಾಗಿ ಪರಿಗಣಿಸಬೇಕು ಪ್ರವಾಸಿ ಕೇಂದ್ರವಾಗಿ ಪರಿಗಣಿಸಬಾರದು.
ಹೆಲ್ಸಿಂಕಿ ನಿಯಮ 1966ರ ಪ್ರಕಾರ ಕಾವೇರಿಯ ನೀರಿನ ಪಾಲನ್ನು ಕೊಡವಲ್ಯಾಂಡ್‍ಗೆ ಹಂಚಿಕೆ ಮಾಡಬೇಕು
ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಹಿನ್ನೆಲೆ ಸ್ಮಾರಕಗಳನ್ನು ನಿರ್ಮಿಸಬೇಕು.
ಉಲುಗುಲಿ-ಸುಂಟಿಕೊಪ್ಪ ಹಾಗೂ ಮುಳ್ಳುಸೋಗೆಯಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು.
ದೇವಟ್‍ಪರಂಬ್‍ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು.
ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ ‘ಸಂಘ’ ಅಮೂರ್ತ ಮತಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.