ಕುಶಾಲನಗರ: ಪಟ್ಟಣದ ವಿವಿಧೆಡೆ ಗಣೇಶೋತ್ಸವದ ಅಂಗವಾಗಿ ಸ್ಥಾಪಿಸಿರುವ ಗೌರಿ, ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಪುರಸಭೆ ವತಿಯಿಂದ ತಾತ್ಕಾಲಿಕ ಹೊಂಡ ನಿರ್ಮಾಣ ಮಾಡಲಾಗಿದೆ.
ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ನದಿ ದಂಡೆಯಲ್ಲಿ ಕಳೆದ ಕೆಲವು ವರ್ಷಗಳಿಂದ ತಾತ್ಕಾಲಿಕ ಹೊಂಡ ನಿರ್ಮಿಸಲಾಗುತ್ತಿದ್ದು, ಈ ಹೊಂಡದಲ್ಲಿಯೇ ಗೌರಿ, ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ನಡೆಯುತ್ತಿದೆ.
ಗಣೇಶೋತ್ಸವದಲ್ಲಿ ಪಿಒಪಿ ಗಣೇಶ ಮೂರ್ತಿಗೆ ಸಂಬಂಧಿಸಿದಂತೆ ಕಠಿಣ ನಿಯಮ ರೂಪಿಸಲಾಗಿದೆ. ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ನದಿ ,ಕೆರೆಗಳನ್ನು ಹಾಗೂ ಜಲಚರಗಳನ್ನು ಭವಿಷ್ಯತ್ತಿಗೆ ಉಳಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗಿತ್ತು. ಅಲ್ಲದೆ ಕೆರೆ, ನದಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಉದಯಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು 5 ಅಡಿ ಅಳ ಹಾಗೂ 20 ಅಡಿ ಅಗಲದ ಹೊಂಡ ನಿರ್ಮಿಸಿ ಇದಕ್ಕೆ ಶುದ್ಧ ನೀರನ್ನು ತುಂಬಿಸಿದ್ದಾರೆ. ಇದರ ಅಡಿಯಲ್ಲಿ ಎಂಸ್ಯಾಂಡ್ ಹಾಕಲಾಗಿದ್ದು, ಪಾಲಿಥಿನ್ ಟಾರ್ಪಾಲ್‌ನಿಂದ ಹೊಂಡ ನಿರ್ಮಾಣ ವಾಗಿದೆ. ಸುರಕ್ಷತೆಗಾಗಿ ಇದರ ಸುತ್ತಲು ಬೇಲಿ ಹಾಕಲಾಗಿದೆ.
ಹೊಂಡದಲ್ಲಿ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಮರಳು ಚೀಲಗಳಿಂದ ಮೆಟ್ಟಿಲುಗಳನ್ನು ಮಾಡಲಾಗಿದೆ. ಎಲ್ಲಾ ಮುಗಿದ ಮೇಲೆ ಈ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗಿಡ, ಮರಗಳಿಗೆ ಬಳಸಿಕೊಳ್ಳಲಾಗುತ್ತದೆ. ವಿಸರ್ಜನೆ ವೇಳೆ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಪ್ರತ್ಯೇಕವಾಗಿಸಲಾಗುತ್ತಿದೆ. ಮಣ್ಣಿನ ಮೂರ್ತಿ ಹಾಗೂ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ನೀರಿಗೆ ಬಿಡಲಾಗುತ್ತಿದೆ. ಅಲ್ಲದೇ ಮೆಟ್ಟಿಲುಗಳ ಮೇಲೆ ನಿಂತು ಗಣೇಶ ಮೂರ್ತಿಗಳನ್ನು ವಿಸರ್ಜಿಸಬಹುದಾಗಿದೆ. ಶನಿವಾರ ಗಣೇಶ ಚತುರ್ಥಿ ಮುಗಿದ ಮೇಲೆ ಅನೇಕ ಜನರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ತಂದು ಹೊಂಡದಲ್ಲಿ ವಿಸರ್ಜಿಸುವ ಮೂಲಕ ಭಕ್ತಿಭಾವ ಮೆರೆದರು.
ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ನದಿ, ಕೆರೆ ನೀರನ್ನು ಕಲ್ಮಶ ಮಾಡುವುದನ್ನು ತಪ್ಪಿಸಲು ಹಾಗೂ ಜಲಚರಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದ ಮೇರೆಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತಾತ್ಕಾಲಿಕ ಹೊಂಡ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಗಣೇಶೋತ್ಸವ ಅಂಗವಾಗಿ ಸ್ಥಾಪಿಸಿರುವ ಗೌರಿ, ಗಣೇಶ ಮೂರ್ತಿಗಳನ್ನು ತಾತ್ಕಾಲಿಕ ಹೊಂಡದಲ್ಲಿ ವಿಸರ್ಜನೆ ಮಾಡುವ ಮೂಲಕ ಪರಿಸರ ರಕ್ಷಣೆಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮನವಿ ಮಾಡಿದ್ದಾರೆ.
5 ಅಡಿ ಅಳ ಹಾಗೂ 20 ಅಡಿ ಅಗಲದ ಹೊಂಡ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಪ್ರತ್ಯೇಕಗೊಳಿಸಲಾಗುತ್ತದೆ ವಿಸರ್ಜನೆ ಮುಗಿದ ಬಳಿಕ ನೀರು ಗಿಡ, ಮರಗಳಿಗೆ ಬಳಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.