ADVERTISEMENT

ಬೃಹತ್ ಪ್ರಮಾಣದ ಭೂಪರಿವರ್ತನೆಗೆ ಮುಂದುವರಿದ ವಿರೋಧ

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಮಾನವ ಸರಪಳಿ ರಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:44 IST
Last Updated 25 ಜೂನ್ 2024, 4:44 IST
ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾಫಿತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಸೋಮವಾರ ಗೋಣಿಕೊಪ್ಪಲಿನಲ್ಲಿ ಮಾನವ ಸರಪಳಿ ರಚಿಸಿದರು
ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾಫಿತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಸೋಮವಾರ ಗೋಣಿಕೊಪ್ಪಲಿನಲ್ಲಿ ಮಾನವ ಸರಪಳಿ ರಚಿಸಿದರು   

ಗೋಣಿಕೊಪ್ಪಲು: ಕಾಫಿತೋಟಗಳನ್ನು ಬೃಹತ್ ಪ್ರಮಾಣದಲ್ಲಿ ನಿವೇಶನಗಳನ್ನಾಗಿ ಪರಿವರ್ತಿಸಬಾರದು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ನಡೆಸುತ್ತಿರುವ ಹೋರಾಟ ಜಿಲ್ಲೆಯಲ್ಲಿ ಮುಂದುವರಿದಿದೆ.

ಸಿಎನ್‌ಸಿ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಗೋಣಿಕೊಪ್ಪಲುವಿನಲ್ಲಿ ಮಾನವ ಸರಪಳಿ ರಚಿಸಿ, ಕಾಫಿ ತೋಟಗಳು ನಿವೇಶನಗಳಾಗಿ ಬದಲಾಗುವುದರಿಂದ ಆಗುವ ಪರಿಣಾಮಗಳನ್ನು ಕುರಿತು ಜನರಲ್ಲಿ ಅರಿವು ಮೂಡಿಸಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾದಿಂದ ಕೊಡವ ಲ್ಯಾಂಡ್ ಅನ್ನು ರಕ್ಷಿಸಿಕೊಳ್ಳಲು ಸಮಸ್ತ ಕೊಡವರೂ ಒಗ್ಗೂಡಿ ಹೋರಾಟ ನಡೆಸಬೇಕು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಈ ವೇಳೆ ಕರೆ ನೀಡಿದರು.

ADVERTISEMENT

ಸಾವಿರಾರು ಎಕರೆಯಷ್ಟು ಕಾಫಿತೋಟವನ್ನು ಭೂಪರಿವರ್ತನೆ ಮಾಡಬಾರದು. ಭೂಮಾಫಿಯಾಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ಕಾಫಿ ತೋಟಗಳನ್ನು ಖರೀದಿಸುತ್ತಿದ್ದಾರೆ. ಇದರ ಹಿಂದೆ ಕಪ್ಪುಹಣ ಚಲಾವಣೆಯಾಗುವ ಸಂದೇಹ ಇದೆ. ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಹಣದ ಆಮಿಷ ಒಡ್ಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ಕೂಡಲೇ ತಡೆಯಬೇಕು ಎಂದು ಒತ್ತಾಯಿಸಿದರು.

ಈಗ ಕೊಡಗಿನಲ್ಲಿ ರೆಸಾರ್ಟ್‍ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್‌ಗಳು, ಟೌನ್ ಶಿಪ್‌ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಹಲವು ಯೋಜನೆಗಳು ತಯಾರಾಗುತ್ತಿವೆ. ಇದು ಪವಿತ್ರ ಕೊಡವ ಲ್ಯಾಂಡ್‌ನ ನಾಶಕ್ಕೆ ಕಾರಣವಾಗಬಹುದು ಎಂದೂ ಅವರು ಎಚ್ಚರಿಸಿದರು.

ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವೆಂದು ಪ್ರತಿಪಾದಿಸಿದರು.

ಜುಲೈ 1ರಂದು ಕಕ್ಕಬ್ಬೆ ಹಾಗೂ ಜುಲೈ 6ರಂದು ಚೆಟ್ಟಳ್ಳಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಚೇಂದಿರ ಶೈಲ, ಬಟ್ಟಿಯಂಡ ಕೃಪ ಸೋಮಯ್ಯ, ಅನನ್ಯ ಸೋಮಯ್ಯ, ಅನಿಂದ್ಯ ಸೋಮಯ್ಯ, ಕರ್ನಲ್ ಬಿ.ಎಂ. ಪಾರ್ವತಿ, ಬಲ್ಲಡಿಚಂಡ ಬೇಬಿ ಮೇದಪ್ಪ, ಮುದ್ದಿಯಡ ಲೀಲಾವತಿ, ಡಾ. ಕಾಳಿಮಾಡ ಶಿವಪ್ಪ, ಕೊಲ್ಲಿರ ಗಯಾ, ಕಂಬಿರಂಡ ಬೋಪಣ್ಣ, ಕಾಡ್ಯಮಾಡ ಗೌತಮ್, ಬಾಚರಣಿಯಂಡ ಚಿಪ್ಪಣ್ಣ ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ ಭಾಗವಹಿಸಿದ್ದರು.

ಕೊಡಗು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾಫಿತೋಟಗಳನ್ನು ಭೂಪರಿವರ್ತನೆ ಮಾಡಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡರು ಸೋಮವಾರ ಗೋಣಿಕೊಪ್ಪಲಿನಲ್ಲಿ ಮಾನವ ಸರಪಳಿ ರಚಿಸಿದರು

‘ಪ್ರವಾಸಿಗರ ದೌರ್ಜನ್ಯಕ್ಕೆ ಕಡಿವಾಣ ಹಾಕಿ‘

‘ಪವಿತ್ರ ಕೊಡವ ಲ್ಯಾಂಡ್‌ನಲ್ಲಿ ನಿತ್ಯ ಪ್ರವಾಸಿಗರ ಮೋಜು ಮಸ್ತಿ ದೌರ್ಜನ್ಯ ನಡೆಯುತ್ತಿದೆ. ಆದಾಯ ಕ್ರೋಡೀಕರಣಕ್ಕಾಗಿ ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಂತಹ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆಗಳಿಗೆ ಅವಕಾಶ ಹಾಗೂ ಅನುಕೂಲ ಕಲ್ಪಿಸುತ್ತಿದೆ. ಇದರ ಪರಿಣಾಮ ಪ್ರವಾಸಿಗರಿಂದಾಗಿ ಮೂಲನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಂಧಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲ ಇಲ್ಲದಂತ್ತಾಗುತ್ತದೆ’ ಎಂದು ಎನ್.ಯು.ನಾಚಪ್ಪ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.