ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ನಡೆಯುವ ಶ್ರೀ ಗಣಪತಿ ರಥೋತ್ಸವ ಹಾಗೂ ಉತ್ಸವ ನ.19ರಂದು ಮಧ್ಯಾಹ್ನ 12 ಗಂಟೆಗೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.
ನಿತ್ಯ ಬೆಳಿಗ್ಗೆ, ಸಂಜೆ ವಿಶೇಷ ಪೂಜೆ ಇರುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ 10 ದಿನಗಳ ಕಾಲ ಸಂಭ್ರಮ ಮನೆ ಮಾಡಿರುತ್ತದೆ. ಬ್ರಹ್ಮ ರಥೋತ್ಸವ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿದೆ. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ, ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ಆರ್.ಕೆ.ನಾಗೇಂದ್ರ ಬಾಬು ದೇವಾಲಯ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ತೀಕ ಮಾಸ ಕೃಷ್ಣ ಪಕ್ಷದಲ್ಲಿ ಸಲ್ಲುವ ಬಹುಳ ಚತುರ್ಥಿ ಲಗ್ನದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ರಥೋತ್ಸವ
ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮ: ನ.15ರಂದು ಶ್ರೀ ಸತ್ಯನಾರಾಯಣ ಪೂಜೆ, 16ರಂದು ಪಂಚಾಮೃತ ಅಭಿಷೇಕ, 17ರಂದು ಮೂಷಿಕ ವಾಹನ ಉತ್ಸವ, 18ರಂದು ಚಂದ್ರಬಿಂಬೋತ್ಸವ, 19ರಂದು ರಥೋತ್ಸವ ಹಾಗೂ ಪಲ್ಲಕಿ ಉತ್ಸವ, 20ರಂದು ಮಂಟಪೋತ್ಸವ, 21ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 22 ರಂದು ಅನ್ದೋಲಿಕೋತ್ಸವ, ಡೋಲ್ದೋತ್ಸವ, 23ರಂದು ತೆಪ್ಪೋತ್ಸವ (ಕಾವೇರಿ ನದಿಯಲ್ಲಿ) ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವದ ಅಂಗವಾಗಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದೆ. ಪುರಸಭೆ ವತಿಯಿಂದ ಪಟ್ಟಣವನ್ನು ಶುಚ್ಚಿಗೊಳಿಸಲಾಗುತ್ತಿದೆ.
ಡಿ. 7ರಿಂದ ಗೋಜಾತ್ರೆ: ‘ಡಿ.7 ರಿಂದ 9ರವರೆಗೆ ಗೋಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲೆ ಹಾಗೂ ನೆರೆ ಜಿಲ್ಲೆಯಿಂದ ರೈತರು ಪಾಲ್ಗೊಳ್ಳಲಿದ್ದು, ತಳಿಯ ರಾಸುಗಳ ಪ್ರದರ್ಶನ ನಡೆಯಲಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್,ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡಾರೀಕಾಕ್ಷ, ವಿ.ಪಿ.ಶಶಿಧರ್, ಟಿ.ಆರ್.ಶರವಣಕುಮಾರ್, ಎಚ್.ಎಂ.ಚಂದ್ರು, ವಿಶೇಷ ಆಹ್ವಾನಿತರಾದ ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ,ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡ ಸ್ಚಾಮಿ,ಎಂ.ಮುನಿರಾಜು, ವಿ.ಎಸ್.ಆನಂದಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಚೋಳರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತೆಂದು ಹೇಳಲಾಗುತ್ತದೆ. 1700ರ ಸುಮಾರಿನಲ್ಲೇ ಈ ದೇವಾಲಯ ಇತ್ತು ಎನ್ನುವುದಕ್ಕೆ ಕೊಡಗು ಗೆಜೆಟಿಯರ್‌ನಲ್ಲಿ ಉಲ್ಲೇಖ ದೊರೆಯುತ್ತದೆ. ಹೈದರಾಲಿ ಕೊಡಗಿನ ಕಡೆ ದಂಡೆತ್ತಿ ಬಂದಿದ್ದಾಗ ಕೊಡಗಿನ ಅರಸ ದೊಡ್ಡವೀರರಾಜೇಂದ್ರ ಗಡಿಭಾಗ ಕೊಪ್ಪ ಕಾವೇರಿ ನದಿ ಬಳಿ ಹೈದರಾಲಿಯನ್ನು ಯುದ್ಧದಲ್ಲಿ ಸೋಲಿಸಿ ಹಿಮ್ಮೆಟ್ಟಿಸಿದ್ದರು. ನಂತರ ಗೆಲುವಿನ ಸಂಭ್ರಮದೊಂದಿಗೆ ಮಡಿಕೇರಿಗೆ ಹಿಂತಿರುಗುತ್ತಿರುವಾಗ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು ಎನ್ನುವುದು ಕೊಡಗು ಗೆಜೆಟಿಯರ್‌ನಲ್ಲಿ ದಾಖಲಾಗಿದೆ. ಮೊದಲು ಇಲ್ಲಿ ಮೂಲ ಮೂರ್ತಿಗೆ ಕೇವಲ ಒಂದು ಗುಡಿ ಎದುರಿಗೆ ಗೋಪುರ ಮಾತ್ರ ಇತ್ತು. 1971ರಲ್ಲಿ ಚಾವಣಿಗೆ ಕಲ್ನಾರ್ ಶೀಟ್ ಹಾಕಲಾಯಿತು. 1990ರ ನಂತರ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ಶುರುವಾಗಿ ಈಗಿನ ಆಕರ್ಷಕ ರೂಪಕ್ಕೆ ಬಂದು ನಿಂತಿದೆ. ಇಲ್ಲಿನ ನಿವಾಸಿ ವಿ.ಎನ್.ವಸಂತ ಕುಮಾರ್ 1981ರಿಂದಲೇ ದೇವಾಲಯ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರು ನಿವೃತ್ತಿಯಾಗಿದ್ದು ದೇವಾಲಯ ಸಮಿತಿ ನೂತನ ಅಧ್ಯಕ್ಷರಾಗಿ ಎಂ.ಕೆ.ದಿನೇಶ್ ದೇವಾಲಯದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ.
22 ಅಡಿ ಎತ್ತರದ ರಥವನ್ನು ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಸೋಮವಾರಪೇಟೆಯ ಬೀಟಿಕಟ್ಟೆಯ ಶಿಲ್ಪಿ ಸಿ.ಮಂಜುನಾಥ್ ಆಚಾರ್ಯ ನೇತೃತ್ವದಲ್ಲಿ 12 ಶಿಲ್ಪಿಗಳು ಒಂದು ವರ್ಷ ರಥವನ್ನು ಕೆತ್ತಿದ್ದಾರೆ. ಹೊಯ್ಸಳರ ಕಲಾ ಶೈಲಿ ಹೋಲುವಂತಿರುವ ಕೆತ್ತನೆಗಳಿದ್ದು ಆಧುನಿಕತೆಯ ಮೆರಗು ನೀಡಲಾಗಿದೆ. ರಥದ ಬಹುಭಾಗಕ್ಕೆ ಕಿರಾಲ್ ಭೋಗಿ ಮರಬಳಸಲಾಗಿದ್ದು ಚಕ್ರಗಳನ್ನು ಹೆಬ್ಬಾಲಸಿನ ಮರಗಳಿಂದ ಮಾಡಲಾಗಿದೆ. ಸೂಕ್ಷ್ಮ ಕೆತ್ತನೆ ಹಾಗೂ ವಾಸ್ತುವಿಗೂ ಯೋಗ್ಯವಾದ ಸಾಗುವಾನಿ ಮರದಿಂದ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದ್ದು ಆಕರ್ಷಕವಾಗಿದೆ. ನಾಲ್ಕು ಅಂತಸ್ತಿನ ರಥದಲ್ಲಿ ಮಕರ ದೇಹ ಹೊತ್ತ ಆನೆ ಮುಖದ ಪ್ರಾಣಿ ವಿವಿಧ ಆಕಾರದ ಆನೆಗಳು ಎರಡು ಅಡಿ ಎತ್ತರದ ನಾಲ್ಕು ಸಿಂಹಗಳನ್ನು ಕೆತ್ತಲಾಗಿದೆ .ಒಟ್ಟು72 ದೇವರ ವಿಗ್ರಹಗಳು ರಥದಲ್ಲಿ ಇವೆ.
ರಥೋತ್ಸವಕ್ಕೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಮೈಸೂರು ಜಿಲ್ಲೆಯ ಗಡಿ ಭಾಗದ ಗ್ರಾಮಗಳ ಸಹಸ್ರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ–ಎಂ.ಕೆ.ದಿನೇಶ್ ಅಧ್ಯಕ್ಷರು ದೇವಾಲಯ ಸಮಿತಿ.
ಪ್ರತಿ ವರ್ಷದ ರೂಢಿಯಂತೆ ಈ ಬಾರಿ ಸೇವಾರ್ಥದಾರರ ಬದಲಿಗೆ ಆಡಳಿತ ಮಂಡಳಿ ವತಿಯಿಂದಲೇ ಬಾಣಸಿಗರನ್ನು ಏರ್ಪಡಿಸಿ ಅವರಿಂದಲೇ ನೈವೇದ್ಯ ಪ್ರಸಾದ ತಯಾರಿಕೆಗೆ ಒತ್ತು ನೀಡಲಾಗಿದೆ–ಆರ್.ಕೆ.ನಾಗೇಂದ್ರಬಾಬು ಪ್ರಧಾನ ಅರ್ಚಕ ಗಣಪತಿ ದೇವಾಲಯ
ಈ ಬಾರಿ 13 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಪ್ರತಿಭೆಗಳು ಒಳಗೊಂಡಂತೆ ಪ್ರಸಿದ್ಧ ಕಲಾವಿದರು ಭಾಗಿಯಾಗಲಿದ್ದಾರೆ–ವಿ.ಪಿ.ಶಶಿಧರ್ ಸಂಚಾಲಕ ಸಾಂಸ್ಕೃತಿಕ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.