ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿ ರಾಜಾಸೀಟ್ ಉದ್ಯಾನದಲ್ಲಿ ಶನಿವಾರ ಸಂಜೆ ಚಳಿಯ ವಾತಾವರಣದ ನಡುವೆ ಕಲಾವಿದರು ಸಾಂಸ್ಕೃತಿಕ ರಸದೌತಣ ಉಣಬಡಿಸಿದರು.
ರಾಜಾಸೀಟ್ ಉದ್ಯಾನದ ಕೆಳಭಾಗದ ವೀಕ್ಷಣಾ ಸ್ಥಳದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ರಾಜಾಸೀಟು ಅಭಿವೃದ್ಧಿ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡೊಳ್ಳು ಕುಣಿತ, ವೀರಗಾಸೆ, ಗೀತ ಗಾಯನಕ್ಕೆ ಪ್ರವಾಸಿಗರೂ ಸಾಕ್ಷಿಯಾದರು. ಸ್ಯಾಕ್ಸೋವಾದನ, ಕೊಡವ, ಅರೆಭಾಷೆ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಇನ್ನು 2ನೇ ಶನಿವಾರ ಸಂಜೆ 4.30ರಿಂದ 6.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಕಲಾವಿದರು, ಶಾಲಾ ಮಕ್ಕಳಿಂದ ನಡೆಸಲು ತೀರ್ಮಾನಿಸಲಾಗಿದೆ.
ಸಾಂಸ್ಕೃತಿಕ ಜನಪದ ಕಲೆಗಳಲ್ಲಿ ತೊಡಗಿರುವ ಬೆಳಕಿಗೆ ಬಾರದ ಕಲಾವಿದರನ್ನು ಗುರುತಿಸಿ ಅವರ ಕಲೆಗೆ ಉತ್ತೇಜನ ನೀಡಬೇಕು. ಕಲಾವಿದರಿಗೆ ಪ್ರೋತ್ಸಾಹ ಕಲಾ ಸಂಸ್ಕೃತಿ ಉಳಿಯುತ್ತದೆ. ಕೊಡಗಿನ ಆಚಾರ– ವಿಚಾರ ಪದ್ಧತಿಯನ್ನು ಪರಿಚಯಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ಎಂದು ತೋಟಗಾರಿಕೆ ಉಪ ನಿರ್ದೇಶಕರ ಚಂದ್ರಶೇಖರ್ ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡಬಂದರು. ಗ್ಯಾಲರಿಯಲ್ಲಿ ಹೆಚ್ಚು ಮಂದಿಗೆ ಕೂರಲು ವ್ಯವಸ್ಥೆ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.