ADVERTISEMENT

‘ಒಗ್ಗೂಡುವಿಕೆಯಿಂದ ಸಾಂಸ್ಕೃತಿಕ ಬಲವರ್ಧನೆ’

ಗಿರಿಜನ ಕಾಡು ಹಬ್ಬ: ಸಂಭ್ರಮಿಸಿದ ಯುವಜನತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:37 IST
Last Updated 26 ಜೂನ್ 2024, 5:37 IST
ಗೋಣಿಕೊಪ್ಪಲುವಿನ ಖಾಸಗಿ ಹೊಟೆಲ್ ಸಭಾಂಗಣದಲ್ಲಿ ನಡೆದ ಸಮಗ್ರ ಗಿರಿಜನ ಅಭಿವೃದ್ದಿ ಕಲಾ ಸಂಸ್ಥೆಯ ‘ಕಾಡು ಹಬ್ಬ’ವನ್ನು ಶಾಸಕ ಎ.ಎಸ್.ಪೊನ್ನಣ್ಣ ಜೇನುಪೆಟ್ಟಿಗೆ ಬಿಚ್ಚಿ ಜೇನುತುಪ್ಪ ಸವಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗೋಣಿಕೊಪ್ಪಲುವಿನ ಖಾಸಗಿ ಹೊಟೆಲ್ ಸಭಾಂಗಣದಲ್ಲಿ ನಡೆದ ಸಮಗ್ರ ಗಿರಿಜನ ಅಭಿವೃದ್ದಿ ಕಲಾ ಸಂಸ್ಥೆಯ ‘ಕಾಡು ಹಬ್ಬ’ವನ್ನು ಶಾಸಕ ಎ.ಎಸ್.ಪೊನ್ನಣ್ಣ ಜೇನುಪೆಟ್ಟಿಗೆ ಬಿಚ್ಚಿ ಜೇನುತುಪ್ಪ ಸವಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.   

ಗೋಣಿಕೊಪ್ಪಲು: ಹಾಡು ನೃತ್ಯ, ಕುಣಿತ ಮೊದಲಾದವುಗಳ ಮೂಲಕ ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯ ಸಮಗ್ರ ಗಿರಿಜನ ಅಭಿವೃದ್ಧಿ ಕಲಾ ಸಂಸ್ಥೆಯ ಕಾಡು ಹಬ್ಬ ಮಂಗಳವಾರ ಗೋಣಿಕೊಪ್ಪಲು ಪಟ್ಟಣದಲ್ಲಿ ಕಳೆಗೊಂಡಿತು.

ನಾಗರಹೊಳೆ ಸುತ್ತಮುತ್ತಲ ಹಾಡಿಯ ಜನ ಮತ್ತು ಕಲಾವಿದರು ಪಾಲ್ಗೊಂಡು ಸಂಭ್ರಮಿಸಿದರು.

ನಾಣಚ್ಚಿ ಗದ್ದೆಹಾಡಿಯ ರಮೇಶ್ ತಂಡದವರ ಅಜ್ಜಯ್ಯಜನ ಕುಣಿತ, ತಟ್ಟೆಕೆರೆ ಗಿರಿಜನ ಹಾಡಿಯ ಕೊಳಲು ವಾದನ, ಚೊಟ್ಟೆಪಾರಿ ಗಿರಿಜನ ಹಾಡಿಯ ಗೀಜುಗನ ಕುಣಿತ ನೆರೆದಿದ್ದ ಪ್ರೇಕ್ಷರನ್ನು ರಂಜಿಸಿತು. ಗಿರಿಜನ ಯುವಕ–ಯುವತಿಯರು ಮೈಯಲ್ಲಿ ಸೊಪ್ಪು ಸುತ್ತಿಕೊಂಡು ಮುಖಕ್ಕೆ ಬಣ್ಣ ಬಳಿದುಕೊಂಡು ತಮ್ಮದೇ ಆದ ತಾಳಮೇಳಕ್ಕೆ ಕುಣಿದು ಕುಪ್ಪಳಿಸಿದರು. ಇದರ ಜತೆಗೆ ಹತ್ತಾರು ಬಗೆಯ ಬುಡಕಟ್ಟು ಕಲೆಗಳು ಪ್ರದರ್ಶನಗೊಂಡವು.

ADVERTISEMENT

ಒಟ್ಟುಗೂಡುವಿಕೆಯಿಂದ ಸಾಂಸ್ಕೃತಿಕ ಬಲವರ್ಧನೆ:

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ‘ಕೊಡಗಿನ ಮೂಲ ನಿವಾಸಿಗಳು ಆಚಾರ ವಿಚಾರಗಳ ಮೂಲಕ ದೇಶ ವಿದೇಶಗಳ ಗಮನ ಸೆಳೆದಿದ್ದಾರೆ. ಎಲ್ಲರೂ ಒಟ್ಟುಗೂಡಿದಾಗ ಮಾತ್ರ ಸಾಂಸ್ಕೃತಿಕವಾಗಿ ಬಲಗೊಳ್ಳಲು ಸಾಧ್ಯ. ಬುಡಕಟ್ಟು ಜನರು ಎಲ್ಲಿಯೂ ಮತ್ತು ಯಾವುದೇ ಸಂದರ್ಭದಲ್ಲಿಯೂ ತಮ್ಮತನವನ್ನು ಬಿಟ್ಟುಕೊಡಬಾರದು. ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಬೇಕು’ ಎಂದು ಹೇಳಿದರು.

‘ಬುಡಕಟ್ಟು ಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ದೊರಕಿಸಿಕೊಡಬೇಕು. ಜತೆಗೆ ಕಾನೂನು, ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಇದರಲ್ಲಿ ಮಾಧ್ಯಮದ ಪಾತ್ರವೂ ಮುಖ್ಯವಾಗಿದೆ. ಗಿರಿಜನರು ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಕಾಡಿನಿಂದ ಹೊರಬರಬೇಕಾದರೆ ಎದುರಾಗುವ ಸವಾಲುಗಳ ಬಗೆಗೂ ಚಿಂತಿಸಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜ ಮಾತನಾಡಿ, ‘ಗಿರಿಜನರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಸಮಸ್ಯೆ ಇತ್ತು. ಇದನ್ನು ನಿವಾರಿಸಲು ಹಾಡಿಗಳಿಗೆ ಹೋಗಿ 4000 ಸಾವಿರ ಆಧಾರ್ ಕಾರ್ಡ್ ನೀಡಲಾಯಿತು. ಮುಂದೆಯೂ ಇದೇ ರೀತಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಮನೆ ಮನೆಗೆ ತೆರಳಿ ತಲುಪಿಸಲಾಗುವುದು’ ಎಂದು ತಿಳಿಸಿದರು.

‘ಗಿರಿಜನರು ಸಾಂಸ್ಕೃತಿಕವಾಗಿ ಶ್ರೀಮಂತರಿದ್ದು, ಇವರ ಕಲೆ ಉಳಿಯಬೇಕಾದರೆ ಅವಕಾಶ ನೀಡಬೇಕು. ದಸರಾ ಹಾಗೂ ಗಣಪತಿ ಉತ್ಸವಗಳಲ್ಲಿ ಅವಕಾಶ ನೀಡಿ ಅವರನ್ನು ಪ್ರೋತ್ಸಾಹಿಸಬೇಕು’ ಎಂದರು.

‘ಗಿರಿಜನ ಸಂಸ್ಕೃತಿ ಉಳಿಸಲು ದಾಖಲೀಕರಣದ ಅಗತ್ಯವಿದೆ. ಇದರ ಕಡೆಗೆ ಗಮನಹರಿಸಲಾಗುವುದು’ ಎಂದು ತಿಳಿಸಿದರು.

ಕುಡಿಯ ಮೂಲ ನಿವಾಸಿ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ‘ಹಾಡಿಯ ಜನರು ಎದುರಿಸುತ್ತಿರುವ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕು. ಒಗ್ಗಟ್ಟಾಗಿದ್ದರೆ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ’ ಎಂದರು.

ತಿತಿಮತಿ ಲ್ಯಾಂಪ್ ಸೊಸೈಟಿ ಉಪಾಧ್ಯಕ್ಷೆ ಜೆ.ಆರ್.ಪುಷ್ಪಾ, ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಯ್ಯ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಪ್ಪ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಐಟಿಡಿಪಿ ಅಧಿಕಾರಿ ನವೀನ್, ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಣ್ಣ, ಚನ್ನನಾಯಕ್ ಹಾಜರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಕಲಾ ಸಂಘದ ಅಧ್ಯಕ್ಷ ಜೆ.ಬಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಜೆ.ಬಿ.ರಮೇಶ್ ಮತ್ತು ತಂಡದವರು ಅಜ್ಜಯ್ಯನ ಹಾಡಿನ ಮೂಲಕ ರಂಜಿಸಿದರು.
ಗಿರಿಜನ ಯುವತಿಯರು ಅಜ್ಜಯ್ಯನ ಹಾಡಿಗೆ ನೃತ್ಯ ಪ್ರದರ್ಶಿಸಿದರು. 
ಕೂರನ ವೇಷ ಧರಿಸಿದ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.