ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ದಲಿತ ರತ್ನ’ ಪ್ರಶಸ್ತಿಯನ್ನು ಜೂನ್ 2ನೇ ವಾರದಲ್ಲಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದರು.
ಜಿಲ್ಲಾ ಘಟಕದ ವತಿಯಿಂದ ಈ ಮೊದಲೇ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಜೂನ್ 2ನೇ ವಾರದಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗುವುದು. ಸಿದ್ದರಾಮಯ್ಯ ಅವರನ್ನು ಕರೆಸಲು ಯತ್ನಿಸಲಾಗುವುದು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಕಾರ್ಯಕ್ರಮಕ್ಕೆ ಸುಮಾರು 8 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ನಗರದಲ್ಲಿ ಅಂದು ಭವ್ಯವಾದ ಮೆರವಣಿಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ರಾಜಕೀಯ ರಹಿತವಾದ ದಲಿತ ಸಂಘರ್ಷ ಸಮಿತಿಯು ಬಿಜೆಪಿ ಸರ್ಕಾರದ ದಲಿತ ವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ನೀಡಿತು. ಇದರಿಂದಾಗಿಯೇ ಕಾಂಗ್ರೆಸ್ ಅಭೂತಪೂರ್ವ ಬಹುಮತ ಪಡೆಯಿತು. ಇದು ದಲಿತರನ್ನು ನಿರ್ಲಕ್ಷಿಸುವವರಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ ಎಂದರು.
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಮಿತಿಯ ಕಾರ್ಯಕರ್ತರು ಬಹುವಾಗಿ ಶ್ರಮಿಸಿದ್ದಾರೆ. ಇವರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಸಮಿತಿಯ ಮಡಿಕೇರಿ ತಾಲ್ಲೂಕು ಘಟಕದ ಸಂಚಾಲಕ ದೀಪಕ್ ಪೊನ್ನಪ್ಪ, ನಗರ ಸಂಘಟನಾ ಸಂಚಾಲಕ ಪಿ.ಎಂ.ಲೋಕನಾಥ್, ನಗರ ಸಂಚಾಲಕ ಸಿದ್ದೇಶ್ವರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.