ADVERTISEMENT

ಗಮನ ಸೆಳೆದ ಹಗ್ಗಜಗ್ಗಾಟ, ಬಾಸ್ಕೆಟ್‌ಬಾಲ್ ಸ್ಪರ್ಧೆ

ಗೋಣಿಕೊಪ್ಪಲು ಮಹಿಳಾ ದಸರಾದಲ್ಲಿ ನಡೆದ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 5:06 IST
Last Updated 7 ಅಕ್ಟೋಬರ್ 2024, 5:06 IST
ಗೋಣಿಕೊಪ್ಪಲು ಮಹಿಳಾ ದಸರಾದಲ್ಲಿ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಗೋಣಿಕೊಪ್ಪಲು ಮಹಿಳಾ ದಸರಾದಲ್ಲಿ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು   

ಗೋಣಿಕೊಪ್ಪಲು: ಪುರುಷರಿಗೆ ನಾವೇನೂ ಕಡಿಮೆಯಿಲ್ಲ ಎಂಬಂತೆ ಹಗ್ಗ ಎಳೆದು ಜಯಿಸಿ ಟ್ರೋಫಿ ಹಿಡಿದು ಕುಣಿದಾಡಿದ ಮಹಿಳೆಯರು, ಎದುರಾಳಿಗಳ ಕೈತಪ್ಪಿಸಿ ಚೆಂಡನ್ನು ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಿ ಬಾಸ್ಕೆಟ್‌ಗೆ ಹಾಕಿ ಕುಣಿದು ಕುಪ್ಪಳಿಸಿದರು...

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಹಿಳಾ ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಕಂಡುಬಂದ ದೃಶ್ಯಗಳಿವು.

ಮಹಿಳೆಯರು ಬೆಳಗ್ಗಿನಿಂದಲೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡರು. ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಹಗ್ಗಜಗ್ಗಾಟ, ಬಾಸ್ಕೆಟ್‌ ಬಾಲ್, ಸಂಗೀತ ಕುರ್ಚಿ, ಬಾಲ್ ಇನ್‌ ದ ಬಕೆಟ್ ಸ್ಪರ್ಧೆಗಳು ತೀವ್ರ ಹಣಾಹಣಿಯಿಂದ ಕೂಡಿದ್ದವು.

ADVERTISEMENT

ಮಹಿಳೆಯರ ತಂಡಗಳು ತಾವು ಗೆಲ್ಲಲೇಬೇಕು ಎಂಬ ಛಲದಿಂದ ಹಗ್ಗ ಜಗ್ಗಾಟದಲ್ಲಿ ತೀವ್ರ ಪ್ರತಿರೋಧ ತೋರಿದವು. ಎರಡು ತಂಡಗಳು ತಮ್ಮ ಬೆಂಬಲಿಗರ ಕಿರುಚಾಟ, ಕೂಗಾಟ, ಪ್ರೋತ್ಸಾಹದಿಂದಾಗಿ ಮತ್ತಷ್ಟು ಹುರುಪು ತುಂಬಿಕೊಂಡು ಶಕ್ತಿ ಮೀರಿ ಹಗ್ಗ ಎಳೆಯಲು ಮುಂದಾದವು. ಹಗ್ಗ ಕೆಲವೊಮ್ಮೆ ಬಲಕ್ಕೆ ಸಾಗಿದರೆ, ಮಗದೊಮ್ಮೆ ಎಡಕ್ಕೆ ಸಾಗುತ್ತಿತ್ತು, ಕುತೂಹಲ ಮೂಡಿಸಿತ್ತು.

ಇದೇ ರೀತಿ ಬಾಸ್ಕೆಟ್‌ಬಾಲ್ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಜತೆಗೆ ಸಂಗೀತ ಕುರ್ಚಿ ಮೊದಲಾದವು ಮನರಂಜನೆ ನೀಡಿದವು. ಮೋಡ ಕವಿದು ತಂಪಾಗಿದ್ದ ವಾತಾವರಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೈದಾನ ತುಂಬಾ ಸಂಭ್ರಮಿಸಿದರು.

ಕ್ರೀಡಾಕೂಟ ಮುಗಿದ ಬಳಿಕ ನಡೆದ ಫ್ಯಾಷನ್‌ ಷೋನಲ್ಲಿ ವಿವಿಧ ಬಗೆಯ ಉಡುಪುಗಳನ್ನು ತೊಟ್ಟು ನಲಿದಾಡಿದರು. ನೀಳ ಕೇಶರಾಶಿ ಬಿಟ್ಟು, ಸೀರೆ ಸೆರಗು ಹಿಡಿದು ವೇದಿಕೆಯಲ್ಲಿ ಲಯಬದ್ಧ ಹೆಜ್ಜೆ ಹಾಕಿದರೆ, ಮತ್ತೆ ಕೆಲವರು ಕೊಡವ ಉಡುಗೆ, ಪಂಜಾಬಿ ಉಡುಪು ತೊಟ್ಟು ಕಂಗೊಳಿಸಿದರು.

ಆರಂಭದಲ್ಲಿ ಸಭಾ ಕಾರ್ಯಕ್ರಮವನ್ನು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಬಹುಮಾನ ವಿತರಣಾ ಸಮಾರಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.

ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು
ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.