ADVERTISEMENT

ಕೊಡಗು | ದಸರಾ ನಗರಿ ಸಾಲದು ತಯಾರಿ; ಶಾಶ್ವತ ಕಾಮಗಾರಿಗಳ ಕೊರತೆ

ಪ್ರತಿ ವರ್ಷವೂ ಗುಂಡಿ ಮುಚ್ಚಲು, ವೇದಿಕೆ ನಿರ್ಮಾಣಕ್ಕೆ ಹಣ ವ್ಯಯ

ಕೆ.ಎಸ್.ಗಿರೀಶ್
Published 28 ಸೆಪ್ಟೆಂಬರ್ 2024, 6:34 IST
Last Updated 28 ಸೆಪ್ಟೆಂಬರ್ 2024, 6:34 IST
ಗೋಣಿಕೊಪ್ಪಲಿನ ದಸರಾ ಮೈದಾನಕ್ಕೆ ಹೋಗುವ ರಸ್ತೆಯನ್ನು ಕಾಂಕ್ರಿಟ್‌ನಿಂದ ನಿರ್ಮಿಸಲಾಗಿದೆ.
ಗೋಣಿಕೊಪ್ಪಲಿನ ದಸರಾ ಮೈದಾನಕ್ಕೆ ಹೋಗುವ ರಸ್ತೆಯನ್ನು ಕಾಂಕ್ರಿಟ್‌ನಿಂದ ನಿರ್ಮಿಸಲಾಗಿದೆ.   

ಮಡಿಕೇರಿ: ಒಂದೆಡೆ ದಸರೆಗೆ ಸಂಬಂಧಿಸಿದಂತೆ ಗೋಣಿಕೊಪ್ಪಲಿನಲ್ಲಿ ಸ್ಪಲ್ಪವಾದರೂ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿ ನಡೆದರೂ, ಮಡಿಕೇರಿಯಲ್ಲಿ ಮಾತ್ರ ಯಾವುದೇ ಶಾಶ್ವತ ಕಾಮಗಾರಿಗಳೂ ನಡೆದಿಲ್ಲ.

ಪ್ರತಿ ವರ್ಷವೂ ದಸರೆಗೆ ಒಂದೆರಡು ದಿನಗಳಿದ್ದಾಗ ಗುಂಡಿ ಮುಚ್ಚುವುದು, ದಸರೆ ಮುಗಿದು ಒಂದು ಮಳೆ ಬರುತ್ತಿದ್ದಂತೆ ಮತ್ತೆ ಗುಂಡಿ ಬೀಳುವುದು ಸಾಮನ್ಯ ಸಂಗತಿ ಎನಿಸಿಬಿಟ್ಟಿದೆ. ಗುಂಡಿ ಮುಚ್ಚುವುದಕ್ಕೆಂದೇ ಈ ಬಾರಿ ₹ 18 ಲಕ್ಷ ಹಣವನ್ನು ತೆಗೆದಿರಿಸಲಾಗಿದೆ ಎಂದು ಪೌರಾಯುಕ್ತ ರಮೇಶ್ ಹೇಳುತ್ತಾರೆ. ಪ್ರತಿ ವರ್ಷವೂ ಈ ರೀತಿ ಗುಂಡ ಮುಚ್ಚುವುದಕ್ಕೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸುವುದು ಎಷ್ಟು ಸರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಮೈಸೂರಿನಲ್ಲಿ ಜಂಬೂ ಸವಾರಿ ಮಾರ್ಗದಲ್ಲಿ ಪ್ರತಿ ದಸರೆಯಲ್ಲೂ ಗುಂಡಿ ಮುಚ್ಚುವುದಕ್ಕೆಂದೇ ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಗುತ್ತಿತ್ತು. ಆದರೆ, ಆ ಮಾರ್ಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ ಶಾಶ್ವತ ರಸ್ತೆಯನ್ನಾಗಿ ಮಾಡಿದ್ದರ ಫಲವಾಗಿ ಆಗ ಮಾರ್ಗದಲ್ಲಿ ಗುಂಡಿ ಮುಚ್ಚುವುದಕ್ಕೆಂದು ಬಳಸುವ ಹಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಇದೇ ಬಗೆಯಲ್ಲಿ ಈಗ ಗೋಣಿಕೊಪ್ಪಲಿನಲ್ಲೂ ಮಾಡಲಾಗುತ್ತಿದೆ. ಆದರೆ, ಈ ಬಗೆಯ ದೂರದೃಷ್ಟಿ ಇಲ್ಲಿನ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

ಹಿಂದೆ ನಡೆದಿತ್ತು ಶಾಶ್ವತ ಕಾಮಗಾರಿ

ಈ ಹಿಂದೆ 2021ರಲ್ಲಿ ದಸರೆಗೆ ಸಂಬಂಧಿಸಿದ ಶಾಶ್ವತ ಕಾಮಗಾರಿಯೊಂದು ನಡೆದಿತ್ತು. ಅಂದು ಮಡಿಕೇರಿ ನಗರ ದಸರಾ ಜನೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಕೆ.ಎಸ್.ರಮೇಶ್ ಅವರು, ದಸರೆಗಾಗಿ ಸರ್ಕಾರದ ನೀಡಿದ ಹಣವನ್ನು ಉಳಿಸಿ ಗಾಂಧಿ ಮೈದಾನದಲ್ಲಿ ಗ್ಯಾಲರಿ ನಿರ್ಮಾಣ ಕಾರ್ಯಕ್ಕೆ ಅದನ್ನು ವಿನಿಯೋಗಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘2021ರಲ್ಲಿ ದಸರೆಗಾಗಿ ₹ 1 ಕೋಟಿ ಹಣ ಬಂದಿತ್ತು. ಅದರಲ್ಲಿ ₹ 25 ಲಕ್ಷ ಮಾತ್ರ ದಸರೆಗಾಗಿ ವ್ಯಯಿಸಿ, ₹ 75 ಲಕ್ಷದಲ್ಲಿ ಶಾಶ್ವತವಾದ ಗ್ಯಾಲರಿಯನ್ನು ನಿರ್ಮಿಸಲಾಯಿತು’ ಎಂದರು.

ಆನಂತರ ಈ ಬಗೆಯ ಶಾಶ್ವತ ಕಾಮಗಾರಿಗಳು ದಸರೆಗೆ ಸಂಬಂಧಿಸಿದಂತೆ ನಗರದಲ್ಲಿ ನಡೆದಿಲ್ಲ.

ವೇದಿಕೆಯ ನಿರ್ಮಾಣಕ್ಕೆ ‌ಪ್ರತಿವರ್ಷವೂ ₹ 35 ‌ಲಕ್ಷ ‌ವ್ಯಯವಾಗುತ್ತಿದೆ. ಸರ್ಕಾರ ಅಥವಾ ನಗರಸಭೆ ಯಾವುದಾದರೂ ಅನುದಾನದಲ್ಲಿ ದಸರೆಗೆ ಸಂಬಂಧಿಸಿದಂತೆ ಶಾಶ್ವತ ವೇದಿಕೆಯೊಂದನ್ನು ನಿರ್ಮಿಸಿಕೊಟ್ಟರೆ ಪ್ರತಿ ವರ್ಷ ಖರ್ಚಾಗುವ ಈ ಹಣವೂ ಉಳಿಯುತ್ತದೆ ಎಂಬ ಒತ್ತಾಯವೂ ಪ್ರತಿ ಬಾರಿ ದಸರಾ ಪೂರ್ವಭಾವಿ ಸಭೆಯಲ್ಲಿ ಕೇಳಿ ಬರುತ್ತಿದೆ. ಆದರೆ, ಇದು ಒತ್ತಾಯವಾಗಿಯೇ ಉಳಿದಿದೆ.

ಮಡಿಕೇರಿಯ ದಸರೆಯ ಪ್ರಮುಖ ರಸ್ತೆ ಮಹದೇವಪೇಟೆ ರಸ್ತೆಯ ಸ್ಥಿತಿ ಶುಕ್ರವಾರ ಕಂಡು ಬಂದಿದ್ದು ಹೀಗೆ

Quote - ಪ್ರತಿ ದಸರಾ ಸಮಿತಿಯ ಅಧ್ಯಕ್ಷರು ಹಣ ಉಳಿಸಿ ಯಾವುದಾದರೂ ಕೊಡುಗೆ ಕೊಡಬಹುದು. ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು ಕೆ.ಎಸ್.ರಮೇಶ್ ಮಡಿಕೇರಿ ದಸರಾ ಜನೋತ್ಸವ ಸಮಿತಿಯ ಮಾಜಿ ಅಧ್ಯಕ್ಷ.

Quote - ಶಾಶ್ವತ ವೇದಿಕೆ ಸಭಾಂಗಣ ನಿರ್ಮಿಸಿಕೊಡಲು ಶಾಸಕ ಡಾ.ಮಂತರ್‌ಗೌಡ ಜಿಲ್ಲಾಧಿಕಾರಿ ವೆಂಕಟ್ ರಾಜಾ ಒಪ್ಪಿದ್ದಾರೆ. ಇದರಿಂದ ಮುಂದಿನ ದಸರೆಗೆ ಸಾಕಷ್ಟು ಪ್ರಯೋಜನವಾಗಲಿದೆ ಎಚ್.ಟಿ.ಅನಿಲ್ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ

ಗೋಣಿಕೊಪ್ಪಲು ದಸರಾ: ಶಾಶ್ವತ ರಸ್ತೆ ನಿರ್ಮಾಣ

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಸಮಿತಿಯ ದಸರಾ ಜನೋತ್ಸವದ ಸಭಾಭವನಕ್ಕೆ ತೆರಳುವ ಮಾರ್ಗದ ರಸ್ತೆ ಸಂಪೂರ್ಣವಾಗಿ ಕಾಂಕ್ರೀಟ್ ರಸ್ತೆಯಾಗಿ ನಿರ್ಮಾಣಗೊಂಡಿದೆ. ರಸ್ತೆಯನ್ನು ವಿಸ್ತರಿಸಿ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಇದರಿಂದ ವಾಹನ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಅನುಕೂಲವಾಗಿದೆ. ಈ ಬಗೆಯ ಶಾಶ್ವತ ರಸ್ತೆ ನಿರ್ಮಾಣಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ದಸರಾ ಮೈದಾನಕ್ಕೆ ತೆರಳುವ ಅಂದಾಜು 200 ಮೀಟರ್ ಉದ್ದದ ಈ ರಸ್ತೆ ಹೊಂಡ ಬಿದ್ದು ನಡೆದಾಡುವುದಕ್ಕೂ ಕಷ್ಟವಾಗಿತ್ತು. ಮಳೆ ಬಿದ್ದರಂತೂ ಇಲ್ಲಿನ ನಡೆದಾಡುವವರ ಗೋಳು ಹೇಳತೀರದ್ದಾಗಿತ್ತು. ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಇದೀಗ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ನೂತನ ರಸ್ತೆ ನಿರ್ಮಿಸಿಕೊಟ್ಟಿದೆ. ರಸ್ತೆಯ ಇಕ್ಕೆಲಗಳು ಬಹಳ ತಗ್ಗಿನಿಂದ ಕೂಡಿದ್ದು ವಾಹನಗಳು ಬಂದರೆ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ಚರಂಡಿಯನ್ನು ಕೂಡಲೇ ದುರಸ್ತಿ ಪಡಿಸಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆದ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೊದ್ ಗಣಪತಿ ಹೇಳಿದರು.

ಇನ್ನು ಉಳಿದಂತೆ ಒಂಬತ್ತು ದಿನಗಳ ಕಾಲ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ ಭರದಿಂದ ಸಾಗಿದೆ. ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಮಹಿಳಾ ದಸರಾ ಆಟೋಕ್ರಾಸ್ ಕ್ರೀಡಾಕೂಟ ಮೊದಲಾದವುಗಳಿಗೆಲ್ಲ ಸಮಿತಿ ರಚಿಸಿ ಅವುಗಳಿಗೆ ಜವಾದ್ಬಾರಿ ನೀಡಲಾಗಿದೆ. ಪಟ್ಟಣದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವೂ ನಡೆಯಲಿದೆ. ಬೀದಿ ದೀಪಗಳ ವ್ಯವಸ್ಥೆಯೂ ಜರುಗಲಿದೆ. ಆಹ್ವಾನ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ತಿಳಿಸಿದರು.

ದಸರಾ ಮೈದಾನದಲ್ಲಿ ಸಭಾಂಗಣ ನಿರ್ಮಾಣಗೊಳ್ಳಬೇಕಿದೆ. ಪ್ರತಿ ವರ್ಷ ಬಸ್ ನಿಲ್ದಾಣದಲ್ಲಿ ವಾಹನ ಮಾಲಿಕರ ಮತ್ತು ಚಾಲಕರ ಸಂಘದ ವತಯಿಂದ ಅದ್ಧೂರಿಯಾಗಿ ಆಯುಧಪೂಜೆ ನಡೆಯುತ್ತಿತ್ತು. ಆದರೆ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ಆಯುಧ ಪೂಜೆ ಮತ್ತು ವಿಜಯದಶಮಿಯಂದು ದಸರಾದ ದಶ ಮಂಟಪ ಶೋಭಾಯಾತ್ರೆ ಪ್ರದರ್ಶನಕ್ಕೆ ಅಡ್ಡಿಯಾಗಲಿದೆ. ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸಿ ವಿಜಯದಶಮಿಯಂದು ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ವೇದಿಕೆಯಲ್ಲಿ ಮುಂಜಾನೆ ದಶಮಂಟಪಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಇದರ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ದಸರಾ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯಲ್ಲಿಯೂ ಕ್ರಮ ವಹಿಸಲಾಗಿದೆ. ಅದಕ್ಕಾಗಿ 10ಕ್ಕೂ ಹೆಚ್ಚಿನ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎನ್ನುತ್ತಾರೆ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ. ಪ್ರತಿ ವರ್ಷದಂತೆ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲಾ ಮತ್ತು ಪೊನ್ನಂಪೇಟೆ ತಾಲ್ಲೂಕು ಸಾಹಿತ್ಯ ಪರಿಷತ್ ಕೈಜೋಡಿಸಿವೆ.

–ಜೆ.ಸೋಮಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.