ADVERTISEMENT

ಮಡಿಕೇರಿ | ಕಂಗೊಳಿಸಲಿದೆ ‘ಕೌಶಿಕ ಮಹಾತ್ಮೆ’, ‘ಅರುಣಾಸುರ ವಧೆ’

ಶೋಭಾಯಾತ್ರೆಗೆ ಕಲಾತಂಡದ ಮೆರುಗು ನೀಡಲಿದೆ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ

ಕೆ.ಎಸ್.ಗಿರೀಶ್
Published 9 ಅಕ್ಟೋಬರ್ 2024, 7:21 IST
Last Updated 9 ಅಕ್ಟೋಬರ್ 2024, 7:21 IST
ಮಡಿಕೇರಿಯ ದಂಡಿನ ಮಾರಿಯಮ್ಮ ದೇಗುಲ ಮಂಟಪ‍ವು ಕಳೆದ ವರ್ಷ ‘ಪರಶಿವನಿಂದ ಜಲಂಧರನ ಸಂಹಾರ’ದ ಕಥಾನಕವನ್ನು ವ್ಯವಸ್ಥಿತವಾಗಿ ಪ್ರದರ್ಶಿಸಿ ಜನಮನ ಗೆದ್ದಿತ್ತು
ಮಡಿಕೇರಿಯ ದಂಡಿನ ಮಾರಿಯಮ್ಮ ದೇಗುಲ ಮಂಟಪ‍ವು ಕಳೆದ ವರ್ಷ ‘ಪರಶಿವನಿಂದ ಜಲಂಧರನ ಸಂಹಾರ’ದ ಕಥಾನಕವನ್ನು ವ್ಯವಸ್ಥಿತವಾಗಿ ಪ್ರದರ್ಶಿಸಿ ಜನಮನ ಗೆದ್ದಿತ್ತು   

ಮಡಿಕೇರಿ: 94ನೇ ವರ್ಷದ ಮಂಟಪೋತ್ಸವಕ್ಕೆ ಭರದ ಸಿದ್ಧತೆ ನಡೆಸುತ್ತಿರುವ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ‘ಕೌಶಿಕ ಮಹಾತ್ಮೆ’ ಕಥಾ ಹಂದರವನ್ನು ಆಯ್ದುಕೊಂಡಿದೆ.

ಕಳೆದ ವರ್ಷ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕವನ್ನು ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವನ್ನು ಮಂಟಪದಲ್ಲಿ ಪ್ರದರ್ಶಿಸಿ, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಗಳಿಸಿತ್ತು.

ಒಟ್ಟು 21 ಕಲಾಕೃತಿಗಳನ್ನು ಒಳಗೊಂಡ ಬೃಹತ್ ಪ್ರದರ್ಶನ ಇದಾಗಿದ್ದು, ಇದಕ್ಕಾಗಿ 2 ಟ್ರಾಕ್ಟರ್‌ಅನ್ನು ಬಳಕೆ ಮಾಡಲಾಗುತ್ತಿದೆ. ಆರ್ಚ್‌ ಬೋರ್ಡ್‌ನ್ನು ದಿಂಡಿಗಲ್‌ನ ಜೆಮ್ಸ್ ಲೈಂಟಿಂಗ್ ಅಳವಡಿಸುತ್ತಿದೆ. ಸಮಿತಿ ಸದಸ್ಯರೇ ವೇದಿಕೆ ನಿರ್ಮಿಸುತ್ತಿದ್ದಾರೆ. ಕಲಾಕೃತಿಗಳ ರಚನೆ ಹಾಗೂ ಟ್ರಾಕ್ಟರ್ ಸೆಟ್ಟಿಂಗ್ಸ್‌ ಅನ್ನು ಮಡಿಕೇರಿಯ ಆನಂದ ಆರ್ಟ್‌ನವರು ನಿರ್ವಹಿಸುತ್ತಿದ್ದಾರೆ.

ADVERTISEMENT

ಒಟ್ಟು ₹ 27 ಲಕ್ಷದಲ್ಲಿ ಮಂಟಪವನ್ನು ವೈಭವೋಪೇತವಾಗಿ ರೂಪಿಸಲು ನಿರ್ಧರಿಸಲಾಗಿದೆ. ಈ ಬಾರಿ ನಮ್ಮ ಪ್ರದರ್ಶನ ಹೆಚ್ಚು ಕಲಾತ್ಮಕವಾಗಿರಲಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಡಿಕೇರಿಯ ಚೌಡೇಶ್ವರಿ ದೇಗುಲದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಕಳೆದ ವರ್ಷ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾಪ್ರಸಂಗವನ್ನು ವೈಭವಯುತವಾಗಿ ಪ್ರದರ್ಶಿಸಿ ಕಣ್ಮನ ಸೂರೆಗೊಂಡಿತ್ತು

ಚೌಡೇಶ್ವರಿ ದೇಗುಲ; ಕಲಾತಂಡದ ಮೆರುಗು

ಈ ಬಾರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕಲಾತಂಡವೊಂದು ಎಲ್ಲರ ಗಮನ ಸೆಳೆಯುವುದು ನಿಶ್ಚಿತ ಎನಿಸಿದೆ. ಇಲ್ಲಿನ ಮಹದೇವಪೇಟೆಯ ಚೌಡೇಶ್ವರಿ ದೇಗುಲದ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಮಂಟಪದ ಜೊತೆಗೆ ಕಲಾತಂಡವೊಂದನ್ನು ಕರೆತರಲು ನಿರ್ಧರಿಸಿದೆ.

ಕೇರಳದ ಪೂಕೋಡುವಿನ ಬ್ಯಾಂಡ್‌ಸೆಟ್‌ ಶೋಭಾಯಾತ್ರೆಯ ರಂಗು ಹೆಚ್ಚಿಸಲಿದೆ. ಮಂಟಪೋತ್ಸವದ ತನ್ನ 62ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಸಮಿತಿಯು ಈ ಬಾರಿ ‘ಅರುಣಾಸುರ ವಧೆ’ ಕಥಾ ಪ್ರಸಂಗವನ್ನು ಪ್ರದರ್ಶನಕ್ಕಾಗಿ ಆಯ್ಕೆ ಮಾಡಿಕೊಂಡಿದೆ.

ಕಳೆದ ವರ್ಷ ಸಮಿತಿ ಪ್ರದರ್ಶಿಸಿದ್ದ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗ ಅತ್ಯಂತ ವೈಭವೋಪೇತವಾಗಿ ಗಮನ ಸೆಳೆದಿತ್ತು. ಈ ಬಾರಿ ಇದಕ್ಕಾಗಿ 2 ಟ್ರಾಕ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು ಒಟ್ಟು ₹ 20 ಲಕ್ಷ ವ್ಯಯಿಸಲು ಅಂದಾಜು ಮಾಡಲಾಗಿದೆ. ಒಟ್ಟು 24 ಕಲಾಕೃತಿಗಳಿರಲಿದ್ದು ಇವುಗಳ ತಯಾರಿಕೆಯ ಹೊಣೆಯನ್ನು ಉದ್ಬೂರಿನ ಮಹದೇವಪ್ಪ ಅಂಡ್ ಸನ್ಸ್ ಹೊತ್ತಿದ್ದಾರೆ.

ದಿಂಡಿಗಲ್‌ನ ಕದಲ್ ಮಾತಾ ಅವರ ಲೈಟಿಂಗ್ಸ್ ನಂದಿ ಸೋಮವಾರಪೇಟೆ ಸೌಂಡ್ಸ್ ಅವರ ಸ್ಟುಡಿಯೊ ಜೊತೆಗೆ ಚೆನ್ನೈ ಕನ್ನಿಕಾ ಫೈರ್‌ ವರ್ಲ್ಡ್ ಅವರ ವಿಶೇಷ ಆಕರ್ಷಣೆ ಇರಲಿದೆ ಎಂದು ಮಂಡಳಿ ಅಧ್ಯಕ್ಷ ಡಿ.ಎ.ಜಗದೀಶ್ ‘ಪ್ರಜಾವಾಣಿ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.