ಮಡಿಕೇರಿ: ಮಾಧವ ಗಾಡ್ಗೀಳ್ ವರದಿ ಜಾರಿಗೊಳಿಸಬೇಕು ಎಂದು ಸಿಪಿಐ (ಮಾರ್ಕಿಸ್ಟ್, ಲೆನಿನಿಸ್ಟ್) ಮಾಸ್ ಲೈನ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಠಾಕೂರ್ ಒತ್ತಾಯಿಸಿದರು.
ವಯನಾಡ್ ದುರಂತದ ನಂತರವಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಪರಿಸರ ಹಾಗೂ ಜನರ ಉಳಿವಿಗೆ ಅತ್ಯಂತ ವೈಜ್ಞಾನಿಕವಾಗಿರುವ ಮಾಧವ ಗಾಡ್ಗೀಳ್ ವರದಿಯ ಜಾರಿ ಕುರಿತು ಚಿಂತಿಸಬೇಕು. ಪರಿಸರಕ್ಕೆ ಮಾರಕವಾದ ಅಭಿವೃದ್ಧಿ ಚಟುವಟಿಕೆ ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೇಂದ್ರದಲ್ಲಿರುವುದು ಎನ್‌ಡಿಎ ಸರ್ಕಾರ. ಅಂದರೆ ‘ನಿತೀಶ್, ಚಂದ್ರಬಾಬುನಾಯ್ಡು ಡಿಪೆಂಡೆಂಟ್ ಅಲೈಯನ್ಸ್’ ಸರ್ಕಾರ. ಅದಕ್ಕಾಗಿಯೇ ಬಿಹಾರ ಮತ್ತು ಆಂಧ್ರಪ್ರದೇಶಗಳಿಗೆ ಗರಿಷ್ಠ ಅನುದಾನ ನೀಡಲಾಗಿದೆ. ಆದರೆ, ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸುತ್ತಿರುವ ರೈತರನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಜನರಿಂದ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಆಯ್ಕೆಯಾದ ರಾಜ್ಯಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿರುವುದು ಸರಿಯಲ್ಲ. ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸುವುದನ್ನು ಬಿಡಬೇಕು ಎಂದರು.
ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮಾತನಾಡಿ, ‘ಹಿಂದೆ ಬಿಜೆಪಿ ಜಾರಿಗೆ ತಂದಿರುವ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಈಗಿನ ಸಿದ್ದರಾಮಯ್ಯ ಸರ್ಕಾರ ಸಹ ಮುಂದುವರಿಸಿರುವುದು ಸರಿಯಲ್ಲ. ಕೂಡಲೇ ಈ ಹಿಂದೆ ಬಿಜೆಪಿ ತಂದ ಕಾಯ್ದೆ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.
ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ನಿರ್ವಾಣಪ್ಪ ಮಾತನಾಡಿ, ‘ಅರಣ್ಯ ಸಂರಕ್ಷಣೆಯ ನೆಪ ಒಡ್ಡಿ ಒಂದಿಷ್ಟು ಜಾಗ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವ ಬಡವರ ಮೇಲೆ ಸರ್ಕಾರ ಗದಾಪ್ರಹಾರ ನಡೆಸುತ್ತಿದೆ. ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡಿರುವ ಭೂಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಧವ ಗಾಡ್ಗೀಳ್ ವರದಿಯಾಗಿರಬಹುದು, ಕಸ್ತೂರಿರಂಗನ್ ವರದಿಯಾಗಿರಬಹುದು ಯಾರಿಗೂ ವರದಿಯಲ್ಲಿ ಏನಿದೆ ಎಂಬುದು ಸ್ಪಷ್ಟವಿಲ್ಲ. ಸರ್ಕಾರ ಕೂಡಲೇ ಈ ವರದಿಯಲ್ಲಿರುವ ಎಲ್ಲ ಅಂಶಗಳೂ ಸುಲಭವಾಗಿ ಅರ್ಥವಾಗುವಂತೆ ಜನರ ಮುಂದಿಡಬೇಕು ಎಂದು ಅವರು ಮನವಿ ಮಾಡಿದರು.
ಪಕ್ಷದ ಮುಖಂಡರಾದ ಅಣ್ಣಪ್ಪ, ಪ್ರಕಾಶ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.