ADVERTISEMENT

ಸೋಮವಾರಪೇಟೆ | ಕಾಫಿ: ವಿದ್ಯುತ್ ಸಂಪರ್ಕ ಕಡಿತ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 5:40 IST
Last Updated 23 ಫೆಬ್ರುವರಿ 2024, 5:40 IST

ಸೋಮವಾರಪೇಟೆ: ‘ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತಗೊಳಿಸುತ್ತಿರುವ ಕ್ರಮವನ್ನು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು, ರಾಜ್ಯದ ಎಲ್ಲ ಬೆಳೆಗಾರರಿಗೆ ನೀಡುತ್ತಿರುವಂತೆ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು. ತಪ್ಪಿದಲ್ಲಿ ಮುಂದಿನ 7 ದಿನಗಳಲ್ಲಿ ರಾಜ್ಯ ರೈತ ಸಂಘದ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಕ್ಷಣಾ ವೇದಿಕೆ ಎಚ್ಚರಿಸಿದೆ.

ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸೆಸ್ಕ್‌ನವರು ಕಾಫಿ ಬೆಳೆಗಾರರ 10 ಎಚ್.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಕಾಫಿಯೂ ಒಂದು ಬೆಳೆಯಾಗಿದ್ದು, ಉಚಿತ ವಿದ್ಯುತ್ ನೀಡಬೇಕು. ಮೊದಲೇ ಜಿಲ್ಲೆಯಲ್ಲಿ ಸಾಕಷ್ಟು ಬೆಳೆಗಾರರು ನಷ್ಟವನ್ನು ಅನುಭವಿಸಿದ್ದಾರೆ. ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಕೊಯ್ಲಿನ ಸಂದರ್ಭ ಕಾಫಿ ಮಣ್ಣು ಪಾಲಾಗಿದೆ. ಅತೀಯಾದ ಬಿಸಿಲಿನಿಂದ ಕಾಫಿ ಗಿಡಗಳು ಒಣಗುತ್ತಿವೆ. ಮಾರ್ಚ್ ಕೊನೆ ವಾರದಲ್ಲಿ ಕಾಫಿ ಗಿಡಗಳಲ್ಲಿ ಹೂ ಅರಳಿಸಬೇಕಾಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಖಂಡನೀಯ. ಕೂಡಲೇ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರುಜೋಡಣೆ ಮಾಡಬೇಕು. ಅರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ಬಾಕಿಯಿರುವ ವಿದ್ಯುತ್ ಬಿಲ್ ಮನ್ನ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಎಲ್ಲಾ ಜಿಲ್ಲೆಗಳ ಅಡಿಕೆ, ಕಬ್ಬು, ಜೋಳ, ಭತ್ತ, ಹೊಗೆಸೊಪ್ಪು, ಮಾವು ಸೇರಿದಂತೆ ಇನ್ನಿತರ ಕೃಷಿ ಬೆಳೆಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಕಾಫಿ ಕೂಡ ಆಹಾರ ಬೆಳೆಯಾಗಿದೆ. ಆದರೆ, ಕಾಫಿ ಬೆಳೆಗಾರರಿಗೆ ಮಾತ್ರ ಮಲತಾಯಿ ಧೋರಣೆ ತೋರುತ್ತಿದೆ. ಕಾಫಿ ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಸರ್ಕಾರಗಳಿಗೆ ಸಾವಿರಾರು ಕೋಟಿ ಅದಾಯ ಬರುತ್ತಿದೆ. ಕೇವಲ ಮೂರ್ನಾಲ್ಕು ಕೋಟಿ ರೂಪಾಯಿಗಳಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬಹುದು ಎಂದ ಅವರು, ಕಾಫಿ ಉತ್ಪಾದನೆ ಹೆಚ್ಚಾದರೆ ಕಾರ್ಮಿಕ ವಲಯ, ವ್ಯಾಪಾರ ಸೇರಿದಂತೆ ಎಲ್ಲಾ ವಲಯಗಳಲ್ಲೂ ಆರ್ಥಿಕ ಸಬಲತೆ ಹೆಚ್ಚಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಕೂಡಲೇ ಜಿಲ್ಲೆಯ ಇಬ್ಬರು ಶಾಸಕರು ಕಾಫಿ ಬೆಳೆಗಾರರ ರಕ್ಷಣೆಗೆ ಬರಬೇಕಿದೆ. ಮುಖ್ಯಮಂತ್ರಿ ಹಾಗೂ ಇಂಧನ ಸಚಿವರೊಂದಿಗೆ ಚರ್ಚಿಸಿ ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿಸಬೇಕು. ಯಾವುದೇ ಷರತ್ತಿಲ್ಲದೆ 10 ಎಚ್ ಪಿ ಒಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವಂತೆ ಸರ್ಕಾರದಿಂದ ಆದೇಶ ತರುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ನಗರಾಧ್ಯಕ್ಷ ಮಂಜುನಾಥ್, ತಾಲ್ಲೂಕು ಸಂಚಾಲಕ ಚಂದ್ರು, ಪದಾಧಿಕಾರಿಗಳಾದ ಆದರ್ಶ್ ತಮ್ಮಯ್ಯ, ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.