ADVERTISEMENT

ಡಿ.ವಿ.ಸದಾನಂದಗೌಡ ಅವರಿಗೆ ಟಿಕೆಟ್ ನಿರಾಕರಣೆ; ಗೌಡ ಸಮಾಜದ‌ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 5:32 IST
Last Updated 20 ಮಾರ್ಚ್ 2024, 5:32 IST
ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಂಗಳವಾರ ಮಾತನಾಡಿದರು.
ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಂಗಳವಾರ ಮಾತನಾಡಿದರು.   

ಕುಶಾಲನಗರ: ‘ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದೆ ಒಕ್ಕಲಿಗ ಮುಖಂಡರನ್ನು ಬಿಜೆಪಿ ಕಡೆಗಣಿಸಿದೆ’ ಎಂದು ಗೌಡ ಸಮಾಜದ‌ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿಯಾಗಿ ಸದಾನಂದಗೌಡ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಇಂತಹ ಹಿರಿಯ ರಾಜಕಾರಣಿಗೆ ಟಿಕೆಟ್ ನೀಡದಿರುವುದು ಸರಿಯಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದು, ಸದಾನಂದ ಗೌಡರಿಗೂ ಟಿಕೆಟ್ ನೀಡದೇ ಇರುವುದು ಗೌಡ ಸಮಾಜವನ್ನು ಕಡೆಗಣಿಸಿರುವುದರ ದ್ಯೋತಕ. ನಾವು ‘ರಾಜ’ರ ಬಳಿ ತೆರಳಲಾಗುತ್ತದೆಯೇ’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದ ಸದಾನಂದಗೌಡ ಅವರಿಗೆ ಲೋಕಸಭೆ ಟಿಕೆಟ್ ನೀಡಬೇಕೆಂದು ಇದೇ ಸಂದರ್ಭ ಅವರು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ನಾವು ನಮ್ಮದೆ ಹಾದಿ ಹಿಡಿಯಬೇಕಾಗುತ್ತದೆ’ ಎಂದೂ ತಿಳಿಸಿದರು.

ಕೊಡಗು ಗೌಡ ಸಮಾಜಗಳ‌ ಒಕ್ಕೂಟದ ಖಜಾಂಚಿ ಆನಂದ್ ಕರಂದ್ಲಾಜೆ ಮಾತನಾಡಿ, ‘ಸದಾನಂದಗೌಡ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರಕದಿದ್ದರೆ, ಕೊಡಗಿನಲ್ಲೂ ಕೂಡ ಬಿಜೆಪಿಗೆ ಹಿನ್ನಡೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ಶೀಘ್ರದಲ್ಲೇ ಕೊಡಗು ಗೌಡ ಒಕ್ಕೂಟಗಳ ಸಭೆ ಕರೆದು‌ ನಮ್ಮನ್ನು ಕಡೆಗಣಿಸಿರುವ ಪಕ್ಷ‌ವನ್ನು ಬೆಂಬಲಿಸದಿರುವ ಬಗ್ಗೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.

ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಸಮಾಜದ ಉಪಾಧ್ಯಕ್ಷ ದೊರೆಗಣಪತಿ, ಕಾಶಿ ಪೂವಯ್ಯ, ಕಾರ್ಯದರ್ಶಿ ಹೇಮಂತ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.