ADVERTISEMENT

ಅಪರೂಪದ ಉರುಟ್ಟಿಕೊಟ್ಟ್ ಆಟ್ ಕಲಾವಿದೆ ಕುಡಿಯರ ಗೋಪಮ್ಮ

ಜನಪದೀಯ ಕುಣಿತ ಉಳಿಸಿ, ಮುಂದಿನ ತಲೆಮಾರಿಗೆ ದಾಟಿಸುತ್ತಿರುವ ಸಾಧಕಿ ಗೋಪಮ್ಮ

ಹೇಮಂತಕುಮಾರ್ ಎಂ.ಎನ್‌
Published 1 ಮಾರ್ಚ್ 2023, 6:15 IST
Last Updated 1 ಮಾರ್ಚ್ 2023, 6:15 IST
   ಕುಡಿಯರ ಗೋಪಮ್ಮ
   ಕುಡಿಯರ ಗೋಪಮ್ಮ   

ವಿರಾಜಪೇಟೆ: ಕೊಡಗು ವಿಶಿಷ್ಟ ಸಂಸ್ಕೃತಿಗೆ ಹೆಸರಾದ ಜಿಲ್ಲೆ. ವಿವಿಧ ಜನಾಂಗಗಳು ನೆಲೆಗೊಂಡಿರುವ ಜಿಲ್ಲೆಯಲ್ಲಿ ವೈವಿಧ್ಯಮಯವಾದ ಜನಪದ ಕುಣಿತಗಳು ಕಂಡು ಬರುತ್ತದೆ. ಇಂತಹ ಕುಣಿತಗಳಲ್ಲಿ ಕುಡಿಯ ಜನಾಂಗದ ‘ಉರುಟ್ಟಿಕೊಟ್ಟ್ ಆಟ್’ ಪ್ರಮುಖ ಎನಿಸಿದೆ.

ಬಹು ಹಿಂದಿನಿಂದಲೂ ಬುಡಕಟ್ಟು ಜನಾಂಗದವರು ಮದುವೆ ಮುಂತಾದ ಸಮಾರಂಭಗಳ ಸಂದರ್ಭಗಳಲ್ಲಿ ಸಂತೋಷ ಸಂಭ್ರಮವನ್ನು ಕುಣಿತದ ಮೂಲಕವೇ ವ್ಯಕ್ತಪಡಿಸುತ್ತಿದ್ದರು. ಇಂತಹ ಜನಪದ ಕುಣಿತಗಳಲ್ಲಿ ಹಲವು ಕಾಲಾಂತರದಲ್ಲಿ ನಶಿಸಿ ಹೋದರೆ, ಕೆಲವೊಂದನ್ನು ಮುಂದಿನ ಪೀಳಿಗೆ ಗಾಗಿ ಉಳಿಸಿಕೊಂಡು ಬರುವ ಕಾಯಕ ದಲ್ಲಿ ಕೆಲ ಕಲಾವಿದರು ಇಂದಿಗೂ ಎಲೆಮರೆಯ ಕಾಯಿಯಂತೆ ನಿರತರಾಗಿ ದ್ದಾರೆ. ಅವರಲ್ಲಿ ಉರುಟ್ಟಿಕೊಟ್ಟ್ ಆಟ್ ಕುಣಿತವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತ ರಾಗಿರುವ ಸಮೀಪದ ತೋಮರ ಗ್ರಾಮದ ಕುಡಿಯರ ಗೋಪಮ್ಮ ಪ್ರಮುಖರು.

ಗೋಪಮ್ಮ ಅವರ ಪತಿ ಕುಡಿಯರ ಪೂವಯ್ಯ. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಪತಿ ಕುಡಿಯರ ಪೂವಯ್ಯ ಅವರು ‘ದುಡಿ’ ಬಾರಿಸುವ ಕಲಾವಿದ. ಪತ್ನಿಯ ಉರುಟ್ಟಿಕೊಟ್ಟ್ ಕುಣಿತಕ್ಕೆ ಪೂವಯ್ಯ ಅವರೇ ದುಡಿ ಬಾರಿಸುವುದು ವಿಶೇಷ. ಒಬ್ಬ ಪುತ್ರ ಕೂಡ ಉತ್ತಮ ಕುಣಿತಗಾರ. ಒಟ್ಟಾರೆ, ಗೋಪಮ್ಮನವರದ್ದು ಕಲಾವಿದರ ಕುಟುಂಬ.

ADVERTISEMENT

ಗೋಪಮ್ಮ ಅವರು ಮೂಲತಃ ಕಕ್ಕಬೆ ಸಮೀಪದ ನಾಲ್ಕೇರಿದವರು. ಗ್ರಾಮದ ಕುಡಿಯರ ಸುಬ್ಬು ಹಾಗೂ ಗಂಗಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರು. ಎಸ್ಸೆಸ್ಸೆಲ್ಸಿವರೆಗೆ ಓದಿರುವ ಗೋಪಮ್ಮ ಸಾಕ್ಷರ ಕಾವೇರಿಯಲ್ಲೂ ದುಡಿದಿದ್ದಾರೆ. ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕುಡಿಯರ ಮುತ್ತಪ್ಪ ಹಾಗೂ ಕುಡಿಯರ ಕರುಂಬಯ್ಯ ಅವರೇ ತನಗೆ ಪ್ರೇರಣೆ ಎನ್ನುತ್ತಾರೆ.

ಗೋಪಮ್ಮ ಅವರ ತಂಡ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಒಳ ಗೊಂಡಂತೆ, ದೆಹಲಿ, ತಮಿಳುನಾಡು, ಕೇರಳ, ಪಂಜಾಬ್, ರಾಜಾಸ್ಥಾನ, ಜಾರ್ಖಂಡ್, ಅಸ್ಸಾಂ ರಾಜ್ಯಗಳಲ್ಲು ಪ್ರದರ್ಶನ ನೀಡಿದೆ. ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರವು ಇವರ ಕಲಾಸೇವೆಯನ್ನು ಗುರುತಿಸಿ ತಿಂಗಳಿಗೆ 3 ಕಾರ್ಯಕ್ರಮ ಹಾಗೂ ಗೌರವಧನ ನೀಡುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಗೋಪಮ್ಮ ಅವರ ಕುಣಿತವು ಸಾಕಷ್ಟು ಮಂದಿಯನ್ನು ಸೆಳೆದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರ, ರಂಗಾಯಣ, ಜಿಲ್ಲಾ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ನೆನೆಯುವ ಗೋಪಮ್ಮ ಅವರು ಈವರೆಗೆ ವಿವಿಧ ರಾಜ್ಯ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 474 ಕಾರ್ಯಕ್ರಮವನ್ನು ನೀಡಿದ್ದೇನೆ ಎಂದು ಹೇಳುತ್ತಾರೆ.

ಗೋಪಮ್ಮ ಮದುವೆಯಾದ ಬಳಿಕ ಈ ಕುಣಿತವನ್ನು ಕಲಿತವರು. ವಿಶೇಷವಾಗಿ, ಕುಣಿತದ ಕಲಿಕೆಗೆ ಸಹಕಾರ ನೀಡಿದವರು ಕುಡಿಯರ ಮುತ್ತಪ್ಪ, ಕುಡಿಯರ ಕರುಂಬಯ್ಯ ಹಾಗೂ ಇತರರು ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

ಕಳೆದ 18 ವರ್ಷಗಳಿಂದ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಗೋಪಮ್ಮ ಅವರು ಬೀದಿ ನಾಟಕದ ಕಲಾವಿದೆಯೂ ಹೌದು. ಜತೆಗೆ, ಬುಡಕಟ್ಟು ಜನಾಂಗದವರ ಗರ್ಭಿಣಿ ಹಾಗೂ ಬಾಣಂತಿಗೆ ಬೇಕಾದ ಖಾದ್ಯಗಳನ್ನು ತಯಾರಿಸುವುದರಲ್ಲು ಪರಿಣಿತಿಯನ್ನು ಪಡೆದಿದ್ದಾರೆ. ಇಲ್ಲಿಯವರೆಗೆ ಮಕ್ಕಳು ಸೇರಿದಂತೆ ಸಾಕಷ್ಟು ಜನರಿಗೆ ಉರುಟ್ಟಿಕೊಟ್ಟ್ ಆಟ್ ಕಲಿಸಿದ ಹಾಗೂ ಕಲಿಸುತ್ತಿರುವ ಹೆಗ್ಗಳಿಕೆ ಗೋಪಮ್ಮ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.