ADVERTISEMENT

ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಪಕ್ಷ ನನ್ನನ್ನು ಗುರುತಿಸಿದೆ: ಎಂ. ಲಕ್ಷಣ್‌

‍ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಸಚಿವ ಎನ್.ಎಸ್.ಭೋಸರಾಜು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:03 IST
Last Updated 26 ಮಾರ್ಚ್ 2024, 14:03 IST
ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ, ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಮುಖಂಡರಾದ ಚಂದ್ರಮೌಳಿ ಭಾಗವಹಿಸಿದ್ದರು
ಮಡಿಕೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್‌ಗೌಡ, ಎ.ಎಸ್.ಪೊನ್ನಣ್ಣ, ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಮುಖಂಡರಾದ ಚಂದ್ರಮೌಳಿ ಭಾಗವಹಿಸಿದ್ದರು   

ಮಡಿಕೇರಿ: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಅವರು ಟಿಕೆಟ್ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ಕೊಡಗು ಜಿಲ್ಲೆಗೆ ಬಂದು ಇಲ್ಲಿನ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರೆ, ಮತ್ತೊಂದೆಡೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಹ ನಗರಕ್ಕೆ ಬಂದು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಲಕಾವೇರಿ ಮಾತ್ರವಲ್ಲ ಭಾಗಮಂಡಲದ ಭಗಂಡೇಶ್ವರ ದೇಗುಲಕ್ಕೆ ಭೇಟಿ ನೀಡಿದ ಲಕ್ಷ್ಮಣ ಮಡಿಕೇರಿಯಲ್ಲಿರುವ ವೀರ ಸೇನಾನಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು. ಇಲ್ಲಿನ ಧರ್ಮಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು, ಪದಾಧಿಕಾರಿಗಳ ಬೆಂಬಲ ಕೋರಿದರು.

ADVERTISEMENT

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಜಯ ಗಳಿಸುವುದು ಖಚಿತ. ಗೆದ್ದ ನಂತರ ಕ್ಷೇತ್ರದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕಾರ್ಯನಿರ್ವಹಿಸುವೆ’ ಎಂದು ಭರವಸೆ ನೀಡಿದರು.

‘ನಾನು 35 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, 4 ಚುನಾವಣೆಯಲ್ಲಿ ಸೋತಿರುವೆ. ಜನರೊಂದಿಗೆ ಯಾವಾಗಲೂ ಇರುವ ವ್ಯಕ್ತಿ ನಾನು. ಇದು ಮಹಾರಾಜ ಮತ್ತು ಶ್ರೀಸಾಮಾನ್ಯನ ನಡುವೆ ನಡೆಯುವ ಚುನಾವಣೆ’ ಎಂದು ತಿಳಿಸಿದರು.

‘ನನಗೆ ರಾಜಕೀಯ ಹಿನ್ನಲೆ ಇಲ್ಲ. ಆದರೂ, ಪಕ್ಷ ಮತ್ತು ಮುಖಂಡರು ನನ್ನನ್ನು ಗುರುತಿಸಿದ್ದಾರೆ. ಈ ಭಾಗದಲ್ಲಿ ಕಳೆದ 10 ವರ್ಷಗಳಿಂದ ಕಿಡಿ‌ ಹೊತ್ತಿಸುವುದನ್ನು ಬಿಟ್ಟರೆ ಅಭಿವೃದ್ದಿ ಆಗಿಲ್ಲ. ಮೈಸೂರನ್ನು ಪ್ಯಾರೀಸ್ ಮಾಡುತ್ತೇವೆ ಎಂದು ಭರವಸೆ ನೀಡಿದವರು ಏನು ಮಾಡಿದರು ಎಂಬುದು ಗೊತ್ತಿಲ್ಲ. ನಾನು ಸಂಸದನಾಗಿ ಆಯ್ಕೆಯಾದರೆ ಸ್ವರ್ಗ ಮಾಡುವೆ ಎಂದು ಹೇಳುವುದಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಖಚಿತ’ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಸಹಕಾರ ಇಲ್ಲದೆ ಕೇಂದ್ರ ಅಥವಾ ಸಂಸದರು ಏನೂ ಮಾಡುವುದಕ್ಕೆ ಆಗುವುದಿಲ್ಲ. ಮುಂದೆ ‘ಇಂಡಿಯಾ’ ಒಕ್ಕೂಟವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ. 8 ಕ್ಷೇತ್ರದ ಶಾಸಕರ ಅನುಮತಿ‌ ಇಲ್ಲದೆ ಅವರ ಕ್ಷೇತ್ರದಲ್ಲಿ ನಾನು‌ ಏನೂ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ’ ಎಂದು ಹೇಳಿದರು.

ಕೊಡಗಿನಲ್ಲಿ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಪರಿಸರಸ್ನೇಹಿ ಪ್ರವಾಸೋದ್ಯಮ ಇಲ್ಲಿಗೆ ಬೇಕೇ ಬೇಕು. ಮಾಹಿತಿ ತಂತ್ರಜ್ಞಾನಕ್ಕೂ ಹೆಚ್ಚು ಮಹತ್ವ ಕೊಡುವೆ ಎಂದು ವಿವರಿಸಿದರು.

ಸದಾನಂದಗೌಡ, ಸಿ.ಟಿ.ರವಿ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಅನ್ಯಾಯ ಆಗಿದೆ. ಪ್ರತಾಪಸಿಂಹ ವಿರುದ್ಧ ವೈಯಕ್ತಿಕ ಏನೂ ಇಲ್ಲ, ವಿಚಾರಗಳ ಬಗ್ಗೆ ಮಾತ್ರ ಅಸಮಾಧಾನ ಅಷ್ಟೇ. ಈ ಭಾಗದಲ್ಲಿ ಒಕ್ಕಲಿಗ ಸಮುದಾಯದವರಿಗೆ ಕಾಂಗ್ರೆಸ್ ಬಲ ತುಂಬಿದೆ ಎಂದರು.

ಸಚಿವ ಎನ್.ಎಸ್.ಭೋಸರಾಜು ಸೂಚನೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮಂಗಳವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿ ಹಲವು ಸೂಚನೆಗಳನ್ನು ನೀಡಿದರು.

ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಈ ಬಾರಿ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿಯುವವರೆಗೂ ಕಾರ್ಯಕರ್ತರು ವಿರಮಿಸಬಾರದು. ಅಭ್ಯರ್ಥಿ ಎಂ.ಲಕ್ಷ್ಮಣ ಅವರ ಗೆಲುವಿಗೆ ಕೈಜೋಡಿಸಬೇಕು ಎಂದು ಹೇಳಿದರು. ಶಾಸಕರಾದ ಡಾ.ಮಂತರ್‌ಗೌಡ ಎ.ಎಸ್.ಪೊನ್ನಣ್ಣ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.