ಸೋಮವಾರಪೇಟೆ: ಕಾಳು ಮೆಣಸಿನ ಬೆಳೆಗಾರರು ಹವಾಮಾನ ವೈಪರೀತ್ಯದಿಂದ ಬಸವಳಿದಿದ್ದರೆ, ಮತ್ತೊಂದೆಡೆಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಳ್ಳು ಹಂದಿಗಳ ಕಾಟ ಹೆಚ್ಚಾಗಿದ್ದು, ಬೆಳೆಗಾರರ ನಿದ್ದೆಗೆಡಿಸಿದೆ.
ಕಾಡಾನೆ, ಕಾಡೆಮ್ಮೆ, ಕಾಡು ದನಗಳು ಹಾಗೂ ಮಂಗಗಳ ಹಾವಳಿಯ ನಂತರ ಇತ್ತೀಚಿನ ದಿನಗಳಲ್ಲಿ ಶುರುವಾಗಿರುವ ಮುಳ್ಳುಹಂದಿಗಳ ಹಾವಳಿಯಿಂದ ಬೆಳೆಗಾರರು ಹೈರಾಣಾಗುತ್ತಿದ್ದಾರೆ.
ಕಾಳು ಮೆಣಸಿನ ಬಳ್ಳಿಗಳು ಮೂರು ವರ್ಷದಿಂದಲೇ ಫಸಲು ಬಿಡಲು ಪ್ರಾರಂಭಿಸಿದರೂ, ಬಳ್ಳಿ ಚಿಕ್ಕದಾಗಿರುವುದರಿಂದ ಹೆಚ್ಚಿನ ಫಸಲು ಪಡೆಯಲು ಸಾಧ್ಯವಿಲ್ಲ. ಸುಮಾರು 10 ರಿಂದ 15 ವರ್ಷಗಳ ನಂತರವಷ್ಟೇ ಪರಿಪೂರ್ಣವಾಗಿ ಫಸಲು ಬಿಡಲು ಆರಂಭವಾಗುತ್ತದೆ.
ವರ್ಷ ಕಳೆದಂತೆಲ್ಲಾ 30ರಿಂದ 40 ಅಡಿಗಳಷ್ಟು ಎತ್ತರಕ್ಕೆ ಬೆಳೆದು ಉತ್ತಮ ಫಸಲು ನೀಡುವುದು. ಆದರೆ, ಇಂತಹ ಸಮಯದಲ್ಲಿ ಮುಳ್ಳು ಹಂದಿಗಳು ಬಳ್ಳಿಯ ಬುಡದ ಅರ್ಧ ಅಡಿಯಷ್ಟು ತುಂಡರಿಸಿ ತಿನ್ನುತ್ತಿದ್ದು, 15 ವರ್ಷಗಳ ರೈತರ ಶ್ರಮ ವ್ಯರ್ಥವಾಗುತ್ತಿದೆ. ಇದರಿಂದ ಬಳ್ಳಿ ಸಂಪೂರ್ಣವಾಗಿ ಒಣಗಿಹೋಗುತ್ತಿದೆ.
ಕಾಫಿ ಫಸಲು ಮತ್ತು ಬೆಲೆ ರೈತರ ಕೈಬಿಟ್ಟಾಗ ಅದೆಷ್ಟೋ ಬಾರಿ ಕಾಳು ಮೆಣಸು ರೈತರ ಬೆನ್ನಿಗೆ ನಿಲ್ಲುತ್ತಿತ್ತು. ಈ ಬೆಳೆಯ ನಿರ್ವಹಣೆಗೂ ಹೆಚ್ಚಿನ ಖರ್ಚು ಬಯಸುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರಿ ಮಳೆ ಮತ್ತು ಬರದಿಂದಾಗಿ ಸಾಕಷ್ಟು ಕಾಳು ಮೆಣಸಿನ ಬಳ್ಳಿಗಳು ವೈರಸ್‌ಗೆ ತುತ್ತಾಗಿ ಒಣಗಿ ಹೋದವು. ಉಳಿದ ಬಳ್ಳಿಗಳಲ್ಲಿ ಮಳೆಯ ಕೊರತೆಯಿಂದ ಕಾಳು ಸರಿಯಾಗಿ ಕಟ್ಟಲಿಲ್ಲ. ಅಲ್ಲದೆ, ಗುಣಮಟ್ಟದ ಫಸಲನ್ನು ನಿರೀಕ್ಷೆ ಮಾಡುವ ಹಾಗೆ ಇಲ್ಲ. ಇದರ ನಡುವೆ, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಕಾಫಿ ತೋಟಗಳಲ್ಲಿ ಮುಳ್ಳು ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಬೆಳೆಗಾರರ ನಿದ್ದೆಗೆಡಿಸಿದೆ.
‘ಇವು ಬಲಿತ ಬಳ್ಳಿಗಳ ಕಾಂಡವನ್ನು ಕತ್ತರಿಸಿ ಅದರ ರಸ ಹೀರುತ್ತಿವೆ. ಹಾವಳಿ ನಿಯಂತ್ರಿಸಲು ಬಳ್ಳಿಗಳ ಬುಡವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಕಟ್ಟಿದರೂ, ಅಲ್ಪ ಸ್ವಲ್ಪ ನಿಯಂತ್ರಣಕ್ಕೆ ಬಂದರೂ, ಚೀಲ ಹರಿದ ಸ್ಥಳದಲ್ಲಿ ಮತ್ತೆ ಅದೇ ಸಮಸ್ಯೆ ಕಾಡುತ್ತಿದೆ’ ಎಂದು ಸ್ಥಳೀಯ ರೈತರಾದ ಸುದೀಪ್ ತಿಳಿಸಿದರು.
‘ಬಳ್ಳಿ ನಷ್ಟವಾದರೆ, ಸರ್ಕಾರದಿಂದಲೂ ಸರಿಯಾದ ಪರಿಹಾರ ಸಿಗುವುದಿಲ್ಲ. ಸಿಕ್ಕರೂ ಒಂದೆರಡು ಸಾವಿರ ನೀಡಬಹುದು. ಆದರೆ, ವರ್ಷಕ್ಕೆ ಸಾವಿರಾರು ರೂಪಾಯಿ ಗಳಿಸಿ ಕೊಡುವ ಬಳ್ಳಿ ಕಳೆದುಕೊಳ್ಳುತ್ತಿರುವುದು ತುಂಬಲಾರದ ನಷ್ಟವಾಗಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.
‘ಕಾರೆಕೊಪ್ಪ, ಕುಸುಬೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರತಿವರ್ಷ ಕಾಳು ಮೆಣಸಿನ ಬಳ್ಳಿಗಳನ್ನು ಹಂದಿಗಳು ತುಂಡರಿಸಿ ನಾಶಪಡಿಸುತ್ತಿವೆ. ಇದಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಸುತ್ತಿ ಹಾವಳಿ ನಿಯಂತ್ರಿಸಲಾಗುತ್ತಿತ್ತು. ಇದು ಕೆಲವು ತಿಂಗಳು ಮಾತ್ರ. ಈಗ ಪ್ಲಾಸ್ಟಿಕ್ ಚೀಲವನ್ನು ಬುಡದಲ್ಲಿ ಎತ್ತಿ ಮೆಣಸಿನ ಬಳ್ಳಿಗಳನ್ನು ತುಂಡರಿಸಲು ಹಂದಿಗಳು ಆರಂಭಿಸಿವೆ. ಇವುಗಳ ನಿಯಂತ್ರಣಕ್ಕೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮತ್ತು ಕಾಳು ಮೆಣಸಿನ ಬಳ್ಳಿಗಳ ಆಧಾರದಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು’ ಎಂದು ಪ್ರಗತಿಪರ ಕೃಷಿಕರಾದ ಕೆ.ಪಿ. ಪ್ರವೀಣ್ ಆಗ್ರಹಿಸಿದರು.
ಪ್ಲಾಸ್ಟಿಕ್ ಚೀಲದಿಂದ ಬಳ್ಳಿಯ ಬುಡ ಮುಚ್ಚಿದರೂ ಬಿಡದ ಮುಳ್ಳುಹಂದಿಗಳು ಬಳ್ಳಿನಾಶಕ್ಕೆ ಇಲ್ಲ ಪರಿಹಾರ ದಿಕ್ಕು ಕಾಣದಂತಾದ ಬೆಳೆಗಾರರು
ಮುಳ್ಳು ಹಂದಿಗಳ ಹಾವಳಿ ಬಗ್ಗೆ ಮಾಹಿತಿ ದೊರಕಿದೆ. ಇಲಾಖೆಯಲ್ಲಿ ಈ ನಷ್ಟಕ್ಕೆ ಪರಿಹಾರಕ್ಕೆ ಅವಕಾಶ ಇಲ್ಲ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಂದ ಅರ್ಜಿ ಬಂದಲ್ಲಿ ಕ್ರಮಕ್ಕೆ ಮುಂದಾಗುವೆವುಚೇತನ್ ಅರಣ್ಯ ಇಲಾಖೆಯ ರೇಂಜರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.