ADVERTISEMENT

ಸುಂಟಿಕೊಪ್ಪ: ಎಲೆಮರೆಯ ಕಾಯಂತಿದೆ ‘ದೇವಗಿರಿ ಜಲಪಾತ’

ಸುಂಟಿಕೊಪ್ಪ ವ್ಯಾಪ್ತಿಯಲ್ಲೊಂದು ಸಿಕ್ಕಿತು ಅನರ್ಘ್ಯ ‘ಜಲರತ್ನ’!

ಸುನಿಲ್ ಎಂ.ಎಸ್.
Published 18 ಜುಲೈ 2024, 6:46 IST
Last Updated 18 ಜುಲೈ 2024, 6:46 IST
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾ‍ಪ್ತಿಯಲ್ಲಿರುವ ದೇವಗಿರಿ ಜಲಪಾತ ಇದೀಗ ಭೋರ್ಗರೆದು ಹರಿಯುತ್ತಿದೆ
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾ‍ಪ್ತಿಯಲ್ಲಿರುವ ದೇವಗಿರಿ ಜಲಪಾತ ಇದೀಗ ಭೋರ್ಗರೆದು ಹರಿಯುತ್ತಿದೆ   

ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹುಡುಕುತ್ತಾ ಹೋದರೆ ಒಂದೊಂದೇ, ಒಂದೊಂದೇ ಜಲಪಾತಗಳು ‘ಜಲರ‌ತ್ನ’ಗಳಂತೆ ಸಿಗುತ್ತಾ ಹೋಗುತ್ತವೆ. ಇಷ್ಟು ಚಿಕ್ಕ ವ್ಯಾಪ್ತಿಯಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ಹಾಲೇರಿ ಜಲಪಾತ, ‘ಡಿ’ಬ್ಲಾಕ್ ಜಲಪಾತಗಳ ಜೊತೆಗೆ ಕಣ್ಣಿಗೆ ಸಿಗುವುದೇ ದೇವಗಿರಿ ಜಲಪಾತ.

ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗುವ ಈ ಜಲಪಾತ ಬಹುಜನರಿಗೆ ತಿಳಿದಿಲ್ಲ. ಎಲೆಮರೆಯ ಕಾಯಂತೆ ಇರುವ ಈ ಜಲಪಾತ ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಭೋರ್ಗರೆಯುತ್ತಿದ್ದು, ಉಳಿದ ಹೆಸರಾಂತ ಜಲಪಾತಗಳಿಗೆ ಸೆಡ್ಡು ಹೊಡೆಯುವಂತಿದೆ.

ಮಳೆಯ ಬಿರುಸಿನ ನಡುವೆ ಬೆಟ್ಟ ಶ್ರೇಣಿಗಳಲ್ಲಿ ಹರಿದು ಬರುತ್ತಿರುವ ಈ ಜಲಧಾರೆ, ಶ್ವೇತ ಬಣ್ಣದಿಂದ ವೈಭವದಿಂದ ನರ್ತಿಸುತ್ತಿದೆ. ಮೈದುಂಬಿ ಹರಿಯುತ್ತಿರುವ ಝರಿ, ತೊರೆಗಳ ಜೊತೆಗೆ ಇದೂ ಸಹ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ‌.

ADVERTISEMENT

ಈ ಪುಟ್ಟ ಫಾಲ್ಸ್ ತನ್ಜದೇ ಆದ ಕಿವಿಗೆ ಇಂಪಾದ ನೀನಾದದೊಂದಿಗೆ‌ ಹರಿಯುತ್ತಾ ತೋಟದ ಮಧ್ಯದ ಬಂಡೆ ಕಲ್ಲುಗಳ ಮೇಲೆ ಹರಿದು ತನ್ನದೇ ಆದ ರೂಪದಲ್ಲಿ ಕಾಣ ಸಿಗುತ್ತಿದೆ. ಇದರ ಹರಿಯುವಿಕೆ ನೋಡಿದರೆ ನರ್ತಿಸುತ್ತಿದೆ ಏನೋ ಎಂದು ಅನ್ನಿಸುತ್ತದೆ. ಇಂತಹ ರಮನೀಯ ಸೌಂದರ್ಯವನ್ನು ತುಂಬಿಕೊಂಡಿರುವುದೇ ದೇವಗಿರಿ ವಾಟರ್ ಫಾಲ್ಸ್.

ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ದೇವಗಿರಿ ಎಸ್ಟೇಟ್‌ನ ಒಳಭಾಗದಲ್ಲಿ ಯಾರ ಸುಳಿವಿಗೂ ಬಾರದಂತೆ ತನ್ನಷ್ಟಕ್ಕೆ ತಾನೇ ಲೀಲಾಜಾಲವಾಗಿ ಇದು ಹರಿಯುತ್ತಿದೆ.

ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆದಕಲ್ ಎಂಬ ಗ್ರಾಮವಿದ್ದು, ಅಲ್ಲಿಂದ‌ 50 ಮೀಟರ್ ಮುಂದಕ್ಕೆ ತೆರಳಿ ಎಡಭಾಗದ ಮಣ್ಣು ರಸ್ತೆಗೆ ತೆರಳಬೇಕು. ಅಲ್ಲಿಂದ ಒಂದೂವರೆ ಕಿ.ಮೀ.ದೂರದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ದೇವಗಿರಿ ಎಂಬ ಹೆಸರಿನ ತೋಟವಿದೆ. ಈ ತೋಟದ ಮಧ್ಯದಲ್ಲಿ ರಮಣೀಯ ಸೊಬಗಿನ ಹಿತವಾದ ಸದ್ದಿನೊಂದಿಗೆ ಹರಿಯುವ ‘ದೇವಗಿರಿ ವಾಟರ್ ಫಾಲ್ಸ್’ ನೋಡಿ ಆಸ್ವಾದಿಸುವುದೇ ರೋಮಂಚನ ಎನಿಸುತ್ತದೆ. ಇದರ‌ ಹರಿವು ಎಂತವರನ್ನು ಮೂಕವಿಸ್ಮಿತಗೊಳಿಸುತ್ತದೆ.

ಈ ಫಾಲ್ಸ್‌ನ 500 ಮೀಟರ್ ದೂರದಲ್ಲಿಯೇ ಮೈ ಚಾಚಿ ನಿಂತಿರುವ ಮತ್ತೊಂದು ಜಲಪಾತವೇ ‘ಡಿ’ ಬ್ಲಾಕ್' ಫಾಲ್ಸ್ ಆಗಿದೆ. ಈ ಎರಡು ಜಲಪಾತಗಳ ಏಕಕಾಲದ ಸದ್ದು ಕಿವಿಗೆ ಇಂಪನ್ನು ನೀಡುವುದರ ಜೋತೆಗೆ ಮನಸ್ಸು ಕೂಡ ನೆಮ್ಮದಿಯತ್ತ ಸಾಗುತ್ತದೆ. ಈ ಪುಟ್ಟ ಫಾಲ್ಸ್ ನೋಡಿದಾಗ ಎಲ್ಲ ನೋವನ್ನು ಮರೆತು ಕಾಲ ಕಳೆಯುವಂತೆ ಮಾಡುತ್ತದೆ.

ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೇವಗರಿ ಜಲಪಾತ ತುಂಬಿ ಹರಿಯುತ್ತಿದೆ
ಈ ಜಲಪಾತದಿಂದ 500 ಮೀಟರ್ ದೂರದಲ್ಲಿದೆ ‘ಡಿ’ ಬ್ಲಾಕ್ ಜಲಪಾತ ಸುಮಧುರ ನಾದದೊಂದಿಗೆ ಹರಿಯುವ ಜಲಧಾರೆ ಸುರಿಯುವ ಮಳೆ ಜಲಸಿರಿಗೆ ಮೆರುಗು ತಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.