ADVERTISEMENT

ದೇವರಗುಂಡಿ ಜಲಪಾತದ ಚಿತ್ತಾರ

ಧಾರ್ಮಿಕವಾಗಿಯೂ ಮಹತ್ವ ಪಡೆದ ಪೇರೂರಿನ ಅಪರೂಪದ ಜಲಧಾರೆ

ಸಿ.ಎಸ್.ಸುರೇಶ್
Published 10 ಜುಲೈ 2024, 7:04 IST
Last Updated 10 ಜುಲೈ 2024, 7:04 IST

ದೇವರಗುಂಡಿಯಲ್ಲಿ ತುಂಬಿ ಹರಿಯುವ ಬೆಳ್ನೊರೆಯ ಜಲರಾಶಿ.

ದೇವರಗುಂಡಿಯಲ್ಲಿ ತುಂಬಿ ಹರಿಯುವ ಬೆಳ್ನೊರೆಯ ಜಲರಾಶಿ.

ನಾಪೋಕ್ಲು: ಭಾಗಮಂಡಲ – ನಾಪೋಕ್ಲು ಮುಖ್ಯರಸ್ತೆಯಲ್ಲಿ ಬಲ್ಲಮಾವಟಿ ಗ್ರಾಮದಿಂದ ಎಡಕ್ಕೆ ತಿರುವು ಪಡೆದು ಪೇರೂರು ಗ್ರಾಮದತ್ತ ಎತ್ತರಕ್ಕೇರಿದರೆ ಕಾಫಿ ತೋಟಗಳ ನಡುವೆ ಪುಟ್ಟ ದಾರಿ ಹಾದು ಹೋಗುತ್ತದೆ. ಸುಮಾರು 5 ಕಿ.ಮೀ. ಎತ್ತರಕ್ಕೆ ಸಾಗಿದಾಗ ಮಂಜಾಟ್ ಕಾಲೊನಿ ಸಿಗುತ್ತದೆ. ಇಲ್ಲಿಂದ ಕೂಗಳತೆಯ ದೂರದಲ್ಲಿ ದೇವರ ಗುಂಡಿ ಜಲಪಾತವಿದೆ.

ADVERTISEMENT

ಇದು ಪೇರೂರಿನ ಪವಿತ್ರ ತಾಣ. ಬೆಟ್ಟಸಾಲುಗಳಿಂದ ಹಾದು ಬರುವ ವಿವಿಧ ಜಲಪಾತಗಳ ಜಲಧಾರೆ ಇಲ್ಲಿ ದೊಡ್ಡದಾದ ಹೊಂಡಕ್ಕೆ ಧುಮುಕುತ್ತದೆ. ಅಲ್ಲೊಂದು ಜಲಪಾತ ಸೃಷ್ಟಿಯಾಗಿದೆ. ಅದನ್ನು ದೇವರ ಗುಂಡಿ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ.

ಒಂದಷ್ಟು ಎತ್ತರದಿಂದ ಬೆಳ್ನೋರೆ ಯಾಗಿದ್ದು ಧುಮುಕುವ ಜಲಧಾರೆ ದೇವರ ಗುಂಡಿಯಲ್ಲಿ ಚಕ್ರಾಕಾರವಾಗಿ ಸುತ್ತುತ್ತಾ ಮತ್ತೆ ಬಂಡೆಗಲ್ಲುಗಳ ಸೆರೆಯಿಂದ ಇಳಿದು ಸಾಗುತ್ತದೆ. ಮುಂದೆ ಮತ್ತಷ್ಟು ಇಳಿದು ಪಾರೆಕಡು ಎಂಬಲ್ಲಿ ತಂಡ್ರ ಹೊಳೆಯನ್ನು ಸಂಧಿಸುವ ಈ ಜಲಧಾರೆ ಬಳಿಕ ಕಾವೇರಿ ನದಿಯಲ್ಲಿ ಮಿಲನಗೊಂಡು ಮುಂದೆ ಸಾಗುತ್ತದೆ.

ದೇವರ ಗುಂಡಿ ಮಳೆಗಾಲದಲ್ಲಿ ಚೆಲುವಿನ ಚಿತ್ತಾರವನ್ನು ಸೃಷ್ಟಿಸಿದೆ. ಇಲ್ಲಿನ ಜಲಪಾತ ಸುರುಳಿ ಆಕಾರದಲ್ಲಿ ಸುತ್ತುತ್ತಾ ಸಾಗುತ್ತದೆ. ಮತ್ತೆ ಮೇಲೇರಿದಂತೆ ಇದರ ಮೂಲ ಹುಡುಕುತ್ತಾ ಸಾಗಿದಾಗ ಉದ್ದಕ್ಕೂ ಒಂದೊಂದು ಜಲಪಾತಗಳು ಕಾಣಿಸುತ್ತವೆ. ಮೇಲಕ್ಕೆ ಮೇಲಕ್ಕೆ ಸಾಗಿದಂತೆ ಒಂದಲ್ಲ, ಎರಡಲ್ಲ 7 ಜಲಧಾರೆಗಳು ಒಂದಕ್ಕಿಂತ ಒಂದು ಭಿನ್ನವಾಗಿ, ರೋಚಕವಾಗಿ ಕಾಣಿಸುತ್ತವೆ. ಮೇಲಿನ ತುಂಬೆಮಲೆ ಬೆಟ್ಟದಿಂದ ಇಳಿದು ಬರುವ ಜಲಧಾರೆ 7 ಜಲಪಾತಗಳನ್ನು ಸೃಷ್ಟಿಸಿದೆ. ಸ್ಥಳೀಯರ ಪ್ರಕಾರ ಇದು ಸಪ್ತ ಋಷಿಗಳಿಗೆ ಸಂಬಂಧಿಸಿದ ಜಲಪಾತಗಳಾಗಿವೆ. ಹಿಂದೆ ಪೇರೂರಿನ ತಪೋವನದಲ್ಲಿ ಋಷಿಗಳು ತಪಸ್ಸು ಮಾಡುತ್ತಿದ್ದರು.

ಸಪ್ತಋಷಿಗಳಿಗೆ ಸಂಬಂಧಿಸಿದ ತಪೋವನ ಪೇರೂರಿನ ಬೆಟ್ಟ ಶ್ರೇಣಿಗಳಾಗಿದ್ದು, ಅಲ್ಲಿಂದ ಉದ್ದಕ್ಕೂ ಹರಿದು ಬರುವ ಜಲಧಾರೆಗಳು ಪವಿತ್ರ ಜಲಧಾರೆಗಳಾಗಿವೆ. ದೇವರ ಗುಂಡಿ ಬಲ್ಲಮಾವಟಿ ಗ್ರಾಮದ ಬಲ್ಲತ್ತನಾಡು ಪೆರ್ಮೆ ರಾಟೆ ಭಗವತಿ ದೇವಸ್ಥಾನಕ್ಕೆ ಸಂಬಂಧಿಸಿದೆ. ವರ್ಷಕ್ಕೊಮ್ಮೆ ವಾರ್ಷಿಕ ಪೂಜಾ ಸಮಯದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ.

ದೇವರ ಗುಂಡಿಯತ್ತ ಸಾಗಲು ಯಾವುದೇ ಸೌಲಭ್ಯಗಳಿಲ್ಲ. ಸ್ಥಳೀಯರು ತಮ್ಮ ಸ್ವಂತ ವಾಹನಗಳಲ್ಲಿ ತೆರಳಬೇಕಿದೆ. ಜಲಪಾತ ವೀಕ್ಷಣೆಗೆ ಬರುವವರು ಬಲ್ಲಮಾವಟಿಯಿಂದ ಪೇರೂರು ಗ್ರಾಮಕ್ಕೆ ತಮ್ಮದೇ ಸ್ವಂತ ವಾಹನದಲ್ಲಿ ಬರಬೇಕು. ಜಲಧಾರೆಗಳ ವೀಕ್ಷಣೆಗೆ ಸ್ಥಳೀಯರ ನೆರವು ಬೇಕು. ಯಾವುದೇ ಬಸ್‌ ಸೌಲಭ್ಯಗಳು ಇಲ್ಲ.

ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವವರು ಬಲ್ಲಮಾವಟಿ ಗ್ರಾಮದಲ್ಲಿ ಇಳಿದು ಪೇರೂರಿನತ್ತ ಸಾಗಿದರೆ ದೇವರಗುಂಡಿ ಜಲಪಾತ ತಲುಪಬಹುದು. ಗ್ರಾಮದ ಪರಿಸರ ಖುಷಿಕೊಡುತ್ತದೆ. ಸರಿಯಾದ ಮಾಹಿತಿ ಮತ್ತು ವ್ಯವಸ್ಥೆ ಇಲ್ಲದ ಕಾರಣ ಈ ಜಲಪಾತ ಅಜ್ಞಾತವಾಗಿದೆ. ಆದರೆ, ಬೆಟ್ಟದಿಂದ ಹರಿದು ಬರುವ ಜಲಧಾರೆ ಗ್ರಾಮದ ಜನರಿಗೆ ನೀರಿನ ಮೂಲವಾಗಿದೆ. ಬಲ್ಲಮಾವಟಿ ಗ್ರಾಮದಲ್ಲಿ ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಿ ಊರಿಗೆ ಸದಾ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಮಳೆಗಾಲದಲ್ಲಿ ಇಲ್ಲಿನ ಜಲಪಾತಗಳು ಶ್ವೇತವೈಭವದಿಂದ ಕಂಗೊಳಿಸಿದರೆ ಬೇಸಿಗೆಯಲ್ಲಿ ಮಾತ್ರ ಜಲಧಾರೆ ಕ್ಷೀಣವಾಗಿ ಹರಿಯುತ್ತದೆ. ದೇವರಗುಂಡಿಯಲ್ಲಿ ಮಾತ್ರ ನೀರು ಸದಾ ತುಂಬಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.