ಸಿದ್ದಾಪುರ: ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಶ್ರೀ ಗುಹ್ಯ ಅಗಸ್ತ್ಯೇಶ್ವರ ದೇವಾಲಯ ಕಾವೇರಿ ನದಿ ತಡದಲ್ಲಿ, ಪ್ರಕೃತಿ ಸೌಂದರ್ಯದ ನಡುವೆ ಕಂಗೊಳಿಸುತ್ತಿದೆ. ಅಲ್ಲೀಗ ಅ. 28ರಿಂದ ನ.1ರವರೆಗೆ ಉತ್ಸವ ನಡೆಯಲಿದ್ದು, ಭಕ್ತರು ಕಾತರರಾಗಿದ್ದಾರೆ.
ಕಾವೇರಿಯ ಕಥೆಯಲ್ಲಿ ಅಗಸ್ತ್ಯ ಮುನಿಯ ಕಮಂಡಲದಿಂದ ಹರಿದ ಕಾವೇರಿ ಗುಪ್ತಗಾಮಿನಿಯಾಗಿ ಕುಂಡಿಕೆಯವರೆಗೆ ಹರಿದು ಬರುತ್ತಾರೆ. ಅಲ್ಲಿಂದ ಬಲಮುರಿ ಮಾರ್ಗವಾಗಿ ಗುಹ್ಯ ಗ್ರಾಮಕ್ಕೆ ಬರುವುದನ್ನು ಅರಿತ ಅಗಸ್ತ್ಯ ಮುನಿ, ಗುಹ್ಯ ಗ್ರಾಮದಲ್ಲಿ ಸಪ್ತ ಋಷಿಗಳ ಸಮ್ಮುಖದಲ್ಲಿ ಕಾವೇರಿಯೊಂದಿಗೆ ಪಂಚಾಯಿತಿ ನಡೆಸಲು ಮುಂದಾಗುತ್ತಾರೆ. ಈಗಿನ ದೇವಾಲಯದ ಸಮೀಪದ ಅರಳಿ ಮರದ ಕೆಳಗೆ ಪಂಚಾಯಿತಿ ನಡೆಯುತ್ತದೆ. ಬಳಿಕ ತಾನು ಲೋಕಕಲ್ಯಾಣಕ್ಕಾಗಿ ಮುಂದೆ ಹರಿಯುವುದಾಗಿ ತಿಳಿಸಿದ್ದು, ಪಂಚಾಯಿತಿ ವಿಫಲವಾಗುತ್ತದೆ. ಈ ವೇಳೆ ಅಗಸ್ತ್ಯ ಮುನಿಯು ಪ್ರತಿಷ್ಠಾಪಿಸಿದ ಈಶ್ವರನನ್ನು ಅಗಸ್ತ್ಯೇಶ್ವರ ಎಂದು ಕರೆಯಲಾಯಿತು.
ಇದಕ್ಕೂ ಮೊದಲು ಸಮೀಪದಲ್ಲೇ ವಿಷ್ಣುವಿನ ದೇವಾಲಯ ಇತ್ತು ಎಂಬುದು ನಂಬಿಕೆ. ಪಂಚಾಯಿತಿ ನಡೆದ ಅರಳಿ ಮರ ದೇವಾಲಯದ ಮುಂದೆ ಇದ್ದು, ಭಕ್ತರು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಒಂದು ಕಥೆಯ ಪ್ರಕಾರ ಕಾವೇರಿಯು ದೇವಾಲಯದ ಬಳಿಯಿಂದ ಕಾಣದಂತೆ ಗುಪ್ತವಾಗಿ ಹರಿದಿದ್ದ ಕಾರಣ ಗ್ರಾಮಕ್ಕೆ ಗುಹ್ಯ ಎಂಬ ಹೆಸರು ಬಂತು ಎನ್ನಲಾಗುತ್ತಿದೆ. ಉತ್ಸವದ ಕೊನೆಯ ದಿನದಲ್ಲಿ ದೇವಾಲಯದ ಅನತಿ ದೂರದಲ್ಲಿರುವ ಕಾವೇರಿ ಗುಪ್ತವಾಗಿ ಹರಿದು, ಎದ್ದ ಜಾಗದ ಕಲ್ಲಿನ ಗುಹೆಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಮತ್ತೊಂದು ಕಥೆಯ ಪ್ರಕಾರ ಮಹಾವಿಷ್ಣುವು ಗುಟ್ಟಾಗಿ ಅಡಗಿದ್ದ ಕಾರಣ ಗುಹ್ಯ ಎಂಬ ಹೆಸರು ಬಂತು ಎನ್ನುತ್ತಾರೆ ಗ್ರಾಮಸ್ಥರು.
ಸುತ್ತಲೂ ಹಚ್ಚ ಹಸಿರ ಪರಿಸರ, ಸಮೀಪದಲ್ಲೇ ಹರಿಯುತ್ತಿರುವ ಕಾವೇರಿ ನದಿಯ ಬಳಿಯಲ್ಲೇ ಇರುವ ಈ ದೇವಾಲಯಕ್ಕೆ ವಿವಿಧೆಡೆಗಳಿಂದ ನೂರಾರು ಭಕ್ತರು ಆಗಮಿಸುತ್ತಾರೆ. ದೀಪಾವಳಿಯಂದು ದೇವಾಲಯದ ಉತ್ಸವ ನಡೆಯಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.
ಸುತ್ತಲೂ ಇದೆ ಹಚ್ಚ ಹಸಿರ ಪರಿಸರ ಸಮೀಪದಲ್ಲೇ ಹರಿಯುತ್ತಿದೆ ಕಾವೇರಿ ನದಿ ನಡೆಯಲಿದೆ ದೀಪಾವಳಿಯಂದು ಉತ್ಸವ
ಅಗಸ್ತ್ಯೇಶ್ವರ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ವಿಗ್ರಹವು ಅಗಸ್ತ್ಯ ಮುನಿ ಸ್ಥಾಪಿಸಿದ್ದು ದೀಪಾವಳಿಯಂದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.ಎಂ.ಎಸ್.ವೆಂಕಟೇಶ್ ಗ್ರಾಮಸ್ಥರು.
ಪ್ರತಿ ವರ್ಷ ದೀಪಾವಳಿಯಂದು ದೇವಾಲಯದ ಉತ್ಸವ ನಡೆಯಲಿದ್ದು ಜಿಲ್ಲೆಯ ವಿವಿಧ ಭಾಗದಿಂದ ಭಕ್ತಾದಿಗಳು ಆಗಮಿಸುತ್ತಾರೆ. ದೀಪಾವಳಿ ಅಮವಾಸ್ಯೆಯಂದು ಪಿತೃಗಳಿಗೆ ಪುಣ್ಯಲೋಕ ಪ್ರಾಪ್ತಿಗಾಗಿ ಮತ್ತು ಸದ್ಗತಿಗಾಗಿ ಪಿಂಡ ಹಾಕಲಾಗುತ್ತಿದೆ.ಸುಬ್ರಮಣ್ಯ ಅರ್ಚಕರು.
28ರಂದು ಉತ್ಸವಕ್ಕೆ ಚಾಲನೆ
ಅ. 28ರಂದು ಹುಲಿತಾಳ ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಉತ್ಸವಕ್ಕೆ ಚಾಲನೆ ದೊರಕಲಿದೆ. ಅಂದು ಬೆಳಿಗ್ಗೆ 9.30ಕ್ಕೆ ಪಂಚಗವ್ಯ ಪುಣ್ಯಾಹ ಗಣಪತಿ ಹವನ 10.30ಕ್ಕೆ ಮಹಾವಿಷ್ಣು ದೇವಾಲಯದಲ್ಲಿ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಸಂಜೆ 6.30ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವುದು 7.30ಕ್ಕೆ ಕೊಡಿಮರ ನಿಲ್ಲಿಸುವುದು ದೇವರ ಸುತ್ತುಬಲಿ ಅನ್ನಸಂತರ್ಪಣೆ ನಡೆಯಲಿದೆ. ಅ.29 ಹಾಗೂ 30ರಂದು ಬೆಳಿಗ್ಗೆ ದೇವರ ಸುತ್ತುಬಲಿ ಮಧ್ಯಾಹ್ನ ಮಹಾಪೂಜೆ ಸಂಜೆ ದೇವರ ಸುತ್ತುಬಲಿ ಮಹಾಪೂಜೆ ಅ. 31ರಂದು ಬೆಳಿಗ್ಗೆ ದೇವರ ಸುತ್ತುಬಲಿ ಮಧ್ಯಾಹ್ನ ಮಹಾಪೂಜೆ ರಾತ್ರಿ ನೆರಪು ಜಾತ್ರೆ ಸುತ್ತುಬಲಿ ರಂಗಪೂಜೆ ವಸಂತಪೂಜೆ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ನ. 1ರಂದು ಬೆಳಿಗ್ಗೆ ದೀಪಾವಳಿ ಅಮಾವಾಸ್ಯೆ ಪಿಂಡ ತಿಲತರ್ಪಣ ದೇವರಿಗೆ ಮಹಾಪೂಜೆ ಅನ್ನಸಂತರ್ಪಣೆ ಸಂಜೆ 4 ಗಂಟೆಗೆ ಸುತ್ತುಬಲಿ ಬಳಿಕ ದೇವರ ಜಳಕ ಗಂಗಾರತಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.