ADVERTISEMENT

ನಾಪೋಕ್ಲು: ಕಾಫಿ ಇಳುವರಿ ಹೆಚ್ಚಿಸಲು ತುಂತುರು ನೀರು

ಸುರೇಶ್‌ ಸಿ.ಎಸ್‌
Published 9 ಫೆಬ್ರುವರಿ 2024, 6:17 IST
Last Updated 9 ಫೆಬ್ರುವರಿ 2024, 6:17 IST
   

ನಾಪೋಕ್ಲು: ಕೊಯ್ಲು ಪೂರ್ಣಗೊಳ್ಳು ತ್ತಿದ್ದಂತೆ ಕಾಫಿ ತೋಟಗಳಿಗೆ ನೀರು ಹಾಯಿಸುವತ್ತ ಬೆಳೆಗಾರರು ಚಿತ್ತ ಹರಿಸಿದ್ದಾರೆ. ಕಾಫಿಗೆ ಉತ್ತಮ ಧಾರಣೆ ದೊರೆಯುತ್ತಿರುವುದರಿಂದ ಉತ್ತಮ ಸಹಜ ಇಳುವರಿ ಪಡೆಯಲು ಬೆಳೆಗಾರರು ಉತ್ಸುಕರಾಗಿದ್ದಾರೆ. ಸಕಾಲದಲ್ಲಿ ತೋಟಗಳಿಗೆ ನೀರು ಹಾಯಿಸಿದರೆ ಅಧಿಕ ಇಳುವರಿಯೂ ಲಭಿಸುವುದರಿಂದ ನೀರಿನ ಲಭ್ಯತೆ ಉಳ್ಳವರು ತುಂತುರು ನೀರಾವರಿ ಕೈಗೊಳ್ಳುತ್ತಿದ್ದಾರೆ.

ಕಾಫಿ ಕೊಯ್ಲು ಪೂರೈಸಿರುವ ಸಮೀಪದ ಬೇತು, ಬಲಮುರಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ಹಾಯಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಕೆರೆ, ತೋಡು, ಹೊಳೆಗಳಿಂದ ಪಂಪ್ ಮೂಲಕ ನೀರು ಹಾಯಿಸುತ್ತಿದ್ದಾರೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದುದರಿಂದ ಕೆರೆಗಳಲ್ಲಿ , ನದಿಗಳಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹನಿ ಮಳೆ ಸುರಿದರೆ ಉತ್ತಮ ಕಾಫಿ ಫಸಲು ನಿಶ್ಚಿತ ಎಂದು ಬೆಳೆಗಾರರು ಹೇಳುತ್ತಾರೆ. ಈ ವೇಳೆಗೆ ಕಾಫಿ ಕೀಳುವ ಕೆಲಸ ಪೂರ್ಣಗೊಂಡಿದ್ದು ಕಾಫಿಯ ಮೊಗ್ಗುಗಳು ಅರಳಲು ಸಿದ್ಧವಾಗಿರುತ್ತವೆ. ಅದೇ ಸಮಯಕ್ಕೆ ಮಳೆ ಸುರಿದರೆ ಬೆಳೆಗಾರರು ಸಂಭ್ರಮಿಸುತ್ತಾರೆ. ನೀರಿನ ವ್ಯವಸ್ಥೆ ಉಳ್ಳವರು ತುಂತುರು ನೀರಾವರಿ ಮೊರೆ ಹೋಗುತ್ತಾರೆ. ಆದರೆ ಈ ವರ್ಷ ಕಾಫಿ ಕೊಯ್ಲು ಆಗುತ್ತಿರುವಾಗಲೇ ಜನವರಿ ತಿಂಗಳಲ್ಲಿ ಮಳೆಯಾಗಿದೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಅಂತೆಯೇ ಇದೀಗ ನೀರು ಹಾಯಿಸಿ ಇಳುವರಿಯನ್ನು ಕಾಯ್ದುಕೊಳ್ಳುವತ್ತ ರೈತರು ಪ್ರಯತ್ನ ನಡೆಸಿದ್ದಾರೆ.

ADVERTISEMENT

ಕೊಯ್ಲು ಪೂರೈಸಿದ ಕೆಲವು ತೋಟಗಳ ಬೆಳೆಗಾರರು ನೀರಿನ ಮೂಲಗಳಿಂದ ತುಂತುರು ನೀರಾವರಿ ವ್ಯವಸ್ಥೆ ಕೈಗೊಳ್ಳುತ್ತಿದ್ದಾರೆ. ಇದರಿಂದ ಕಾಫಿ ಹೂಗಳು ಅರಳಿ ಇಳುವರಿಯನ್ನು ಕಾಯ್ದುಕೊಳ್ಳಬಹುದು ಎಂದು ಬೆಳೆಗಾರ ಶ್ಯಾಂ ಕಾಳಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ಕೆಲವೊಮ್ಮೆ ಅಲ್ಪ ಮಳೆ ಸುರಿದು ಬೇಗನೆ ಕಾಫಿಯ ಹೂಗಳು ಅರಳಿದರೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗುತ್ತಿದೆ ಎಂದು ಬಹುತೇಕ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಲವು ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದ ಕಾಫಿ ಕೊಯ್ಲು ಮಂದಗತಿಯಲ್ಲಿ ಸಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.