ಗೋಣಿಕೊಪ್ಪಲು (ಕೊಡಗು ಜಿಲ್ಲೆ): ದಸರಾ ಆನೆ ‘ದ್ರೋಣ’ನ ಸಾವಿನ ಬಳಿಕ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆತಂಕದ ವಾತಾವರಣ ಇತ್ತು. ಭಾನುವಾರ, ಸಾಕಾನೆ ಶಿಬಿರದ ವಾತಾವರಣವು ಸಹಜ ಸ್ಥಿತಿಗೆ ಮರಳಿದ್ದು ಅರಣ್ಯಾಧಿಕಾರಿಗಳು ‘ದ್ರೋಣ’ನ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಶಿಬಿರದ ಇತರೆ ಆನೆಗಳು ಆರೋಗ್ಯವಾಗಿದ್ದು ಅವುಗಳನ್ನು ನೋಡಿಕೊಳ್ಳುತ್ತಿರುವ ಮಾವುತರು ಹಾಗೂ ಕಾವಾಡಿಗಳು ಭಾನುವಾರ ನಿರಾತಂಕವಾಗಿ ಕಾರ್ಯ ನಿರ್ವಹಿಸಿದರು. ಕಾಡಿಗೆ ತೆರಳಿದ್ದ 20 ಆನೆಗಳೂ ಸಂಜೆಯ ವೇಳೆಗೆ ಮರಳಿ ಶಿಬಿರಕ್ಕೆ ಬಂದವು. ಆದರೆ, ಹಿರಿಯ ಅಧಿಕಾರಿಗಳು ಯಾರೂ ಶಿಬಿರದತ್ತ ಬಂದು ಪರಿಶೀಲಿಸುವ ಕೆಲಸ ಮಾಡಿಲ್ಲ ಎಂಬ ದೂರುಗಳಿವೆ.
‘ಆಂಥ್ರಾಕ್ಸ್’ ರೋಗ ಲಕ್ಷಣವಿಲ್ಲ ಎಂಬುದು ತಿಳಿದಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂಬುದು ಕಂಡುಬರುತ್ತಿದೆ. ಆದರೂ, ಮೃತ ಆನೆಯ ಕರುಳು, ಶ್ವಾಸಕೋಶ, ಹೃದಯದ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ಆನೆ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಶಿಬಿರದ ಅರಣ್ಯಾಧಿಕಾರಿಯೊಬ್ಬರು ಹೇಳಿದರು.
‘ಆನೆಗಳಿಗೆ ಬೇಕಾದ ಆಹಾರ ಹಾಗೂ ಚಿಕಿತ್ಸೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ. ಪ್ರತಿದಿನ ವೈದ್ಯರು ಬಂದು ಆನೆಗಳ ಆರೋಗ್ಯವನ್ನು ಪರೀಕ್ಷಿಸುತ್ತಾರೆ. ಯಾವುದೇ ನಿರ್ಲಕ್ಷ್ಯವಾಗಿಲ್ಲ’ ಎಂದು ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ಶಿವಾನಂದ ಲಿಂಗಾಣಿ ತಿಳಿಸಿದರು.
ತೂಕ ಹೆಚ್ಚಿಸಿಕೊಂಡಿದ್ದ ‘ದ್ರೋಣ’:
2016ರಿಂದ 2018ರ ತನಕ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ‘ದ್ರೋಣ’ 2018ರಲ್ಲಿ ಬರೋಬ್ಬರಿ 430 ಕೆ.ಜಿಯಷ್ಟು ತೂಕ ಹೆಚ್ಚಿಸಿಕೊಂಡಿತ್ತು. 2018ರಲ್ಲಿ ಮೈಸೂರು ಅರಮನೆ ಸೇರುವಾಗ 3,900 ಕೆ.ಜಿಯಿದ್ದ ಆನೆ, ವಾಪಸ್ ಆಗುವಷ್ಟರಲ್ಲಿ 4,330 ಕೆ.ಜಿಗೆ ಏರಿಕೆ ಆಗಿತ್ತು.
ಯಶಸ್ವಿಯಾಗಿ ದಸರಾ ಮುಗಿಸಿ, ಮತ್ತಿಗೋಡು ಶಿಬಿರಕ್ಕೆ ಮರಳಿದ ಬಳಿಕವೂ ಆನೆ ಲವಲವಿಕೆಯಿಂದಲೇ ಇತ್ತು. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಎಂದು ಮಾವುತರೊಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.