ADVERTISEMENT

ಕೊಲೆ ಪ್ರಕರಣ ಕೈಬಿಡದಿದ್ದರೆ ಎಸ್‌.ಪಿ. ಕಚೇರಿ ಚಲೊ: ಎಸ್‌ಡಿಪಿಐ

ಎಚ್ಚರಿಕೆ ನೀಡಿದ ಎಸ್‌ಡಿಪಿಐ; ಗದ್ದೆಹಳ್ಳದ ಅಪಘಾತದಲ್ಲಿ ಮೃತಪಟ್ಟ ಮಹಿಳೆಗೆ ₹ 25 ಲಕ್ಷ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 4:05 IST
Last Updated 23 ಏಪ್ರಿಲ್ 2024, 4:05 IST

ಮಡಿಕೇರಿ: ವಾಲ್ನೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಡಿಕ್ಕಿ ಹೊಡೆದ ಕಾರು ಚಾಲಕನ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ, ಎಸ್.ಪಿ.ಕಚೇರಿ ಚಲೊ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ಲಾ ಅಡ್ಕರ್ ಎಚ್ಚರಿಸಿದರು.

‘ಇದೇ ಬಗೆಯ ಅಪಘಾತ ಪ್ರಕರಣ ಭಾನುವಾರ ಸುಂಟಿಕೊಪ್ಪದಲ್ಲಿ ನಡೆದಿದೆ. ಬುರ್ಖಾ ಧರಿಸಿದ್ದ ಮಹಿಳೆಯರ ಮೇಲೆ ಕಾರೊಂದು ಹರಿದಿದೆ. ಇಲ್ಲಿ ಏಕೆ ಕೊಲೆ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಈ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ ಭಯಗೊಂಡು ವಾಲ್ನೂರು ಪ್ರಕರಣದಲ್ಲಿ ಕಾರಿನ ಚಾಲಕ ಕಾರು ನಿಲ್ಲಿಸದೇ ಹೋಗಿದ್ದಾರೆ. ಈ ಪ್ರಕರಣವನ್ನೇ ಬಿಜೆಪಿ ತಿರುಚಿದೆ. ಕೊಡಗಿನ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಾ ಉದ್ರಿಕ್ತ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ADVERTISEMENT

ಪಕ್ಷದ ಪ್ರಧಾನ ಕಾರ್ಯದರ್ಶಿ ಬಷೀರ್ ಮಾತನಾಡಿ, ‘ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ನಾವೂ ಕೊಲೆ ಪ್ರಕರಣ ದಾಖಲಿಸಿ ಎಂದು ಅರ್ಜಿ ಕೊಟ್ಟಿದ್ದೆವು. ಆದರೆ, ಶಾಸಕ ಡಾ.ಮಂತರ್‌ಗೌಡ ಅವರು ಬಿಜೆ‍‍ಪಿ ಓಲೈಸಲು ಪ್ರಕರಣ ದಾಖಲಿಸಲು ಬಿಟ್ಟಿಲ್ಲ’ ಎಂದು ದೂರಿದರು.

‘ಮನಸ್ಸು ಮಾಡಿದ್ದರೆ ನಾವೂ ಬಿಜೆಪಿಯವರಂತೆ ಪ್ರತಿಭಟನೆ ಮಾಡಬಹುದಿತ್ತು. ಆದರೆ, ನಮಗೆ ಮಾನವೀಯತೆ ಇದೆ. ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಹಾಗಾಗಿ, ಪ್ರತಿಭಟನೆಗೆ ಇಳಿಯಲಿಲ್ಲ. ಒಂದು ಸಮುದಾಯಕ್ಕೆ ಒಂದು ನ್ಯಾಯ, ಮತ್ತೊಂದು ಸಮುದಾಯದಕ್ಕೆ ಇನ್ನೊಂದು ನ್ಯಾಯ ನೀಡುವುದು ಸರಿಯಲ್ಲ’ ಎಂದು ಖಂಡಿಸಿದರು.

ಅಪಘಾತದಲ್ಲಿ ಮೃತಪಟ್ಟ ರಾಬಿಯಾ ಕುಟುಂಬಸ್ಥರು ತೀರಾ ಬಡವರು. ಅವರಿಗೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ರಿಜ್ವಾನ್, ಉಸ್ಮಾನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.