ADVERTISEMENT

ಕೊಡಗು | ರಣಬಿಸಿಲಿಗೆ ಬರಿದಾದ ತೊರೆ, ತೋಡು

ದಕ್ಷಿಣ ಕೊಡಗಿನಲ್ಲಿ ಏರುತ್ತಿದೆ ತಾಪಮಾನ; ಕುಡಿಯುವ ನೀರಿಗೆ ಹಾಹಾಕಾರ ಸನ್ನಿಹಿತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 5:38 IST
Last Updated 6 ಮಾರ್ಚ್ 2024, 5:38 IST
ಗೋಣಿಕೊಪ್ಪಲು ಬಳಿಯ ಕಿರುಗೂರಿನ ಕೀರೆಹೊಳೆ ನೀರಿಲ್ಲದೆ ಬಂಡೆಕಲ್ಲುಗಳಿಂದ ಕೂಡಿದೆ
ಗೋಣಿಕೊಪ್ಪಲು ಬಳಿಯ ಕಿರುಗೂರಿನ ಕೀರೆಹೊಳೆ ನೀರಿಲ್ಲದೆ ಬಂಡೆಕಲ್ಲುಗಳಿಂದ ಕೂಡಿದೆ   

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ತೊರೆ ತೋಡುಗಳೆಲ್ಲ ರಣ ಬಿಸಿಲಿನ ಹೊಡೆತಕ್ಕೆ ಫೆಬ್ರುವರಿಯಿಂದಲೇ ಬತ್ತ ತೊಡಗಿವೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಒಂದು ಹದ ಸುರಿಯುತ್ತಿದ್ದ ಮಳೆ ಈಗ ಕಾಣದಾಗಿದೆ. ಇದರಿಂದ ಎಲ್ಲ ಬಗೆಯ ಜಲಮೂಲಗಳೂ ಬರಿದಾಗುತ್ತಿದ್ದು, ಆತಂಕ ಮೂಡಿಸಿದೆ.

ಈ ಭಾಗದ ಪ್ರಮುಖ ನದಿ ಲಕ್ಷ್ಮಣತೀರ್ಥ ಸಂಪೂರ್ಣವಾಗಿ ಬರದಾಗಿದೆ. ನದಿಯ ಉಗಮ ಸ್ಥಾನ ಕುರ್ಚಿಯಿಂದ ಹಿಡಿದು ನಾಗರಹೊಳೆ ಅರಣ್ಯದಂಚಿನ ನಿಟ್ಟೂರು, ಮಲ್ಲೂರು, ಜಾಗಲೆವರೆಗೂ ನದಿ ಒಡಲಿನ ಹಳ್ಳಕೊಳ್ಳಗಳಲ್ಲಿ ಒಂದಷ್ಟು ನೀರು ನಿಂತಿರುವುದನ್ನು ಬಿಟ್ಟರೆ ನದಿ ಪೂರ್ಣ ಪ್ರಮಾಣದಲ್ಲಿ ನಿರ್ಜೀವಗೊಂಡಂತೆ ಕಾಣುತ್ತಿದೆ.

ಜತೆಗೆ, ಇದರ ಉಪನದಿಗಳಾದ ಕೀರೆಹೊಳೆಗಳು ಕೂಡ ನೀರಿಲ್ಲದೆ ಜೊಂಡು ಬೆಳೆದು ಬತ್ತಿ ಹೋಗಿವೆ. ಮಳೆಗಾಲದಲ್ಲಿ ತಮ್ಮ ಆಸುಪಾಸಿನ ಗದ್ದೆಬಯಲು ಹಳ್ಳಕೊಳ್ಳಗಳನ್ನು ಕಿಲೋಮೀಟರ್ ದೂರದವರೆಗೆ ಆವರಿಸಿಕೊಳ್ಳುವ ಈ ನದಿಗಳ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಎನ್ನಿಸುತ್ತದೆ. ಊರು ಮತ್ತು ಪಟ್ಟಣದ ಭಾಗದಲ್ಲಿ ನದಿ ಒಡಲು ತ್ಯಾಜ್ಯ ಸುರಿಯುವ ಕೇಂದ್ರಗಳಾಗಿವೆ. ಖಾಲಿಯಾಗಿರುವ ನದಿ ಒಡಲಿಗೆ ಜನತೆ ತ್ಯಾಜ್ಯವನ್ನು ಎಸೆದು ಕಸಮಯಗೊಳಿಸುತ್ತಿದ್ದಾರೆ.

ADVERTISEMENT

ಲಕ್ಷ್ಮಣತೀರ್ಥ ನದಿ ಬಲ್ಯಮಂಡೂರು, ಹರಿಹರ ಕಾನೂರು, ಕೊಟ್ಟಗೇರಿ, ನಿಟ್ಟೂರು, ಬಾಳೆಲೆ ಭಾಗದಲ್ಲಿ ಮರಳಿನಿಂದ ತುಂಬಿ ಹೋಗಿವೆ. ಹಳ್ಳದಲ್ಲಿರುವ ನೀರಿನಲ್ಲಿ ಕೂಲಿ ಕಾರ್ಮಿಕ ಮಕ್ಕಳು ಮೀನು ಹಿಡಿಯುವ ಆಟ ಆಡುತ್ತಿರುವುದು ಕಂಡು ಬರುತ್ತಿದೆ. ನದಿ ತೊರೆಗಳು ಬತ್ತಿರುವುದರಿಂದ ಕುಡಿಯುವ ನೀರಿನ ಮೂಲವಾಗಿದ್ದ ಕೊಳವೆ ಬಾವಿಗಳ ಅಂತರ್ಜಲವೂ ಪಾತಾಳಕ್ಕೆ ಇಳಿದಿದೆ. ಹೀಗಾಗಿ, ಈ ಭಾಗದ ಗ್ರಾಮ ಪಂಚಾಯಿತಿಗಳು 3 ದಿನಗಳಿಗೆ ಒಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿವೆ.

ಮತ್ತೊಂದು ಕಡೆ ಕಾಫಿ ಕೊಯ್ಲು ಮುಗಿಸಿಕೊಂಡ ಬೆಳೆಗಾರರು ಮುಂದಿನ ವರ್ಷದ ಫಸಲಿಗಾಗಿ ಈಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಕಾಫಿ ತೋಟಕ್ಕೆ ಕೆರೆಗಳಿಂದ ಸ್ಪಿಂಕ್ಲರ್ ಮೂಲಕ ಹಗಲು ರಾತ್ರಿ ಎನ್ನದೇ ನೀರು ಹಾಯಿಸುತ್ತಿದ್ದಾರೆ. ಹೀಗಾಗಿ, ತೋಟದ ಕೆರೆಗಳ ನೀರು ಖಾಲಿಯಾಗತೊಡಗಿದೆ.

ಕಳೆದ ವರ್ಷ ದಕ್ಷಿಣ ಕೊಡಗಿಗೆ ವಾಡಿಕೆ ಪ್ರಮಾಣದ ಮಳೆ ಬೀಳಲಿಲ್ಲ. ಇಡೀ ಮಳೆಗಾಲದಲ್ಲಿ ಕೇವಲ ಎರಡು ದಿನ ಮಾತ್ರ ನಿರಂತರವಾಗಿ ಮಳೆ ಸುರಿಯಿತು. ಇದರಿಂದಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಲಿಲ್ಲ. ಜತೆಗೆ, ಈ ಬಾರಿ ಬಿಸಿಲಿನ ತಾಪ ಬೇರೆ ಅತಿಯಾಗಿದೆ. ಹೀಗಾಗಿ, ಯಾರ ಬಾಯಲ್ಲಿಯೂ ಕೇಳಿ ಬರುತ್ತಿರುವ ಮಾತೆಂದರೆ ನದಿ–ತೊರೆಗಳು ಒಣಗಿರುವುದು ಮತ್ತು ಅತಿಯಾದ ಬಿಸಿಲಿನ ತಾಪ.

ಕಾಫಿ ತೋಟ ಬಿಟ್ಟರೆ ಅರಣ್ಯದ ಮರಗಳು ಎಲೆ ಉದುರಿಸಿ ಕಾಡೆಲ್ಲ ಬಯಲಾಗಿದೆ. ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಕೆರೆಗಳಲ್ಲಿ ನೀರಿನ ಪ್ರಮಾಣ ಉತ್ತಮವಾಗಿರುವುದರಿಂದ ಸದ್ಯ ವನ್ಯಜೀವಿಗಳ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿಲ್ಲ.

ಯಾವ ಕಡೆ ನೋಡಿದರೂ ತೋಡುಗಳೆಲ್ಲ ಬತ್ತಿ ಹೋಗಿವೆ. ನೀರಿನ ಸೆಲೆಯೇ ಇಲ್ಲದಾಗಿದೆ. ಇದರಿಂದ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗಿದೆ.
ಸಿ.ಪಿ.ಬೆಳ್ಳಿಯಪ್ಪ, ಕಾಫಿ ಬೆಳೆಗಾರರು ಅತ್ತೂರು
ಜಾಗತಿಕ ತಾಪಮಾನ ಕೊಡಗನ್ನು ಬಿಟ್ಟಿಲ್ಲ. ಬಹಳಷ್ಟು ಗಿಡಮರಗಳಿದ್ದರೂ ಬೆಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಇಳಿಕೆಗೆ ಮಳೆ ಒಂದೇ ಪರಿಹಾರ.
ಎಂ.ಎಸ್ ಕುಶಾಲಪ್ಪ, ಕಾಫಿ ಬೆಳೆಗಾರರು ಪೊನ್ನಂಪೇಟೆ
ನಲ್ಲೂರು ಬಳಿಯ ಕೀರೆಹೊಳೆಯಲ್ಲಿ ಜೊಂಡು ಬೆಳೆದು ನದಿಯೇ ಮುಚ್ಚಿ ಹೋಗಿದೆ
ಬಾಳೆಲೆ ಬಳಿಯ ನಿಟ್ಟೂರು ಸೇತುವೆ ಬಳಿ ಲಕ್ಷ್ಮಣತೀರ್ಥ ನದಿ ಖಾಲಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.