ADVERTISEMENT

ಮುಗಿದ ದಸರಾ, ಇನ್ನು ಕಾವೇರಿ ಜಾತ್ರೆ ಸಂಭ್ರಮ

ಭಾಗಮಂಡಲ, ತಲಕಾವೇರಿ ಕ್ಷೇತ್ರಗಳಲ್ಲಿ ನಡೆದಿದೆ ಬಿರುಸಿನ ಸಿದ್ಧತೆ

ಸಿ.ಎಸ್.ಸುರೇಶ್
Published 16 ಅಕ್ಟೋಬರ್ 2024, 7:12 IST
Last Updated 16 ಅಕ್ಟೋಬರ್ 2024, 7:12 IST
ಹೂವಿನ ಅಲಂಕಾರದಿಂದ ಕಂಗೊಳಿಸಲಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯ ಸಂಕೀರ್ಣ.
ಹೂವಿನ ಅಲಂಕಾರದಿಂದ ಕಂಗೊಳಿಸಲಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯ ಸಂಕೀರ್ಣ.   

ನಾಪೋಕ್ಲು: ಜೀವನದಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ವರ್ಷಂಪ್ರತಿ ನಡೆಯುವ ಅದ್ಧೂರಿ ಜಾತ್ರೆಗೆ ಕಾವೇರಿನಾಡು ಸಜ್ಜಾಗುತ್ತಿದೆ.

ತುಲಾ ಸಂಕ್ರಮಣ ಕಾವೇರಿ ಜಾತ್ರೆಗೆ ಭಾಗಮಂಡಲ- ತಲಕಾವೇರಿ ಕ್ಷೇತ್ರಗಳಲ್ಲಿ ಸಿದ್ಧತೆಗಳಾಗುತ್ತಿವೆ. ಅ. 17ರಂದು ಗುರುವಾರ ಬೆಳಿಗ್ಗೆ 7.40ಕ್ಕೆ ತೀರ್ಥೋದ್ಭವ ಆಗಲಿದ್ದು, ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ ಎಂದು ಈಗಾಗಲೇ ಅರ್ಚಕರು ಘೋಷಿಸಿದ್ದಾರೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಭಕ್ತರಿಂದ ಜಾತ್ರೆಗೆ ಮೆರುಗು ಹೆಚ್ಚಲಿದೆ.

ಈ ಬಾರಿ ಬೆಳಿಗ್ಗೆ ತೀರ್ಥೋದ್ಭವ ನಡೆಯುತ್ತಿದೆ. ಜಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ, ಗ್ರಾಮ ಪಂಚಾಯಿತಿಯಿಂದ ಸಿದ್ದತೆಗಳು ನಡೆಯುತ್ತಿವೆ. ತೀರ್ಥೋದ್ಭವ ಬೆಳಿಗ್ಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದೆ.

ADVERTISEMENT

ಜಾತ್ರೆಯ ಹಿನ್ನೆಲೆಯಲ್ಲಿ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯಗಳು ನಡೆದಿವೆ. ದೇವಾಲಯದ ಗುಡಿಗೋಪುರಗಳನ್ನು ಸ್ವಚ್ಛಗೊಳಿಸಿದ್ದು ತಲಕಾವೇರಿ ದೇವಾಲಯದ ಪರಿಸರದ ಸ್ವಚ್ಚತಾ ಕಾರ್ಯ ನಡೆದಿದೆ. ರಸ್ತೆಯ ಎರಡೂ ಬದಿಯ ಗಿಡಗಂಟಿಗಳನ್ನು ಜಿಸಿಬಿ ಮೂಲಕ ತೆಗೆಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಆಟೊ ಚಾಲಕರ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಸ್ಥಳೀಯರು, ಸ್ವಯಂ ಸೇವಕರು ಜತೆಗೂಡಿ ತಲಕಾವೇರಿ ದೇವಸ್ಥಾನಕ್ಕೆ ತೆರಳುವ ಪ್ರವೇಶ ದ್ವಾರದ ಕೆಳಗಿನ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತಿತರ ಕಸ ಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಪವಿತ್ರ ಸ್ಥಳವಾದ ತಲಕಾವೇರಿ ಕ್ಷೇತ್ರವನ್ನು ಸ್ವಚ್ಛಗೊಳಿಸಿದರು.

ಕಾವೇರಿ ಜಾತ್ರೆಯ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳು ಸ್ವಚ್ಛತಾ ಕಾರ್ಯವನ್ನು ನಡೆಸುತ್ತವೆ. ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು, ಬಾಟಲಿಗಳನ್ನು ವರ್ಷದ ಎಲ್ಲಾ ಅವಧಿಯಲ್ಲೂ ಎಸೆಯದಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ. ಭಕ್ತರೊಂದಿಗೆ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಪರಿಸರ ಸ್ವಚ್ಛತೆಯತ್ತ ಗಮನಹರಿಸಬೇಕಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ತಿಳಿಸಿದರು.

ಬಿರುಸಿನ ಸಿದ್ಧತೆ:

ಜಾತ್ರೆಯ ಅಂಗವಾಗಿ ಬಿಗಿಭದ್ರತೆಗಾಗಿ ಪೋಲಿಸ್ ಇಲಾಖೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪೊಲೀಸರು ವಾಹನ ನಿಲುಗಡೆ ವ್ಯವಸ್ಥೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮಂಗಳವಾರ ಕಂಡು ಬಂತು. ಭಾಗಮಂಡಲದಿಂದ ತಲಕಾವೇರಿಯರೆಗೆ ರಸ್ತೆಯ ಎರಡೂ ಬದಿ ಟ್ಯೂಬ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಅ. 16ರಂದು ರಾತ್ರಿ ಸಹ ತಲಕಾವೇರಿಯಲ್ಲಿ ಭಕ್ತರು ಕಾರ್ಯಕ್ರಮಗಳನ್ನು ವೀಕ್ಷಿಸುವುದರಿಂದ ನಾಲ್ಕು ಎಲ್ಇಡಿ ವಾಲ್‌ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎರಡು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಭಾಗಮಂಡಲದಿಂದ ತಲಕಾವೇರಿವರೆಗೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಜಲ ನಿರೋಧಕ ಶಾಮಿಯಾನ ಹಾಕಲಾಗುತ್ತಿದೆ. ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಕಾವೇರಿ ಕುಂಡಿಕೆಯ ಸುತ್ತಲೂ ಹೈ ಮಾಸ್ಕ್ ದೀಪ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ‘ವಿಐಪಿ’ಗಳಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕುಂಡಿಕೆ ಸುತ್ತಲೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಭಕ್ತರು ತೀರ್ಥ ಕುಂಡಿಕೆಯಿಂದ ಪ್ಲಾಸ್ಟಿಕ್ ಬಳಸಿ ತೀರ್ಥ ಪಡೆಯುವಂತಿಲ್ಲ. 50ಕ್ಕೂ ಅಧಿಕ ಸ್ವಯಂಸೇವಕರನ್ನು ಸುಗಮ ಜಾತ್ರಾ ವ್ಯವಸ್ಥೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

16ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಲಕಾವೇರಿಯಲ್ಲಿ ಈ ಬಾರಿ ಅರ್ಚಕರಾದ ಗುರುರಾಜ್ ಮತ್ತು ರವಿರಾಜ್ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಭಾಗಮಂಡಲದಲ್ಲಿ ಹರೀಶ್ ಭಟ್ ಮತ್ತು ರವಿ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅ.16ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 5 ವರೆಗೆ ಪಿಂಡಪ್ರದಾನಕ್ಕೆ ಅವಕಾಶ ನೀಡಲಾಗುವುದು. ಬೆಳಿಗ್ಗೆ 4 ಗಂಟೆಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಗಳು ಆರಂಭಗೊಳ್ಳಲಿವೆ. ತಲಕಾವೇರಿಯಲ್ಲಿಯೂ ಬೆಳಗಿನ 4 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಮರುದಿನ ಸಂಜೆ 6 ವರೆಗೆ ನಿರಂತರವಾದ ಪೂಜೆ, ತೀರ್ಥ ವಿತರಣೆ ನಡೆಯಲಿವೆ.

ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಅನ್ನದಾನ ನಡೆಯಲಿದೆ ಈ ಬಾರಿ ವಿದ್ಯುತ್ ಅಲಂಕಾರ ಮತ್ತು ಹೂವಿನ ಅಲಂಕಾರವನ್ನು ಮೈಸೂರಿನ ಎಸ್ ಆರ್ ಎಲೆಕ್ಟ್ರಿಕಲ್ಸ್ ವತಿಯಿಂದ ಕೈಗೊಳ್ಳಲಾಗುತ್ತಿದೆ.

ಭಾಗಮಂಡಲದಿಂದ ತಲಕಾವೇರಿಗೆ ಉಚಿತ ಪ್ರಯಾಣ

ಮಡಿಕೇರಿ: ತಲಕಾವೇರಿ ಜಾತ್ರೆ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಹಾಗೂ ತಲಕಾವೇರಿಯಿಂದ-ಭಾಗಮಂಡಲಕ್ಕೆ 15 ಬಸ್‍ಗಳು ಸಂಚಿಸಲಿವೆ. ಭಕ್ತಾದಿಗಳು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ಮೆಹಬೂಬ್ ಅಲಿ ತಿಳಿಸಿದ್ದಾರೆ.

ಇಂದಿನಿಂದ ಮದ್ಯ ಮಾರಾಟ ನಿಷೇಧ

ಮಡಿಕೇರಿ: ತಲಕಾವೇರಿ ತೀರ್ಥೋಧ್ಬವ ಹಿನ್ನಲೆಯಲ್ಲಿ ಅ.16ರ ಬೆಳಿಗ್ಗೆ 6 ಗಂಟೆಯಿಂದ 17ರ ಮಧ್ಯರಾತ್ರಿ 12 ಗಂಟೆಯವರೆಗೆ ತಲಕಾವೇರಿ ಭಾಗಮಂಡಲ ಮತ್ತು ಚೇರಂಬಾಣೆ ಗ್ರಾಮದ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ ಬಾರ್ ಹೋಟೆಲ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.

ಭಾಗಮಂಡಲದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಭಾಗಮಂಡಲದಲ್ಲಿ ಮಹಿಳೆಯರು ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ತ್ಯಾಜ್ಯ ಮತ್ತಿತರ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ತಲಕಾವೇರಿಯಲ್ಲಿ ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿರುವ ದೃಶ್ಯ ಮಂಗಳವಾರ ಕಂಡು ಬಂತು
ತಲಕಾವೇರಿಯಲ್ಲಿ ಭರದ ಸಿದ್ಧತೆಗಳು ಮಂಗಳವಾರ ನಡೆದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.