ADVERTISEMENT

ಗಣಪತಿ ಆತ್ಮಹತ್ಯೆ ಪ್ರಕರಣ: ವರದಿ ನಂತರ ಕಾನೂನು ಹೋರಾಟ ನಡೆಸಲು ಕುಟುಂಬದ ತೀರ್ಮಾನ

ಡಿವೈಎಸ್‌ಪಿ ಎಂ.ಕೆ.ಗಣಪತಿ ಸಹೋದರ ಮಾಚಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 12:21 IST
Last Updated 21 ನವೆಂಬರ್ 2019, 12:21 IST
ಮೃತ ಎಂ.ಕೆ.ಗಣಪತಿ
ಮೃತ ಎಂ.ಕೆ.ಗಣಪತಿ   

ಮಡಿಕೇರಿ: ‘ಸಿಬಿಐ ತನಿಖಾ ವರದಿಯ ಪೂರ್ಣಪ್ರತಿ ಲಭಿಸಿದ ಮೇಲೆ ಮುಂದಿನ ಹೋರಾಟ ಕುರಿತು ಕುಟುಂಬಸ್ಥರು ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ಮೃತ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಸಹೋದರ ಎಂ.ಕೆ.ಮಾಚಯ್ಯ ತಿಳಿಸಿದರು.

‘ಡಿವೈಎಸ್‌ಪಿ ಆಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಶಾಸಕ ಕೆ.ಜೆ.ಜಾರ್ಜ್‌ (ಅಂದು ಗೃಹ ಸಚಿವರಾಗಿದ್ದರು) ಅವರ ಪ್ರಚೋದನೆ ಎಂಬುದಕ್ಕೆ ಯಾವುದೇ ಸಾಕ್ಯ್ಯಾಧಾರಗಳು ಇಲ್ಲ’ ಎಂದು ತನಿಖೆ ನಡೆಸಿದ್ದ ಚೆನ್ನೈ ಸಿಬಿಐ ತಂಡವು ನ್ಯಾಯಾಲಯಕ್ಕೆ ‘ಬಿ–ರಿಪೋರ್ಟ್‌’ ಸಲ್ಲಿಸಿದ್ದು ಆರೋಪಿ ಸ್ಥಾನದಲ್ಲಿದ್ದ ಮೂವರು ದೋಷಮುಕ್ತರಾಗಿದ್ದಾರೆ.

‘ನಾಲ್ಕು ದಿನದಲ್ಲಿ ನಮ್ಮ ವಕೀಲರಿಗೆ ಪ್ರತಿ ಲಭಿಸಲಿದೆ. ನ್ಯಾಯಕ್ಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು. ಕೋರ್ಟ್‌ ಸೂಚನೆಯಂತೆ ಚೆನ್ನೈ ಸಿಬಿಐ ತಂಡವು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಮಡಿಕೇರಿಯಲ್ಲಿ ಅಣ್ಣನ ಶವ ದೊರೆತ ಕೊಠಡಿಯನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಕುಟುಂಬಸ್ಥರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಅಣ್ಣನ ಪತ್ನಿ ಹಾಗೂ ಪುತ್ರ ಪ್ರಕರಣದಿಂದ ಹಿಂದೆ ಸರಿದ ಮೇಲೆ, ನಾನು ಹಾಗೂ ತಂದೆ ಕುಶಾಲಪ್ಪ ಹೋರಾಟ ಮುಂದುವರಿಸಿದ್ದೆವು’ ಎಂದು ಮಾಚಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು: ಈ ಆತ್ಮಹತ್ಯೆ ಪ್ರಕರಣವು ಕೊಡಗು ಮಾತ್ರವಲ್ಲದೆ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿತ್ತು. 2016ರ ಜುಲೈ 7ರಂದು ನಗರದ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಸ್ಥಳೀಯ ಖಾಸಗಿ ವಾಹಿನಿಗೆ ಸಂದರ್ಶನ ನೀಡಿ, ಕೆ.ಜೆ.ಜಾರ್ಜ್‌ ಹಾಗೂ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ, ಎ.ಎಂ.ಪ್ರಸಾದ್‌ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಅಂದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಮುಖಂಡರು ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಜಾರ್ಜ್‌ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೂ ವಹಿಸಿತ್ತು. ಸಿಐಡಿ ತಂಡವು ಜಾರ್ಜ್‌ ವಿರುದ್ಧದ ಆರೋಪಕ್ಕೆ ‘ಕ್ಲೀನ್‌ ಚಿಟ್‌’ ನೀಡಿ ಮಡಿಕೇರಿ ಕೋರ್ಟ್‌ಗೆ 800 ಪುಟಗಳ ವರದಿ ಸಲ್ಲಿಸಿತ್ತು. ಅದಾದ ಮೇಲೆ ಮಾಚಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2017ರ ಅಕ್ಟೋಬರ್‌ನಲ್ಲಿ ಕೋರ್ಟ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಕಳೆದ ಅಕ್ಟೋಬರ್‌ 29ರಂದು ಸಿಬಿಐ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.