ಕುಶಾಲನಗರ (ಕೊಡಗು ಜಿಲ್ಲೆ): ಇಲ್ಲಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಶತಾಯುಷಿ ಕಾಳಮ್ಮ (104) ಅವರು ಶಿಥಿಲಗೊಂಡು ಕುಸಿದುಬೀಳುವ ಸ್ಥಿತಿಯಲ್ಲೇ ದಿನದೂಡುತ್ತಿದ್ದಾರೆ.
ಮಂಗಳವಾರ ಇದೇ ಮನೆಯ ಹೊರಗೆ ಕಾಳಮ್ಮ ಮತದಾನ ಮಾಡಿದ್ದರು. ಮತದಾನ ಪ್ರಕ್ರಿಯೆಗೆ ಬಂದಿದ್ದ ಅಧಿಕಾರಿಗಳು ಇದೇ ಮನೆಯ ಮುಂದೆ ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೊ ಕೊಡಗು ಜಿಲ್ಲಾಧಿಕಾರಿ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆಯೇ ಅನೇಕರು ಕಾಳಮ್ಮ ಅವರ ಶಿಥಿಲಗೊಂಡ ಮನೆಯ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಈ ಕುರಿತು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಂಜನಾದೇವಿ ಅವರನ್ನು ಪ್ರಶ್ನಿಸಿದಾಗ, ‘ಕಾಳಮ್ಮ ಆಗಲೀ ಅವರ ಸಂಬಂಧಿಕರಾಗಲೀ ಯಾರೂ ಕಾಳಮ್ಮ ಅವರ ಹೆಸರಿನಲ್ಲಿ ಅರ್ಜಿ ಹಾಕಿಲ್ಲ. ಹಾಗಾಗಿ, ಅವರಿಗೆ ಮನೆ ನೀಡಿಲ್ಲ. ಆದರೆ, ಈ ಹಿಂದೆ ಅವರ ಮಗನಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ’ ಎಂದು ತಿಳಿಸಿದರು.
ಮಕ್ಕಳ ಮನೆಗೆ ಹೋಗಲು ನಕಾರ: ಶಿಥಿಲಗೊಂಡ ತಮ್ಮ ಮನೆಯ ಪಕ್ಕವೇ ಇರುವ ಮಗ ಮತ್ತು ಮಗಳ ಮನೆಗೆ ಹೋಗಲು ಕಾಳಮ್ಮ ಒಪ್ಪುತ್ತಿಲ್ಲ. ಈ ಹಿಂದೆ ತಾವು ಬಾಳಿದ್ದ ಮನೆಯಲ್ಲೇ ಇರುವುದಾಗಿ ಹೇಳಿದ್ದಾರೆ. ಅವರ ಮನವೊಲಿಸಲು ಹಾಗೂ ಅವರಿರುವ ಜಾಗದಲ್ಲೇ ಸುಸಜ್ಜಿತ ಮನೆ ಕಟ್ಟಿಕೊಡಲು ಯಾರೂ ಆಸಕ್ತಿ ವಹಿಸಿಲ್ಲ.
ಕಾಳಮ್ಮ ಅವರ ಪುತ್ರ ತಮ್ಮಯ್ಯ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಸೊಸೆ ಜಯಮ್ಮ ಕೂಲಿ ಕೆಲಸ ಮಾಡುತ್ತಿದ್ದಾರೆ. ಮೊಮ್ಮಗ ಲಿಂಗರಾಜು ನೀರಗಂಟಿಯಾಗಿದ್ದರೆ, ಇನ್ನಿಬ್ಬರು ಮೊಮ್ಮಕ್ಕಳಾದ ಮಹೇಶ ಮತ್ತು ಶಿವಕುಮಾರ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಪುತ್ರಿ ನಾಗಮ್ಮ ಗ್ರಾಮದಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದು, ತಾಯಿಗೆ ಊಟ– ತಿಂಡಿ ನೀಡುತ್ತಿದ್ದಾರೆ. ಸೊಸೆ ಜಯಮ್ಮ ಕೂಡ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಕಾಳಮ್ಮ ಅವರ ಉಳಿದ ಐವರು ಪುತ್ರಿಯರು ಬೇರೆ ಊರುಗಳಲ್ಲಿದ್ದಾರೆ.
‘ವಸತಿ ಯೋಜನೆಯಡಿ ಉಳಿದ ಜಾಗದಲ್ಲಿ ಕಾಳಮ್ಮನ ಮೊಮ್ಮಕ್ಕಳು ಗಾರೆ ಕೆಲಸ ಮಾಡಿ ಮನೆ ಕಟ್ಟುತ್ತಿದ್ದು, ಹಣದ ಕೊರತೆಯಿಂದ ಪೂರ್ಣಗೊಂಡಿಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆ ಯಶಸ್ವಿನಿ ಮಾಹಿತಿ ನೀಡಿದರು.
ಕಾಳಮ್ಮ ಅವರ ಮನೆಯ ದುಃಸ್ಥಿತಿ ಕುರಿತು ಮಂಗಳವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ‘ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಹಿಳೆಯ ಮನೆಗೆ ತೆರಳಿದ್ದ ಅಧಿಕಾರಿಗಳ ಹೇಳಿಕೆ ಪ್ರಕಾರ ಮನೆಯ ಹಿಂಭಾಗ ಹೊಸ ಮನೆಯನ್ನು ನಿರ್ಮಿಸಲಾಗುತ್ತಿದೆ. ತಾತ್ಕಾಲಿಕವಾಗಿ ಮಹಿಳೆ ಈ ಮನೆಯಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೆ ಮುಗಿದ ತಕ್ಷಣವೇ ಈ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗುವುದು’ ಎಂದು ಹೇಳಿದ್ದರು.
ಈ ಕುರಿತು ವರ್ಲ್ಡ್ ಹ್ಯೂಮನ್ ರೈಟ್ಸ್ ಸೇವಾ ಕೇಂದ್ರವು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ. ‘ಕಾಳಮ್ಮ ಅವರಿಗೆ ಮನೆ ನಿರ್ಮಿಸಿಕೊಡಬೇಕು. ಅವರ ಮನೆಗೆ ಮತ ಹಾಕಿಸಲು ಹೋದ ಅಧಿಕಾರಿಗಳೆಲ್ಲರೂ ತಮ್ಮ ಕುಟುಂಬ ಸಮೇತ ಅದೇ ಮನೆಯಲ್ಲಿ ವಾಸ ಮಾಡುವಂತೆ ಆದೇಶಿಸಬೇಕು’ ಎಂದೂ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.