ADVERTISEMENT

ಮಡಿಕೇರಿ: ರಂಗೇರುತ್ತಿದೆ ಚುನಾವಣಾ ಕಣ

ಪ್ರಚಾರ ಆರಂಭಿಸಿದ ಕೆ.ಜಿ.ಬೋಪಯ್ಯ; ಮಡಿಕೇರಿಗೆ ಬರಲಿದ್ದಾರೆ ಕಾಂಗ್ರೆಸ್‌ ನಾಯಕರು

ಕೆ.ಎಸ್.ಗಿರೀಶ್
Published 14 ಏಪ್ರಿಲ್ 2023, 10:09 IST
Last Updated 14 ಏಪ್ರಿಲ್ 2023, 10:09 IST
ಎಸ್‌ಡಿಪಿಐ ಮಡಿಕೇರಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಕ್ಷದ ಅಭ್ಯರ್ಥಿ ಅಮಿನ್ ಮೊಯಿಸಿನ್ ಕಾರ್ಯಕರ್ತರತ್ತ ಕೈಬೀಸಿದರು
ಎಸ್‌ಡಿಪಿಐ ಮಡಿಕೇರಿ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಕ್ಷದ ಅಭ್ಯರ್ಥಿ ಅಮಿನ್ ಮೊಯಿಸಿನ್ ಕಾರ್ಯಕರ್ತರತ್ತ ಕೈಬೀಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಣ ಗುರುವಾರ ದಿಂದ ರಂಗೇರಿದೆ. ಇದುವರೆಗೂ ಕಾಂಗ್ರೆಸ್ ಮಾತ್ರವೇ ಬಹಿರಂಗ ಪ್ರಚಾರದಲ್ಲಿ ತೊಡಗಿತ್ತು. ಈಗ ಬಿಜೆಪಿ ಹಾಗೂ ಎಸ್‌ಡಿಪಿಐಗಳೂ ಪ್ರಚಾರ ಆರಂಭಿಸಿರುವುದು ಚುನಾವಣಾ ಕಣ ರಂಗೇರಲು ಕಾರಣವಾಗಿದೆ.

ಸತತ ಮೂರು ಬಾರಿ ವಿರಾಜಪೇಟೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಕೆ.ಜಿ.ಬೋಪಯ್ಯ ಅವರು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಇನ್ನು ಮುಂದೆ ಅವರು ಹಾಗೂ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಲಿದ್ದಾರೆ.

ತಲಕಾವೇರಿಯಲ್ಲಿ ಪೂಜೆ ನಡೆದ ನಂತರ ಗೋಣಿಕೊಪ್ಪಲುವಿನಲ್ಲಿ ಸಭೆಯೊಂದು ನಡೆದು, ಪ್ರಚಾರದ ಕಾರ್ಯತಂತ್ರ ಕುರಿತು ಚರ್ಚಿಸಲಾ ಯಿತು. ವಿರಾಜಪೇಟೆಯ ಕಚೇರಿಯಲ್ಲಿ ಹೋಮ ವೊಂದನ್ನು ನಡೆಸಲಾಯಿತು. ಏ. 14ರಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲು ಬಿಜೆಪಿಯಲ್ಲಿ ಸಿದ್ಧತೆಗಳು ನಡೆದಿವೆ.

ADVERTISEMENT

ಎಸ್‌ಡಿಪಿಐ ಸಹ ಪ್ರಚಾರ ಕಾರ್ಯಕ್ಕೆ ಧುಮುಕಿದ್ದು, ಮಡಿಕೇರಿಯಲ್ಲಿ ಗುರುವಾರ ಬಿರುಸಿನ ಪ್ರಚಾರ ನಡೆಸಿತು. ಬೂತ್ ಮಟ್ಟದಲ್ಲಿ 8 ಮಂದಿಯ ಸಮಿತಿ ನೇಮಿಸಿರುವ ಪಕ್ಷವು ಬೂತ್‌ಮಟ್ಟದಲ್ಲಿ ಹೆಚ್ಚಿನ ಪ್ರಚಾರಕ್ಕೆ ಚಿಂತನೆ ನಡೆಸಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐನ ಅಭ್ಯರ್ಥಿ ಅಮಿನ್ ಮೊಹಿಸಿನ್ ಪ್ರಸಕ್ತ ವಿಧಾನಸಭಾ ಚುನಾ ವಣೆಯಲ್ಲಿ ಮೊದಲ ದಿನವೇ ಮೊದಲ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ನಗರದಲ್ಲಿ ಅವರು ನಡೆಸಿದ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಸಹ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಎರಡೂ ಕ್ಷೇತ್ರದ ಅಭ್ಯರ್ಥಿಗಳು ಏ. 17 ಮತ್ತು 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೂತ್ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಪ್ರಚಾರ ಕಾರ್ಯಗಳು ನಡೆದಿವೆ.

ಜೆಡಿಎಸ್‌ನಲ್ಲಿ ಚುರುಕಾಗದ ಪ್ರಚಾರ ಕಾರ್ಯ: ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದರೂ ಜೆಡಿಎಸ್‌ನಲ್ಲಿ ಪ್ರಚಾರ ಚಟುವಟಿಕೆಗಳು ಗರಿಗೆದರಿಲ್ಲ. ಕಳೆದೆರಡು ವಿಧಾನಸಭಾ ಅವಧಿಯಲ್ಲಿ ಸತತ 2ನೇ ಬಾರಿ 2ನೇ ಸ್ಥಾನ ಪಡೆದಿದ್ದ ಪಕ್ಷದಲ್ಲಿ ಈಗ ಅಭ್ಯರ್ಥಿಯ ಅಂತಿಮ ಆಯ್ಕೆಯೇ ನಡೆದಿಲ್ಲ. ಕಳೆದರಡು ಬಾರಿ ಅಭ್ಯರ್ಥಿಯಾಗಿದ್ದ ಜೀವಿಜಯ ಸದ್ಯ ಕಾಂಗ್ರೆಸ್‌ ಸೇರಿದ್ದಾರೆ. ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸಂಕೇತ್ ಪೂವಯ್ಯ ಸಹ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ಪಕ್ಷದಲ್ಲಿ ಎಲ್ಲವೂ ಗೊಂದಲಮಯವಾಗಿದೆ.

ಜೆಡಿಎಸ್‌ನ ಅಂತಿಮ ಪಟ್ಟಿ ಏ. 14ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಮಡಿಕೇರಿ ಕ್ಷೇತ್ರದಲ್ಲಿ ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಪಕ್ಷದ ಕಚೇರಿಯಲ್ಲಿ 14ರಂದು ಸಭೆ ಕರೆಯಲಾಗಿದೆ. ಆನಂತರವಷ್ಟೇ ಪಕ್ಷದ ವತಿಯಿಂದ ಪ್ರಚಾರ ಕಾರ್ಯ ಬಿರುಸುಗೊಳ್ಳುವ ನಿರೀಕ್ಷೆ ಇದೆ.

17ರಂದು ಡಿ.ಕೆ.ಶಿವಕುಮಾರ್ ಮಡಿಕೇರಿಗೆ

ಏ. 17ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಡಿಕೇರಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ತುಂಬಲಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಮಂತರ್‌ಗೌಡ ಅವರು ನಾಮಪತ್ರ ಸಲ್ಲಿಸಲಿದ್ದು, ಇದಕ್ಕೂ ಮುನ್ನ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶವೊಂದರಲ್ಲಿ ಮಾತನಾಡಲಿದ್ದಾರೆ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.