ಕುಶಾಲನಗರ (ಕೊಡಗು): ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಕುಶನಿಗೆ ಸಂಗಾತಿ ಸೇರಲು ಕಾಲ ಇನ್ನೂ ಕೂಡಿ ಬಂದಿಲ್ಲ.
ಕುಶ ಆನೆಯನ್ನು ಬಂಧಮುಕ್ತಗೊಳಿಸುವಂತೆ ಸರ್ಕಾರ ಆದೇಶಿಸಿ, ತಿಂಗಳು ಕಳೆದರೂ ಕಾಡಿಗೆ ಬಿಡಲು ಕೊರೊನಾ ಅಡ್ಡಿಯಾಗಿದೆ.
ಸಾಕಾನೆ ಶಿಬಿರದಿಂದ ಕಾಡಿಗೆ ಓಡಿ ಹೋಗಿದ್ದ ಕುಶ ಆನೆ ಶಿಬಿರಕ್ಕೆ ಮರಳಿರಲಿಲ್ಲ. ಕಾಡಿನಲ್ಲಿ ಸಿಕ್ಕಿದ ಸಂಗಾತಿಯೊಂದಿಗೆ ಸಂತೋಷವಾಗಿ ಇತ್ತು. ವರ್ಷದ ಬಳಿಕ ಕುಶ ಆನೆಯನ್ನು ಸಂಗಾತಿಯಿಂದ ಬೇರ್ಪಡಿಸಿ ಬಂಧಿಸಲಾಗಿತ್ತು. ವರ್ಷದಿಂದ ಕಾಡಾನೆಗಳ ಸಹವಾಸ ಮಾಡಿದ ಕುಶ ಸ್ವಾಭಾವಿಕವಾಗಿ ಕಾಡಾನೆಯಾಗಿ ಪರಿವರ್ತನೆ ಹೊಂದಿತ್ತು. ಮೃದು ಸ್ವಭಾವ ಹೋಗಿ ಪುಂಡಾಟಿಕೆ ಸ್ವಾಭಾವ ಬೆಳೆಸಿಕೊಂಡಿತ್ತು. ಬಂಧನವಾದ ಮೇಲೆ ಸಂಗಾತಿಯಿಂದ ದೂರವಾದ ವೇದನೆ ಅನುಭವಿಸುತ್ತಿತ್ತು.
ಕ್ರಾಲ್ (ದೌಡ್ಡಿ)ಗೆ ಹಾಕಿ ಮತ್ತೆ ಪಳಗಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿತ್ತು. ಆನೆಯನ್ನು ಬಲವಂತವಾಗಿ ಸೆರೆಹಿಡಿದು, ಕಾಲಿಗೆ ಸರಪಳಿ ಹಾಕಿ ಕ್ರಾಲ್‌ನಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸದೆ ಹಾಗೂ ಪರಿಸರವಾದಿ ಮನೇಕಾ ಗಾಂಧಿ ಅವರೂ ಆನೆ ಬಂಧಮುಕ್ತಗೊಳಿಸುವಂತೆ ಆಗ್ರಹಿಸಿದ್ದರು. ಪೀಪಲ್ಸ್ ಫಾರ್ ಅನಿಮಲ್ ಸಂಸ್ಥೆ ಮುಖಸ್ಥರಾದ ಸವಿತಾ ನಾಗಭೂಷಣ್ ಹಾಗೂ ಹಿರಿಯ ಪಶು ವೈದ್ಯಾಧಿಕಾರಿ ಡಾ.ಅಮರ್ ದೀಪ್ ಸಿಂಗ್ ನೇತೃತ್ವದ ತಂಡ ದುಬಾರೆಗೆ ಭೇಟಿ ನೀಡಿ ಕುಶ ಆನೆ ಯೋಗಕ್ಷೇಮ ಹಾಗೂ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಅದಾದ ಮೇಲೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದರು.
ದುಬಾರೆ ಶಿಬಿರದಲ್ಲಿ ಮಾವುತರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಜೊತೆಗೆ, ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗೆ ಬಿಡುವ ಪ್ರಕ್ರಿಯೆಗೆ ಕಾಲಾವಕಾಶ ಬೇಕು. ಆದ್ದರಿಂದ ವಿಳಂಬವಾಗಿದೆ. ಕೊರೊನಾ ಪ್ರಕರಣಗಳು ಕಡಿಮೆಯಾದ ಮೇಲೆ, ಸರ್ಕಾರದ ಆದೇಶದಂತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.