ADVERTISEMENT

ಪ‍್ರವಾಸಿಗರಿಂದ ಚಿನ್ನದ ಸರ ಕಸಿದಿಲ್ಲ | ಸುಳ್ಳು ಸುದ್ದಿ: ಪೊಲೀಸರಿಂದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:54 IST
Last Updated 24 ಜೂನ್ 2024, 4:54 IST

ಮಡಿಕೇರಿ: ಪಿರಿಯಾಪಟ್ಟಣ, ಮಾಲ್ದಾರೆ, ಸಿದ್ದಾಪುರ ಮಾರ್ಗದಲ್ಲಿ ಡಕಾಯಿತರು ಇದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಸುಳ್ಳು ಸುದ್ದಿ ಹರಿದಾಡಿದೆ. ಪೊಲೀಸ್ ಇಲಾಖೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

ಪುತ್ತೂರಿನಿಂದ ಪ್ರವಾಸಿಗರು ಕಾರಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕೋಟೆಬೆಟ್ಟಕ್ಕೆ ಬರುತ್ತಿರುವಾಗ ಅದೇ ದಾರಿಯಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿ ಭಾನುವಾರ ದಿನವಿಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು.

ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಚಿನ್ನದ ಸರ ಕಸಿಯುವ ದೃಷ್ಟಿಯಿಂದ ಅಥವಾ ಪ್ರವಾಸಿಗರು ಎಂಬ ದೃಷ್ಟಿಯಿಂದ ಬೈಕ್‌ನಲ್ಲಿ ಬಂದವರು ಹಲ್ಲೆ ನಡೆಸಿಲ್ಲ. ಬದಲಿಗೆ, ಕಾರಿನವರು ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಉಂಟಾಗಿದೆ. ಬೈಕ್‌ನಲ್ಲಿ ಬಂದವರು ಕಾರಿನಲ್ಲಿದ್ದವರ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಹಲ್ಲೆ ನಡೆಸಿದವರಿಗಾಗಿ ಹುಡುಕಾಟ ನಡೆದಿದೆ. ಈ ಜಗಳದ ವೇಳೆ ಪ್ರವಾಸಿಗ ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದಸರವನ್ನು ಬಿದ್ದು ಹೋಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.