ಮಡಿಕೇರಿ: 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಒಟ್ಟು ಆದಾಯ ₹ 104.62 ಕೋಟಿ, ವೆಚ್ಚ ₹ 87.42 ಕೋಟಿಗಳಾಗಿದ್ದು, ಒಟ್ಟು ₹ 17.20 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕೋಡಂದೆರ ಪಿ. ಗಣಪತಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ವಾರ್ಷಿಕ ಲೆಕ್ಕಪತ್ರಗಳ ಪರಿಶೋಧನೆ ನಡೆದಿದೆ. ಬ್ಯಾಂಕು ವರದಿ ಸಾಲಿನಲ್ಲಿ ನಿವ್ವಳ ₹ 8.26 ಕೋಟಿ ಲಾಭ ಗಳಿಸಿದೆ ಎಂದರು.
ಬ್ಯಾಂಕು ಗಳಿಸಿದ ಲಾಭಾಂಶದಲ್ಲಿ ಸದಸ್ಯರ ಸಹಕಾರ ಸಂಘಗಳಿಗೆ ಶೇ 11ರಂತೆ ಡಿವಿಡೆಂಟ್ ನೀಡಲು ಬ್ಯಾಂಕಿನ ಮಹಾಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.
ಕೃಷಿ ಆದ್ಯತಾ ಸಾಲಗಳು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ
₹ 3 ಲಕ್ಷ ತನಕ ಅಲ್ಪಾವಧಿ ಬೆಳೆ ಸಾಲ ವಿತರಣೆ, ಪಶುಸಂಗೋಪನಗೆ ಮತ್ತು ಮೀನುಗಾರಿಕೆ ಉದ್ದೇಶಗಳಿಗಾಗಿ ನಬಾರ್ಡ್ ಪ್ರಾಯೋಜಿತ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲದ ಮಿತಿಗೊಳಪಟ್ಟು ಅಲ್ಪಾವಧಿ ಸಾಲ ಯೋಜನೆ, ಶೇ 3ರ ಬಡ್ಡಿ ದರದಲ್ಲಿ ರೈತರಿಗೆ ನೇರವಾಗಿ ₹10 ಲಕ್ಷಗಳವರೆಗೆ ಗೋದಾಮು ನಿರ್ಮಾಣ, ಕಾಫಿ ಕಣ ನಿರ್ಮಾಣ, ಕೆರೆ ನಿರ್ಮಾಣ, ಹಸು, ಕೋಳಿ, ಹಂದಿ ಮತ್ತು ಮೇಕೆಗಳ ಸಾಕಾಣಿಕೆಗೆ ಹಾಗೂ ಹಸಿರು ಮನೆ ನಿರ್ಮಾಣಕ್ಕಾಗಿ ಸಾಲ ಸೌಲಭ್ಯ, ಶೂನ್ಯ ಬಡ್ಡಿ ದರದಲ್ಲಿ
₹ 5 ಲಕ್ಷಗಳವರೆಗೆ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಸದಸ್ಯರುಗಳ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯಗಳು ದೊರೆಯಲಿದೆ. ‘ಕಾಯಕಯೋಜನೆ’, ‘ಬಡವರ ಬಂಧು’ ಕಡಿಮೆ ಬಡ್ಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ: 2018ರ ಸಾಲ ಮನ್ನಾ ಯೋಜನೆ ಅಡಿ 2018ರ ಜುಲೈ 10ಕ್ಕೆ ಅಲ್ಪಾವಧಿ ಬೆಳೆ ಸಾಲ ಪಡೆದು ಹೊರಬಾಕಿ ಉಳಿಸಿಕೊಂಡಿದ್ದ 32,903 ರೈತ ಫಲಾನುಭವಿಗಳ ₹ 254.81 ಕೋಟಿ ಅರ್ಹ ಮೊತ್ತದ ಮಾಹಿತಿಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು. ಈ ಪೈಕಿ 26,342 ರೈತರ ಮನ್ನಾ ಮೊತ್ತ ₹ 204.16 ಕೋಟಿಗೆ ಸಂಬಂಧಿಸಿದ ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ. ಉಳಿದ 6,561 ರೈತರ ₹ 50.65 ಕೋಟಿ ಮನ್ನಾ ಅರ್ಹತೆ ವಿವಿಧ ಕಾರಣಗಳಿಂದ ಸರ್ಕಾರದ ಪರಿಶೀಲನೆಯ ಹಂತದಲ್ಲಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
6,561 ರೈತರ ಪೈಕಿ 3,157 ರೈತರು ಒಂದೇ ಕುಟುಂಬದ ಸದಸ್ಯರು, ವೇತನದಾರರು, ಪಿಂಚಣಿದಾರರು, ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದ ಸದಸ್ಯರುಗಳಾಗಿದ್ದು, ಯೋಜನೆಯಂತೆ ಅನರ್ಹತೆಯನ್ನು ಹೊಂದಿದ್ದಾರೆ. ಉಳಿದ 3,404 ರೈತರಿಗೆ ಸಾಲ ಮನ್ನಾ ಸೌಲಭ್ಯವನ್ನು ದೊರಕಿಸಿಕೊಡುವಂತೆ ಬ್ಯಾಂಕ್‌ನಿಂದ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 2017ರ ಸಾಲ ಮನ್ನಾ ಯೋಜನೆ ಅಡಿ ಸರ್ಕಾರದಿಂದ ಮನ್ನಾ ಮೊತ್ತ ಬಿಡುಗಡೆಗೊಳ್ಳುವುದು ತಡವಾಗುವುದನ್ನು ಮನಗಂಡು, ಬ್ಯಾಂಕು ತನ್ನ ಸ್ವಂತ ಬಂಡವಾಳದಿಂದ ₹ 150 ಕೋಟಿಗಳಷ್ಟು ಮೊತ್ತವನ್ನು ಸಹಕಾರ ಸಂಘಗಳ ಪರವಾಗಿ ಭರಿಸಲಾಗಿದೆ. ಅದರಲ್ಲಿ ₹ 9.91 ಕೋಟಿ ಸರ್ಕಾರದಿಂದ ಬಿಡುಗಡೆಗೆ ಬಾಕಿ ಇದೆ ಎಂದು ವಿವರಿಸಿದರು.
ಬ್ಯಾಂಕ್ 1921ರಲ್ಲಿ ಸ್ಥಾಪನೆಯಾಗಿದ್ದು, 2021ರಲ್ಲಿ ಶತಮಾನೋತ್ಸವ ವರ್ಷ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಜಿಲ್ಲೆಯ ಶೇ 70ರಷ್ಟು ರೈತರಿಗೆ ಕೃಷಿ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಜಿಲ್ಲೆಯ ರೈತರ ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ರೈತರ ದಾಖಲಾತಿಗಳು ಸಮರ್ಪಕವಾಗಿದ್ದಲ್ಲಿ, ಬ್ಯಾಂಕು ಯಾವುದೇ ಸಂದರ್ಭದಲ್ಲಿಯೂ ಬ್ಯಾಂಕ್‌ನ ಬಂಡವಾಳ ಕೊರತೆ ಅಥವಾ ಇನ್ಯಾವುದೇ ಕಾರಣಗಳಿಗಾಗಿ ರೈತರ ಅರ್ಜಿಗಳನ್ನು ತಿರಸ್ಕರಿಸಿರುವ ಪ್ರಕರಣಗಳು ಇಲ್ಲ ಎಂದು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರ್ಕಾರದ ಯೋಜನೆಗಳಿಗೆ ಬ್ಯಾಂಕಿನಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19 ಖಾತೆಗೆ ₹ 10 ಲಕ್ಷ ಚೆಕ್ ಅನ್ನು ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಮೂಲಕ ಹಸ್ತಾಂತರ ಮಾಡಲಾಗಿದೆ. ಕೋವಿಡ್-19ಕ್ಕೆ ಸಂಬಂಧಿಸಿದಂತೆ ₹ 19.65 ಲಕ್ಷವನ್ನು ಬ್ಯಾಂಕಿನಿಂದ ದೇಣಿಗೆಯಾಗಿ ನೀಡಲಾಗಿದೆ ಎಂದು ವಿವರಿಸಿದರು.
ಬ್ಯಾಂಕ್‌ನ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಮಂಗಳವಾರ ಮಧ್ಯಾಹ್ನ 10.30ಕ್ಕೆ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆ ಗಣಪತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್. ಹರೀಶ್ ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ಕೋಡಿ ಪೂವಯ್ಯ, ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.