ADVERTISEMENT

ಮಡಿಕೇರಿ | ರೈತರನ್ನು ಗ್ರಾಹಕರೊಂದಿಗೆ ಬೆಸೆದ ವೈನ್‌ಮೇಳ

ಗಾಂಧಿ ಮೈದಾನದಲ್ಲಿವೆ ತರಹೇವಾರಿ ವೈನ್‌ಗಳು

ಕೆ.ಎಸ್.ಗಿರೀಶ್
Published 5 ಫೆಬ್ರುವರಿ 2023, 19:30 IST
Last Updated 5 ಫೆಬ್ರುವರಿ 2023, 19:30 IST
ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ವೈನ್ ಮೇಳದಲ್ಲಿ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯು ರೈತರ ಉತ್ಪನ್ನಗಳನ್ನು ಮಾರಟಕ್ಕಿರಿಸಿದೆ
ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ವೈನ್ ಮೇಳದಲ್ಲಿ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯು ರೈತರ ಉತ್ಪನ್ನಗಳನ್ನು ಮಾರಟಕ್ಕಿರಿಸಿದೆ   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ವೈನ್‌ಮೇಳವು ರೈತರ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಇಲ್ಲಿ ಒಟ್ಟು 20 ಮಳಿಗೆಗಳಲ್ಲಿ ವಿವಿಧ ಬಗೆಯ ವೈನ್‌ಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಒಟ್ಟು 3 ಮಳಿಗೆಗಳಲ್ಲಿ ರೈತರಿಂದ ಖರೀದಿಸಿದ ವೈನ್‌ ಹಾಗೂ ಇತರ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಂತಹ ಮಳಿಗೆಗಳೂ ಇರುವುದು ವಿಶೇಷ.

ಇಲ್ಲಿ ಮಳಿಗೆ ತೆರೆದಿರುವ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದನಾ ಸಂಸ್ಥೆಯು ಸಾವಿರಕ್ಕೂ ಅಧಿಕ ರೈತರನ್ನು ಸದಸ್ಯರಾಗಿ ಹೊಂದಿದೆ. ಇಲ್ಲಿ ಕೇವಲ ವೈನ್ ಮಾತ್ರವಲ್ಲ ರೈತರು ಬೆಳೆದ ಗಾಂಧಾರಿ ಮೆಣಸು, ಜೇನು, ಕಾಫಿ ಹೀಗೆ ಮೊದಲಾದ ಉತ್ಪನ್ನಗಳ ಮಾರಾಟದ ವ್ಯವಸ್ಥೆ ಇದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್, ‘ನಾವು ನೇರವಾಗಿ ರೈತರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಮಧ್ಯವರ್ತಿಗಳ ಉಪಟಳ ಇಲ್ಲಿಲ್ಲ. ಪುಷ್ಪಗಿರಿಯಲ್ಲಿ ಸಿಗುವಂತಹ ಅಸಲಿ ಜೇನಿನ ಮಾರಾಟವೂ ಇದೆ’ ಎಂದರು.

ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕ ಕಂಪೆನಿಯೂ ಇಲ್ಲಿದ್ದು, ರೈತರ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕಿರಿಸಿದೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಕಂಪನಿಯ ಬಿನ್ನಿ ಡಿಯಾಸ್, ‘ನಮ್ಮಲ್ಲಿ ಸಾವಯವ ಮಾದರಿಯಲ್ಲೇ ಬೆಳೆದ ಉತ್ಪನ್ನಗಳನ್ನು ಮಾರಾಟಕ್ಕಿರಿಸಿದ್ದೇವೆ. ನಾವೇ ಸ್ವತಃ ರೈತರ ಜಮೀನಿಗೆ ಹೋಗಿ, ಪರೀಕ್ಷಿಸಿ, ಖರೀದಿಸುತ್ತೇವೆ. ಇದು ಹಣ ಮಾಡುವ ಉದ್ದೇಶದಿಂದ ಸ್ಥಾಪಿಸಿರುವ ಕಂಪನಿಯಲ್ಲ’ ಎಂದರು.

ಇವರ ಮಳಿಗೆಯಲ್ಲಿ ಗಾಂಧಾರಿ ಮೆಣಸು, ವೀಳ್ಯದೆಲೆ, ದಾಳಿಂಬೆ, ಸೇಬು, ಫ್ಯಾಷನ್‌ ಫ್ರೂಟ್‌ಗಳಿಂದ ಮಾಡಿರುವ ವೈನ್‌ಗಳಿವೆ. ಜೇನುತುಪ್ಪ, ಕೊಬ್ಬರಿಎಣ್ಣೆ, ಲವಂಗ, ಗೋಡಂಬಿಗಳು ಸೇರಿದಂತೆ ರೈತರು ಬೆಳೆದ ಉತ್ಪನ್ನಗಳಿವೆ.

ಇನ್ನುಳಿದಂತೆ, ಜಿಲ್ಲಾ ಹಾಪ್‌ಕಾಮ್ಸ್‌ ಸಹ ಇಲ್ಲಿ ಮಳಿಗೆ ತೆರೆದಿದೆ. 1,500 ರೈತರನ್ನು ಸದಸ್ಯರಾಗಿ ಹೊಂದಿರುವ ಹಾಪ್‌ಕಾಮ್ಸ್‌ ರೈತರೇ ತಯಾರಿಸಿರುವ ವೈನ್‌ಗಳು, ಅವರ ವಿವಿಧ ಬಗೆಯ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟಕ್ಕಿರಿಸಿದೆ. ಈ ಮೂರೂ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದ ಸಾವಿರಾರು ರೈತರ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವುದು ವೈನ್‌ ಮೇಳದ ವಿಶೇಷಗಳಲ್ಲಿ ಒಂದಾಗಿದೆ.

ಒಂದೇ ದಿನ 15 ಸಾವಿರ ಮಂದಿ ಭೇಟಿ
ಇಲ್ಲಿನ ರಾಜಾಸೀಟ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ಒಂದೇ ದಿನ 15 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಈ ಮೂಲಕ ಸಾವಿರಾರು ಮಂದಿ ಪ್ರವಾಸಿಗರು ಪುಷ್ಪಗಳ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಮೋದ್, ‘ಶನಿವಾರ ಒಂದೇ ದಿನ 15 ಸಾವಿರ ಮಂದಿ ರಾಜಾಸೀಟ್‌ಗೆ ಭೇಟಿ ನೀಡಿದ್ದಾರೆ. ಫಲಪುಷ್ಪ ಪ್ರದರ್ಶನ ನಿಜಕ್ಕೂ ಯಶಸ್ವಿಯಾಗಿದೆ’ ಎಂದರು.

ಜನರ ಪ್ರತಿಕ್ರಿಯೆ ಕಡಿಮೆ; ವರ್ತಕರ ಅಳಲು
ಒಂದೆಡೆ ರಾಜಾಸೀಟ್‌ಗೆ ಸಾವಿರಾರು ಮಂದಿ ಭೇಟಿ ನೀಡಿದ್ದರೆ ಸಮೀಪದಲ್ಲೇ ಇರುವ ಗಾಂಧಿ ಮೈದಾನಕ್ಕೆ ಹೆಚ್ಚಿನ ಜನರು ಭೇಟಿ ನೀಡಿಲ್ಲ ಎಂದು ಬಹುತೇಕ ವರ್ತಕರು ಅಸಮಾಧನ ವ್ಯಕ್ತಪಡಿಸಿದರು.

‘ಕಳೆದ ಬಾರಿ ನಡೆದ ಕಾಫಿ ಮೇಳ ಹಾಗೂ ಜೇನು ಮೇಳದ ಮಾದರಿಯಲ್ಲಿ ರಾಜಾಸೀಟ್‌ ಉದ್ಯಾನದಲ್ಲೇ ನಮಗೂ ಅವಕಾಶ ನೀಡಿದ್ದರೆ ಒಂದಿಷ್ಟು ಪ್ರಯೋಜನವಾಗುತ್ತಿತ್ತು. ಆದರೆ, ಬಹುತೇಕ ಪ್ರವಾಸಿಗರು ರಾಜಾಸೀಟ್‌ ನೋಡಿಕೊಂಡು ಹೊರಡುತ್ತಿದ್ದಾರೆ. ಗಾಂಧಿ ಮೈದಾನಕ್ಕೆ ಬರುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವರ್ತಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.