ADVERTISEMENT

ನಾಪೋಕ್ಲು | ಬಿಡುವು ಕೊಟ್ಟ ಮಳೆ: ನಾಟಿ ಕೆಲಸಕ್ಕೆ ಅಣಿಯಾದ ರೈತರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 14:15 IST
Last Updated 13 ಜುಲೈ 2024, 14:15 IST
ನಾಪೋಕ್ಲು ಸಮೀಪದ ಕುಯ್ಯಂಗೇರಿ  ಗ್ರಾಮದಲ್ಲಿ ಭತ್ತದ ಉಳುಮೆ ಕಾರ್ಯದಲ್ಲಿ ಕಾರ್ಮಿಕರೊಬ್ಬರು ತೊಡಗಿರುವುದು.
ನಾಪೋಕ್ಲು ಸಮೀಪದ ಕುಯ್ಯಂಗೇರಿ  ಗ್ರಾಮದಲ್ಲಿ ಭತ್ತದ ಉಳುಮೆ ಕಾರ್ಯದಲ್ಲಿ ಕಾರ್ಮಿಕರೊಬ್ಬರು ತೊಡಗಿರುವುದು.   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಬಿಡುವು ಕೊಟ್ಟು ಮಳೆ ಸುರಿಯುತ್ತಿದ್ದು ಬಿಡುವಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.ಸಮೀಪದ ಕುಯ್ಯಂಗೇರಿಯಲ್ಲಿ ಶನಿವಾರ ಭತ್ತದ ನಾಟಿ ಕಾರ್ಯಕ್ಕಾಗಿ ಗದ್ದೆ ಉಳುಮೆ ಮಾಡುವ ದೃಶ್ಯ ಕಂಡುಬಂತು.

ತಿಂಗಳ ಹಿಂದೆ ಬಿತ್ತನೆ ಮಾಡಲಾಗಿದ್ದು ಸಸಿ ಮಡಿಗಳಿಂದ ಮಹಿಳೆಯರು ಅಗೆ ತೆಗೆದರು.ಗ್ರಾಮದ ರೈತ ಕುಮಾರಪ್ಪ ಅವರ ಗದ್ದೆಯಲ್ಲಿ ನಾಟಿ ಕಾರ್ಯ ಬಿರುಸಿನಿಂದ ಸಾಗಿತು. ಕಾಫಿ ,ಕಾಳು ಮೆಣಸು ಕೃಷಿಯ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿವೆ.ಕೃಷಿಕರು ಅಲ್ಲಲ್ಲಿ ಗದ್ದೆ ಹದ ಮಾಡುವ ಕಾಯಕದಲ್ಲಿ ತೊಡಗಿರುವ ದೃಶ್ಯ ಶನಿವಾರ ಕಂಡು ಬಂತು.ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದಾರೆ.


ಶುಕ್ರವಾರ ಸುರಿದ ಮಳೆಯಿಂದಾಗಿ ಕೆರೆತೋಡುಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಅಲ್ಲಲ್ಲಿ ಭತ್ತದ ಬಿತ್ತನೆ ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದರೆ ಕುಯ್ಯಂಗೇರಿ ಗ್ರಾಮದ ರೈತರು ನಾಟಿ ಕೆಲಸವನ್ನು ಪೂರ್ಣಗೊಳಿಸಿದರು.

ADVERTISEMENT

ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಗದ್ದೆಯನ್ನು ಹಸನುಗೊಳಿಸಿ ಭತ್ತದ ನಾಟಿ ಕೆಲಸವನ್ನು ಪೂರ್ಣಗೊಳಿಸಿದ್ದೇವೆ.ಉತ್ತಮ ಇಳುವರಿಯೂ ಲಭಿಸುತ್ತಿದೆ ಎಂದು ಕುಮಾರಪ್ಪ ಹೇಳಿದರು.ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಟಿಲ್ಲರ್ ಮೂಲಕ ಗದ್ದೆಗಳನ್ನು ಮಾಡುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಅಲ್ಲೊಂದಡೆ ಇಲ್ಲೊಂದೆಡೆ ಎತ್ತುಗಳ ಮೂಲಕ ಉಳುಮೆ ಮಾಡುವ ದೃಶ್ಯಗಳೂ ಕಂಡು ಬಂದವು.ಹೊದ್ದೂರು, ನೆಲಜಿ,ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಭತ್ತದ ಕೃಷಿಗಾಗಿ ಬಿತ್ತನೆ ಮಾಡಲಾಗಿದ್ದು ಸಸಿ ಮಡಿಗಳು ಸಿದ್ಧಗೊಳ್ಳುತ್ತಿವೆ.ಬಲಮುರಿ,ಹೊದ್ದೂರು,ಪಾಲೂರು ಗ್ರಾಮ ವ್ಯಾಪ್ತಿಯಲ್ಲಿ ತಡವಾಗಿ ಬಿತ್ತನೆ ಮಾಡುತ್ತಿದ್ದಾರೆ.ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಮಳೆ ಬಿರುಸುಗೊಂಡು ನಾಟಿ ಕೆಲಸಕ್ಕೆ ಅಡ್ಡಿಯಾಗುತ್ತದೆ.ಬಿರುಸಿನ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿದು ನದಿತಟದ ಗದ್ದೆಗಳಿಗೆ ಸಮಸ್ಯೆಯಾಗುತ್ತದೆ.ಅದಕ್ಕಾಗಿ ಸ್ವಲ್ಪ ತಡವಾಗಿ ನಾಟಿ ಕೈಗೊಳ್ಳುತ್ತಿದ್ದೇವೆ ಎಂದು ಹೊದ್ದೂರಿನ ರೈತ ಚಿಣ್ಣಪ್ಪ ಹೇಳಿದರು.

ಕುಯ್ಯಂಗೇರಿ ಗ್ರಾಮದ ರೈತ ಕುಮಾರಪ್ಪ ಅವರ ಗದ್ದೆಯಲ್ಲಿ ಭತ್ತದ ಸಸಿ ಮಡಿಗಳಿಂದ ಅಗೆ ತೆಗೆಯುವ ಕೆಲಸದಲ್ಲಿ ನಿರತರಾದ ಮಹಿಳೆಯರು.
ನಾಪೋಕ್ಲು ಸಮೀಪದ ಕುಯ್ಯಂಗೇರಿ  ಗ್ರಾಮದ ರೈತ ಕುಮಾರಪ್ಪ ಅವರ ಗದ್ದೆಯಲ್ಲಿ  ಶನಿವಾರ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.