ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಪ್ರತಾಪಸಿಂಹ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ನಡುವೆ ಆರೋಪ, ಪ್ರತ್ಯಾರೋಪಗಳು ಶನಿವಾರ ನಡೆದಿವೆ.
ಪೊನ್ನಂಪೇಟೆಯಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಾಪಸಿಂಹ ಅವರು, ‘ಕಾನೂನು ಸಲಹೆಗಾರರಿಂದಲೇ ಸಿದ್ದರಾಮಯ್ಯ ಅವರಿಗೆ ದುಸ್ಥಿತಿ ಒದಗಿದೆ. ನಿವೇಶನ ಪಡೆದುಕೊಂಡಿರುವುದೇ ಅಕ್ರಮ ಎಂದು ಹೇಳುವ ಕನಿಷ್ಠ ಜ್ಞಾನವೂ ಕಾನೂನು ಸಲಹೆಗಾರರಿಗೆ ಇಲ್ಲ’ ಎಂದು ಆರೋಪಿಸಿದರು.
ಜೊತೆಗೆ, ‘ಒಂದೂವರೆ ವರ್ಷದಲ್ಲಿ ಇಲ್ಲಿನ ಇಬ್ಬರೂ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿಯ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿದರು. ಜಲಜೀವನ್ ಮಿಷನ್‌ನಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ’ ಎಂದು ಹರಿಹಾಯ್ದರು.
ಇವರ ಆರೋಪಕ್ಕೆ ಮಡಿಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ಎ.ಎಸ್.ಪೊನ್ನಣ್ಣ, ‘ಪ್ರತಾಪಸಿಂಹ ರಾಜಕೀಯವಾಗಿ ತಾವು ಎಲ್ಲಿದ್ದೇನೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.
‘ಅವರೊಬ್ಬ ಕೀಳುಮಟ್ಟದ ರಾಜಕಾರಣಿ ಎಂದು ಗುರುತಿಸಿ ಅವರ ಪಕ್ಷದವರೇ ಅವರಿಗೆ ಟಿಕೆಟ್ ಕೊಡದೇ ಸಜ್ಜನರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿದ ಬಿಜೆಪಿ ವರಿಷ್ಠರಿಗೆ ಧನ್ಯವಾದ ಅರ್ಪಿಸುವೆ. ಇಂತಹ ಪ್ರತಾಪಸಿಂಹ ಅವರ ಸಲಹೆಯ ಅಗತ್ಯ ಇಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.