ADVERTISEMENT

ಮೀನು ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದಿಸಿದ ತೇಜಸ್‌ ಯಶಸ್ಸಿನ ಕತೆ

ಸಿ.ಎಸ್.ಸುರೇಶ್
Published 28 ಜೂನ್ 2020, 3:27 IST
Last Updated 28 ಜೂನ್ 2020, 3:27 IST
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಮೀನುಗಾರಿಕೆಯಲ್ಲಿ ಯಶಸ್ಸು ಕಂಡ ಕೃಷಿಕ ತೇಜಸ್ ನಾಣಯ್ಯ
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಮೀನುಗಾರಿಕೆಯಲ್ಲಿ ಯಶಸ್ಸು ಕಂಡ ಕೃಷಿಕ ತೇಜಸ್ ನಾಣಯ್ಯ   

ನಾಪೋಕ್ಲು: ಲಾಕ್‌ಡೌನ್ ಅವಧಿಯಲ್ಲಿ ಹಲವು ರೈತರು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಆದರೆ, ಇಲ್ಲೊಬ್ಬ ರೈತ ಮಾತ್ರ ಆತಂಕದ ಸಮಯದಲ್ಲೂ ಸಂತಸದ ನಗೆ ಬೀರಿದ್ದಾರೆ. ಇವರ ಗೆಲುವಿಗೆ ಕಾರಣವಾದುದು ಮೀನುಗಾರಿಕೆ...

ಮನೆ ಮುಂದಿನ ವಿಶಾಲ ಕೆರೆಯಲ್ಲಿ ಸಾಕಿದ್ದ ಮೀನುಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿರುವ ಸಾಧಕ ರೈತ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ಮಂದ್ರೀರ ತೇಜಸ್ ನಾಣಯ್ಯ.

ಕೃಷಿಕ ತೇಜಸ್ ನಾಣಯ್ಯ ಅವರ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು.

ನಾಲ್ಕು ದಿನಗಳಲ್ಲಿ 6,725 ಕೆ.ಜಿ.ಮೀನುಗಳನ್ನು ಪ್ರತಿ ಕೆ.ಜಿ.ಗೆ ₹ 200ರಂತೆ ಮಾರಾಟ ಮಾಡಿ ₹ 13 ಲಕ್ಷ ಗಳಿಸಿದ್ದಾರೆ. ಮೀನು ಸಾಕಾಣಿಕೆಗೆ ಎರಡು ವರ್ಷಗಳಲ್ಲಿ ಅವರು ಮಾಡಿದ ಖರ್ಚು ₹ 6 ಲಕ್ಷ. ₹ 7 ಲಕ್ಷ ನಿವ್ವಳ ಲಾಭಗಳಿಸಿದ್ದಾರೆ.

ADVERTISEMENT

ಮನೆ ಮುಂಭಾಗವೇ ನಡೆಯುವ ಮೀನಿನ ವ್ಯಾಪಾರ ಕೆಲವೇ ಗಂಟೆಗಳಲ್ಲಿ ಮುಗಿದುಹೋಗುತ್ತದೆ. ಸ್ಥಳೀಯರು ಮಾತ್ರವಲ್ಲದೆ ಮುಖ್ಯ ರಸ್ತೆಯಲ್ಲಿ ಸಾಗುವವರೂ ಮೀನು ಖರೀದಿಸುತ್ತಾರೆ. ಮಡಿಕೇರಿ-ವಿರಾಜಪೇಟೆ ಮುಖ್ಯರಸ್ತೆಯ ಬದಿಯಲ್ಲೇ ಕೆರೆ ಇರುವುದರಿಂದ ಮೀನು ಮಾರಾಟವೂ ಸುಲಭವಾಗಿದೆ. ಮತ್ಸ್ಯ ಕೃಷಿ ಜತೆಗೆ ಕಾಫಿ, ಏಲಕ್ಕಿ ಶುಂಠಿ, ಅಡಿಕೆ ಬೆಳೆಯಲ್ಲೂ ತೇಜಸ್‌ ಅವರು ಯಶಸ್ಸು ಕಂಡಿದ್ದಾರೆ.

ಕೃಷಿಕ ನಾಣಯ್ಯ ಅವರ ಪುತ್ರ ತೇಜಸ್ ನಾಣಯ್ಯ ಅವರುಕಾನೂನು ಪದವೀಧರ. ಅವರು ವಕೀಲ ವೃತ್ತಿ ಬಿಟ್ಟು ಕೃಷಿಯತ್ತ ಆಕರ್ಷಿತರಾದರು. ಹದಿನೈದು ವರ್ಷಗಳ ಹಿಂದೆಯೇ ಮನೆಯ ಮುಂದೆ ದೊಡ್ಡದಾದ ಕೆರೆಯನ್ನು ಮಂದ್ರೀರ ನಾಣಯ್ಯ ನಿರ್ಮಿಸಿದ್ದರು. ಆರಂಭದಲ್ಲಿ ಅರ್ಧ ಎಕರೆ ಇದ್ದ ಕೆರೆ ಕ್ರಮೇಣ ವಿಸ್ತಾರಗೊಂಡಿತು. ತೋಟದ ಹಲವು ಭಾಗಗಳಲ್ಲಿ ಆರು ಕೃಷಿ ಹೊಂಡಗಳೂ ಇವೆ. ಅವುಗಳಲ್ಲೂ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

ರೋಹು, ಕಾಟ್ಲಾ, ಸಾಮಾನ್ಯ ಗೆಂಡೆ ಮೊದಲಾದ ತಳಿಗಳನ್ನು ತೇಜಸ್ ನಾಣಯ್ಯ ಸಾಕುತ್ತಿದ್ದಾರೆ. ಆರಂಭದಲ್ಲಿ ಮಡಿಕೇರಿಯ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ಖರೀದಿಸಿದ್ದರು. ಈಗ ಬೆಂಗಳೂರಿನಿಂದ ಖರೀದಿಸುತ್ತಿದ್ದಾರೆ. ಒಂದು ವರ್ಷಕ್ಕೆ ಒಂದರಿಂದ ಒಂದೂವರೆ ಕೆ.ಜಿ. ಬೆಳೆಯುವ ಮೀನು ಎರಡನೇ ವರ್ಷಕ್ಕೆ ಸರಾಸರಿ ಮೂರು ಕೆ.ಜಿ. ತೂಗುತ್ತವೆ. ಎರಡನೇ ವರ್ಷ ಮೀನು ಹಿಡಿದರೆ ಆರ್ಥಿಕ ಲಾಭ ರೈತನಿಗೆ ಸಿಗುತ್ತದೆ. 10 ಸಾವಿರ ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಡುತ್ತಿದ್ದಾರೆ. ಪ್ರತಿ ಕೆರೆಯಲ್ಲೂ ವಿವಿಧ ತಳಿಯ ಮೀನುಗಳನ್ನು ಬಿಡುತ್ತಿದ್ದಾರೆ. ಇಲಾಖೆಯಿಂದ ಲಭಿಸುವ ಸಣ್ಣ ಮರಿಗಳನ್ನು ತಂದು ಸಣ್ಣ ಕೃಷಿ ಹೊಂಡದಲ್ಲಿ ಬೆಳೆಸಿ ಬಳಿಕ ಇತರ ಹೊಂಡಗಳಿಗೆ ವರ್ಗಾವಣೆ ಮಾಡುತ್ತಾರೆ.

ಮೀನು ಮರಿಗಳ ಬಿತ್ತನೆಗೂ ಮುನ್ನ ಕೆರೆಯಲ್ಲಿ ಬೆಳೆಯುವ ಕಳೆ ಹಾಗೂ ಅನಗತ್ಯ ಜೀವಿಗಳನ್ನು ನಿರ್ಮೂಲನೆ ಮಾಡಬೇಕು. ಸುಣ್ಣ ಹಾಗೂ ಸೆಗಣಿ ಸ್ಲರಿಯನ್ನು ಹಾಕಬೇಕು. ತೇಜಸ್ ನಾಣಯ್ಯ ಅವರು ಈ ಮಾಹಿತಿ ಆಧರಿಸಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

ತೇಜಸ್ ಅವರು ಕಾಫಿ, ಏಲಕ್ಕಿ, ಅಡಿಕೆ ಬೆಳೆಗಳನ್ನು ಮಿಶ್ರ ಬೇಸಾಯ ಪದ್ಧತಿಯಲ್ಲಿ ಬೆಳೆದು ತಾಲ್ಲೂಕು ಮಟ್ಟದ ಯುವಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೀನುಗಳ ಬೆಳವಣಿಗೆಗೆ ಪೂರಕವಾಗಿ ತೌಡು, ನುಚ್ಚು, ಕಡಲೆ ಹಿಂಡಿ ಬಳಕೆ ಮಾಡಬಹುದು. ಆದರೆ, ಅವುಗಳು ದುಬಾರಿ. ಕಡಿಮೆ ಖರ್ಚಿನಲ್ಲಿ ರೈತರು ಅಧಿಕ ಲಾಭ ಪಡೆಯುವತ್ತ ಗಮನ ಹರಿಸಬೇಕು ಎಂಬುದು ಅವರ ಸಲಹೆ.

ಮೀನು ಸಾಕಾಣೆಗೆ ಪೂರಕವಾಗಿ ಸೆಗಣಿ ಗೊಬ್ಬರ ಅವರಲ್ಲೇ ಲಭ್ಯವಿದೆ. ಕೋಳಿ ಗೊಬ್ಬರವೂ ಸುಲಭವಾಗಿ ಲಭಿಸುವುದರಿಂದ ಮೀನುಗಳಿಗೆ ಆಹಾರ ಪೂರೈಕೆಯಲ್ಲಿ ಕೊರತೆ ಆಗದು. ಕೆಲವು ಹಕ್ಕಿಗಳೂ ಮೀನುಗಳಿಗೆ ಕಂಟಕವಾಗಿದ್ದು, ಈ ಬಗ್ಗೆ ನಿಗಾ ವಹಿಸಬೇಕು ಎನ್ನುತ್ತಾರೆ ತೇಜಸ್ ನಾಣಯ್ಯ.

ಮೀನು ಖರೀದಿಗಾಗಿ ಮಳೆಯಲ್ಲೂ ಕಾದು ನಿಂತಿರುವ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.